ಜೀವಾಮೃತ ತಯಾರಿಕೆ ಬಗ್ಗೆ ತರಬೇತಿ ಕಾರ್ಯಕ್ರಮ
ತಿಪಟೂರು: ತಾಲೂಕಿನ ಬಿದರೆಗುಡಿ ಕಾವಲ್‌ನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ದನ ಸಂಘದ ವತಿಯಿಂದ ತೆಂಗಿನಲ್ಲಿ ಸುಧಾರಿತ ಬೇಸಾಯ ಕ್ರಮಗಳು ಮತ್ತು ಮರ ಹತ್ತುವ ಸಾಧನ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರೈತರಿಗೆ ಕೆವಿಕೆಯ ಮಣ್ಣು ವಿಷಯ ತಜ್ಞೆ ಡಾ.ಬಿ. ಮಮತಾ ಜೀವಾಮೃತ ತಯಾರಿಕೆ ಪದ್ಧತಿ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸುತ್ತಾ ಒಂದು ಎಕರೆ ಪ್ರದೇಶಕ್ಕೆ ಸುಮಾರು 200ಲೀ.ನ ದ್ರಾವಣವನ್ನು ತಯಾರಿಸಬೇಕು. 200ಲೀ. ದ್ರಾವಣ ತಯಾರಿಸಲು 10 ಕೆ.ಜಿ.ಹಸಿ ಸಗಣಿ, 15ಲೀ ಗಂಜಲು, 6 ಕೆ.ಜಿ. ಪುಡಿ ಮಾಡಿದ ಬೆಲ್ಲ, 2ಕೆ.ಜಿ. ದ್ವಿದಳ ಧಾನ್ಯದ ಹಿಟ್ಟು ಬೇಕಾಗುತ್ತದೆ. ಮೇಲಿನ ಎಲ್ಲಾ ಸಾಮಗ್ರಿಗಳನ್ನು 200ಲೀ. ನೀರಿನಲ್ಲಿ ಮಿಶ್ರಣ ಮಾಡಬೇಕು. ನಂತರ ದಿನಕ್ಕೆ 3 ಬಾರಿ ತಿರುವಿ ಮುಚ್ಚಿಡಬೇಕು. ಆ ದ್ರಾವಣವನ್ನು 7ದಿನದ ನಂತರ ಕಾಲುವೆ ಮೂಲಕ ಅಥವಾ ಹನಿ ನೀರಾವರಿ ಮೂಲಕ ಎಲ್ಲಾ ಬೆಳೆಗಳಿಗೆ ಗಿಡದ ಮೇಲೆ ಸಿಂಪಡಿಸಬಹುದೆಂದು ವಿವರಿಸಿದರು. ಕೇಂದ್ರದ ವಿಸ್ತರಣೆ ವಿಷಯ ತಜ್ಞ ಡಾ.ಎಂ.ಎಚ್. ಶಂಕರ ರೈತರು ಸಾವಯವ ಕೃಷಿಗೆ ಹೆಚ್ಚು ಆಸಕ್ತಿ ತೋರಿಸುವುದರಿಂದ ಇಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ ಎಂದರು. ಪ್ರಾತ್ಯಕ್ಷಿಕೆಯಲ್ಲಿ ಕೇಂದ್ರದ ಸುನೀಲ್ ಸೇರಿದಂತೆ 20ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.