12 ರಂದು ಹಿಂದುಳಿದ ಜಾತಿಗಳ ಒಕ್ಕೂಟದ ದಶಮಾನೋತ್ಸವ
ಕ.ಪ್ರ.ವಾರ್ತೆ , ತುಮಕೂರು , ಜ.10
ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ದಶಮಾನೋತ್ಸವ ಮತ್ತು ಜಾಗೃತಿ ಸಮಾವೇಶ ಜ.12 ರಂದು ಬೆಂಗಳೂರಿನಲ್ಲಿ ನಡೆಯಲಿದ್ದು ಈ ಸಮಾವೇಶಕ್ಕೆ ತಾಲೂಕಿನ ಹಿಂದುಳಿದ ಸಮುದಾಯಗಳ
ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಾಲೂಕು ಕುರುಬ ಸಂಘದ ಅಧ್ಯಕ್ಷ ಮೈಲಾರಪ್ಪ ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ. ಅವರು ಪಟ್ಟಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜ.12 ರಂದು ಬೆಂಗಳೂರು ನೆಲಮಂಗಲ ನೈಸ್ ರಸ್ತೆ ಪಕ್ಕದ ಮಾದಾವರ ಗ್ರಾಮದ ಬಳಿ ಈ ಸಮಾವೇಶ ನಡೆಯುತ್ತಿದ್ದು ತಾಲೂಕಿನ ಎಲ್ಲಾ ಹಿಂದುಳಿದ ವರ್ಗಗಳ ಸಮುದಾಯದವರು ಭಾಗವಹಿಸುತ್ತಿದ್ದು ತಾಲೂಕಿನಿಂದ ಭಾಗವಹಿಸುವವರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಸಮಾವೇಶವನ್ನು ಹಿಂದುಳಿದ ವರ್ಗಗಳ ನಾಯಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹಾಗೂ ರಾಜ್ಯದ ಮಂತ್ರಿಗಳು ಮತ್ತು ಶಾಸಕರು, ಹಿಂದುಳಿದ ವರ್ಗಗಳ ಮುಖಂಡರು ಭಾಗವಹಿಸಲಿದ್ದಾರೆಂದು ತಿಳಿಸಿದರು.
ಸಭೆಯಲ್ಲಿ ತಾಲೂಕು ಸಾದರ ಸಮಾಜದ ಮುಖಂಡ ಎ.ಡಿ. ಬಲರಾಮಯ್ಯ, ಬಲಿಜ ಸಮುದಾಯದ ಮುಖಂಡ ಮಯೂರ ಗೋವಿಂದರಾಜು, ಯಾದವ ಸಮುದಾಯದ ಮುಖಂಡ ರಂಗನಾಥ್ ಮಾತನಾಡಿ ಸಮಾವೇಶದಲ್ಲಿ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಮುದಾಯಗಳ ಸಮಸ್ಯೆಗಳ ಬಗ್ಗೆ ಹಾಗೂ ಬೇಡಿಕೆಗಳ ಬಗ್ಗೆ ಚರ್ಚಿಸುವ ಮೂಲಕ ಜಾಗೃತಿ ಮೂಡಿಸಿ ಹಿಂದುಳಿದ ವರ್ಗಕ್ಕೆ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಮೀಸಲಾತಿ ದೊರೆಕಿಸಲು ಹೋರಾಟ ಮಾಡಲು ಹಾಗೂ ರಾಜ್ಯದಲ್ಲಿ ಜಾತಿಗಣತಿ ಮಾಡಬೇಕಾಗಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ವಿವಿಧ ಹಿಂದುಳಿದ ವರ್ಗಗಳ ಮುಖಂಡರಾದ ಕ್ಯಾತಪ್ಪ, ಸುಬ್ಬಣ್ಣ, ನಾಗಭೂಷಣ್, ಮಂಜುನಾಥ್, ರಾಮಯ್ಯ, ಹನುಮಂತರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.