ಅಂಗನವಾಡಿ ಕೇಂದ್ರಗಳ ಖಾಸಗೀಕರಣಕ್ಕೆ ವಿರೋಧ
ಶಿರಾ: ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳನ್ನ ಖಾಸಗೀಕರಣ ಮಾಡಲು ತಂದಿರುವ ಕಾಯ್ದೆಯನ್ನು ವಿರೋಧಿಸಿ ಇದನ್ನು ತಕ್ಷಣ ಕೈಬಿಡುವಂತೆ ಒತ್ತಾಯಿಸಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಗರದಲ್ಲಿ ಬೃಹತ್ ಜೈಲ್ ಬರೋ ಚಳವಳಿ ನಡೆಸಿದರು.
ತಮ್ಮ ಹಲವು ಬೇಡಿಕೆಗಳ ಈಡೇರಿಕೆಗಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ಜಾಥಾ ನಡೆಸಿದ ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಅಂಗನವಾಡಿ ನೌಕರರು ಪ್ರವಾಸಿ ಮಂದಿರದ ಸರ್ಕಲ್ನಲ್ಲಿ ಜಮಾಯಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಘೋಷಣೆ ಕೂಗಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡುತ್ತ ಸಂಘಟನೆಯ ತಾಲೂಕು ಅಧ್ಯಕ್ಷೆ ಎಚ್.ಕೆ.ರಾಜಮ್ಮ ಅವರು ನಮ್ಮ ಹಲವು ಬೇಡಿಕೆಗಳ ಈಡೇರಿಕೆಗಾಗಿ ಎ.ಐ.ಟಿ.ಯು.ಸಿ. ನೇತೃತ್ವದಲ್ಲಿ ಜೈಲ್ಭರೋ ಚಳವಳಿ ಹಮ್ಮಿಕೊಂಡಿದ್ದು, ಅಂಗನವಾಡಿ ಕೇಂದ್ರಗಳನ್ನು ಖಾಸಗೀಕರಣಗೊಳಿಸಬಾರದು, ಅಂಗನವಾಡಿ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಸಿ ಮತ್ತು ಡಿ ಗ್ರೂಪ್ ನೌಕರರೆಂದು ಪರಿಗಣಿಸಬೇಕು. ಕನಿಷ್ಠ ವೇತನ ಜಾರಿಗೊಳಿಸಿ 15000 ರು. ಅಂಗನವಾಡಿ ಕಾರ್ಯಕರ್ತೆಯರಿಗೆ 10000 ರು., ಸಹಾಯಕಿಯರಿಗೆ ಮಾಸಿಕ ಸಂಬಳ ನೀಡಬೇಕು, ಪಿಂಚಣಿ ಹೆಚ್ಚಳ ಮಾಡಬೇಕು. ಇ.ಎಸ್.ಐ. ಮತ್ತು ಪಿ.ಎಫ್ ಜಾರಿಗೊಳಿಸಬೇಕು.
ಇಡಿಗಂಟು ನಿಧಿಯನ್ನು 3 ಲಕ್ಷ ರು. ಕಾರ್ಯಕರ್ತೆಯರಿಗೆ ಮತ್ತು 2 ಲಕ್ಷ ರು. ಸಹಾಯಕಿಯರಿಗೆ ಕೊಡಬೇಕು. ಈ ಎಲ್ಲಾ ಬೇಡಿಕೆಗಳನ್ನು ರಾಜ್ಯ ಸರ್ಕಾರ ಶೀಘ್ರವಾಗಿ ಈಡೇರಿಸಬೇಕೆಂದು ನಾವು ಜೈಲ್ಭರೋ ಚಳವಳಿ ಹಮ್ಮಿಕೊಂಡಿದ್ದು, ಕರ್ನಾಟಕ ಸರ್ಕಾರ ಮಹಿಳಾ ಮತ್ತು ಕಲ್ಯಾಣ ಇಲಾಖಾ ಸಚಿವರು ತಕ್ಷಣ ನಮ್ಮ ಬೇಡಿಕೆಗಳನ್ನು ಪರಿಗಣಿಸಬೇಕೆಂದು ಒತ್ತಾಯಿಸಿದರು.
ಜೈಲ್ಭರೋ ಚಳವಳಿಯ ನೇತೃತ್ವವನ್ನು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಅಧ್ಯಕ್ಷೆ ಎಚ್.ಕೆ.ರಾಜಮ್ಮ, ಪ್ರಧಾನ ಕಾರ್ಯದರ್ಶಿ ಎಚ್.ಎನ್. ಕಲಾವತಮ್ಮ, ಖಜಾಂಚಿ ಮೀನಾಕ್ಷಿ, ವನಜಾಕ್ಷಿ, ಲೀಲಾವತಿ, ಶಶಿಕಲಾ, ಸರಳ, ಪುಟ್ಟಮ್ಮ ಸೇರಿದಂತೆ ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ನಗರದ ಪ್ರವಾಸಿ ಮಂದಿರದ ಸರ್ಕಲ್ನಲ್ಲಿ ರಸ್ತೆ ತಡೆ ನಡೆಸಿ ಮಾನವ ಸರಪಳಿ ನಿರ್ಮಿಸಿದ ನಂತರ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಗೊಳಿಸಿದರು.