ನಾಲ್ವರಿಗೆ ವಿವಿ ಡಾಕ್ಟರೇಟ್ 'ಗೌರವ'
ತುಮಕೂರು: ಸೂಲಗಿತ್ತಿ ನರಸಮ್ಮ, ಡಾ. ಪಿ.ಎಸ್. ಶಂಕರ್, ಎಚ್.ಜಿ. ಗೋವಿಂದೇಗೌಡ, ಶಾಯಿಸ್ತಾ ಯೂಸುಫ್ ಅವರಿಗೆ ತುಮಕೂರು ವಿವಿ ಗೌರವ ಡಾಕ್ಟರೇಟ್ ಲಭಿಸಿದೆ.
ತುಮಕೂರು ವಿಶ್ವವಿದ್ಯಾನಿಲಯವು 2013-14 ನೇ ಸಾಲಿನ ಏಳನೇ ವಾರ್ಷಿಕ ಘಟಿಕೋತ್ಸವದ ಸಂದರ್ಭದಲ್ಲಿ ಈ ನಾಲ್ವರು ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನರಸಮ್ಮ ಸೂಲಗಿತ್ತಿ ಎಂದೇ ಪ್ರಸಿದ್ಧರು. ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶದ ಸಾವಿರಾರು ಗರ್ಭಿಣಿಯರಿಗೆ ಸುಸೂತ್ರವಾಗಿ ಹೆರಿಗೆ ಮಾಡಿಸಿ ಸಾವಿರ ಮಕ್ಕಳ ತಾಯಿ ಎಂಬ ಬಿರುದು ಪಡೆದವರು. ತಮ್ಮ 22 ನೇ ವಯಸ್ಸಿನಿಂದ ಪ್ರಸೂತಿ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡ ನರಸಮ್ಮನವರಿಗೆ ಈಗ 93ರ ಹರೆಯ. ಅವರು ಈಗಾಗಲೇ ಭಾರತ ಸರಕಾರದ ವಯೋಶ್ರೇಷ್ಠ ಸನ್ಮಾನ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದೇವರಾಜು ಅರಸು ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಮತ್ತು ಇಂದಿರಾಗಾಂಧಿ ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ಡಾ. ಪಿ ಎಸ್ ಶಂಕರ್: ಮೂಲತಃ ಹಾವೇರಿ ಜಿಲ್ಲೆಯ ಡಾ. ಪಿ ಎಸ್. ಶಂಕರ್ ಅವರು ದೇಶದ ಅನೇಕ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ, ವೈದ್ಯರಾಗಿ, ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸಾಧನೆಗಳನ್ನು ಮಾಡಿದವರು. ಜೊತೆಗೆ ವಿಜ್ಞಾನ ಮತ್ತು ವೈದ್ಯ ವಿಜ್ಞಾನಕ್ಕೆ ಸಂಬಂಧಿಸಿದಂತೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅನೇಕ ಪುಸ್ತಕಗಳನ್ನು ಬರೆದವರು. 80ರ ದಶಕದಲ್ಲಿಯೇ ಎಚ್ಐವಿ ಕುರಿತು ಕನ್ನಡದಲ್ಲಿ ಪುಸ್ತಕ ರಚಿಸಿದ ಇವರು ವೈದ್ಯಕೀಯ ಶಾಸ್ತ್ರವನ್ನು ಜನಸಾಮಾನ್ಯರ ದೃಷ್ಟಿಕೋನದಿಂದ ಅಧ್ಯಯನ ಮಾಡಿದವರು. ಜನಸಾಮಾನ್ಯರಿಗಾಗಿ 10 ಸಾವಿರಕ್ಕಿಂತಲೂ ಅಧಿಕ ಉಪನ್ಯಾಸ ಕೊಟ್ಟವರು. ಜನಪ್ರಿಯ ವಿಜ್ಞಾನದ ಬೆಳವಣಿಗೆಗೆ ಮಹತ್ವದ ಕೊಡುಗೆ ಕೊಟ್ಟವರು.
