ವ್ಯಕ್ತಿ ಯಶಸ್ಸಿಗೆ ಕಠಿಣ ಪರಿಶ್ರಮವೊಂದೇ ದಾರಿ
ಕ.ಪ್ರ. ವಾರ್ತೆ , ತುಮಕೂರು , ಜ. 9
ಯಶಸ್ಸಿಗೆ ಕಠಿಣ ಪರಿಶ್ರಮವೊಂದೇ ದಾರಿ ಎಂದು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಮುಖ್ಯಸ್ಥ ಸ್ವಾಮಿ ವೀರೇಶಾನಂದ ಸರಸ್ವತಿ ಕಿವಿಮಾತು ಹೇಳಿದರು.
ಕೊರಟಗೆರೆಯ ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಸಮಿತಿ, ವಾಸವಿ ಮಹಿಳಾ ಮಂಡಳಿ ಹಾಗೂ ಗೊರವನಹಳ್ಳಿಯ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಕೊರಟಗೆರೆಯ ಕನ್ನಿಕಾ ಮಹಲ್ನಲ್ಲಿ ಹಮ್ಮಿಕೊಂಡಿದ್ದ ಯುವಜನ ಜಾಗೃತಿ ಶಿಬಿರದ ಸಾನ್ನಿಧ್ಯ ವಹಿಸಿ ಅವರು ವಿಶೇಷ ಉಪನ್ಯಾಸ ನೀಡಿದರು.
ಮಾನವನ ಬದುಕಿನಲ್ಲಿ ಹಿಂಜರಿಕೆ: ಛಲದ ಕೊರತೆ, ಸೋಮಾರಿತನ, ಕೀಳರಿಮೆ ಹಾಗೂ ಇತರರಿಂದ ಅಪಹಾಸ್ಯಕ್ಕೆ ಈಡಾಗಬಹುದೆಂಬ ಭಯದಿಂದ ಪ್ರಯತ್ನಶೀಲತೆ ಕುಂಠಿತವಾಗುತ್ತದೆ. ನಕಾರಾತ್ಮಕ ಭಾವನೆಗಳನ್ನು ಅಂಟುರೋಗವೆಂದೆಣಿಸಿ ಹೊಸಕಿ ಹಾಕಬೇಕು ಎಂದರು.
ಮುಖಸ್ತುತಿಗೆ ಬಗ್ಗದಿರೋಣ: ಹೊಗಳಿಕೆ ಹಾಗೂ ತೆಗಳಿಕೆಗಳಿಗೆ ಗಮನಕೊಡದೆ ನಮ್ಮ ಆದರ್ಶವನ್ನು ಸಾಕಾರಗೊಳಿಸಿಕೊಳ್ಳಲು ಕಠಿಣ ಪರಿಶ್ರಮವು ಅನಿವಾರ್ಯ ಎಂದು ತಿಳಿಸಿದರು. ಸ್ವಾಮಿ ವಿವೇಕಾನಂದರು ಮಾನವನು ತನ್ನ ಜೀವನದ ತಪ್ಪುಗಳಿಂದ ಹಾಗೂ ಸೋಲುಗಳಿಂದ ಪಾಠ ಕಲಿಯಬೇಕಿದೆ ಎಂದಿದ್ದಾರೆ.
ಅವನು ತನ್ನ ಕನಸಿನೊಂದಿಗೆ ಜೀವಿಸಿ ಮತ್ತು ಕನಸನ್ನು ಬೆನ್ನು ಹತ್ತಿ ಹೋಗಬೇಕು, ಮಾರ್ಗ ಮಧ್ಯದಲ್ಲಿ ನಿರಾಶೆ, ಖಿನ್ನತೆಗಳು ಸಹಜವಾಗಿದ್ದು ಅವುಗಳಿಂದ ಧೃತಿಗೆಡಬಾರದು ಎಂದು ಎಚ್ಚರಿಸಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.
ದೌರ್ಬಲ್ಯ ಮೆಟ್ಟಿ ನಿಲ್ಲಬೇಕು: ಅಂಧನಾಗಿದ್ದ ಜಾನ್ ಮಿಲ್ಟನ್ ಸಾಹಿತ್ಯದಲ್ಲಿ, ಕಿವುಡನಾಗಿದ್ದ ಬಿಥೋವನ್ ಸಂಗೀತದಲ್ಲಿ, ಚರ್ಮವ್ಯಾಧಿ ಪೀಡಿತನಾಗಿದ್ದ ಚಕ್ರವರ್ತಿ ನೆಪೊಲಿಯನ್ ಮತ್ತು ಮೂರ್ಛೆ ರೋಗಿಯಾಗಿದ್ದ ಜೂಲಿಯಸ್ ಸೀಜರ್ ಇತಿಹಾಸವನ್ನು ನಿರ್ಮಿಸಿದ್ದಾರೆ. ಮಾನವನ ಮೂಲಭೂತ ಹಕ್ಕಾದ ಸ್ವಾತಂತ್ರ್ಯವನ್ನು ಪರಿಶ್ರಮದಿಂದ ಪಡೆದು ಅದರ ಅನುಕೂಲವನ್ನು ವೈಯಕ್ತಿಕ ಹಾಗೂ ಸಾಮಾಜಿಕ ಬದುಕಿನಲ್ಲಿ ಸಾಕಾರಗೊಳಿಸಲು ಕಲಿಯಬೇಕು ಎಂದು ಸ್ವಾಮೀಜಿ ತಿಳಿಸಿದರು.
ಶ್ರೀಕ್ಷೇತ್ರ ಸಿದ್ಧರಬೆಟ್ಟದ ರಂಭಾಪುರಿ ಶಾಖಾಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟನೆ ನೆರವೇರಿಸಿದರು.
ಕನ್ನಿಕಾ ಮಹಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ಕುಮಾರ್, ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯದ ಪ್ರಸನ್ನಕುಮಾರ್, ಪ್ರೊ. ಶಿವರಾಜು, ಹರೀಶ್ ಮತ್ತು ಅನಿತಾ ಇದ್ದರು. ಗೌತಮ್ ಸ್ವಾಗತಿಸಿದರು. ಸಿದ್ದೇಶ್ವರ್ ನಿರೂಪಿಸಿದರು. ನರಸಿಂಹಲು ವಂದಿಸಿದರು.