ಮಲೆನಾಡ ಗಾಂಧಿ ಎಚ್ ಜಿ ಗೋವಿಂದೇ ಗೌಡ: ಬ್ರಿಟಿಷರ ವಿರುದ್ಧ ನಡೆದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ, ಅನಂತರದಲ್ಲಿ ರಾಜ್ಯ ರಾಜಕಾರಣವನ್ನು ಪ್ರವೇಶಿಸಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವರಾಗಿ ಕರ್ನಾಟಕ ರಾಜ್ಯದಲ್ಲಿ ಅಪೂರ್ವ ಸಾಧನೆಗಳನ್ನು ಮಾಡಿದವರು ಎಚ್. ಜಿ. ಗೋವಿಂದೇ ಗೌಡರು. ಗಾಂಧೀವಾದಿಯಾಗಿ, ಕಡಿದಾಳ್ ಮಂಜಪ್ಪರಿಂದ ರಾಜಕೀಯ ದೀಕ್ಷೆಯನ್ನು ಪಡೆದ ಗೌಡರು ಮಲೆನಾಡ ಗಾಂಧಿ ಎಂದೇ ಪ್ರಸಿದ್ಧರಾದವರು. ಪ್ರಾಮಾಣಿಕ ಮತ್ತು ನಿಷ್ಕಳಂಕ ರಾಜಕಾರಣಿಯಾದ ಗೋವಿಂದೇ ಗೌಡರು ಶಿಕ್ಷಣ ಸಚಿವರಾಗಿ ಸುಮಾರು 2ಲಕ್ಷ ಅಧ್ಯಾಪಕರನ್ನು ಮೊತ್ತ ಮೊದಲ ಬಾರಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಮೂಲಕ ನೇಮಕಾತಿ ಮಾಡಿದ ಖ್ಯಾತಿಯನ್ನು ಪಡೆದವರು.
ಶಾಯಿಸ್ತಾ ಯೂಸುಫ್: ಮೂಲತಃ ತುಮಕೂರಿನವರಾದ ಶಾಯಿಸ್ತಾ ಯೂಸುಫ್ ಇವರು, ತತ್ವಜ್ಞಾನ ಮತ್ತು ಉರ್ದು ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರು. ಉರ್ದು ಕವಿಯಾಗಿ ಪ್ರಸಿದ್ಧರು. ಗುಲ್-ಇ-ಖುದ್ರು, ಸೂನಿ ಪರ್ಚಿಯನ್, ಮೊಹಮೂದ್ ಆಯಾಜ್ ಮೊದಲಾದ ಕೃತಿಗಳನ್ನು ರಚಿಸಿರುವ ಶಾಯಿಸ್ತಾ ಅವರು ಅಕ್ಕಮಹಾದೇವಿಯ ವಚನಗಳನ್ನು ಉರ್ದುವಿಗೆ ಭಾಷಾಂತರಿಸಿದ್ದಾರೆ. ಜಗತ್ತಿನ ಶ್ರೇಷ್ಠ ಕತೆಗಾರ ಸಾದಾತ್ ಹಸನ್ ಮಾಂಟೋ ಅವರ ನಿಕಟವರ್ತಿಯೂ ಮತ್ತು ಮಾಂಟೋ ಸಾಹಿತ್ಯದ ಅಧ್ಯಯನಕಾರರೂ ಆಗಿರುವ ಶಾಯಿಸ್ತಾ ಅವರು ಗಜಲ್ ಹಾಗೂ ಶಾಯಿರಿ ರಚನೆಯಲ್ಲೂ ನಿಪುಣರಾಗಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣದ ದೃಷ್ಟಿಯಿಂದ ಅನೇಕ ಮಹತ್ವದ ಕೆಲಸಗಳನ್ನು ಮಾಡುತ್ತಿರುವ ಇವರು ಸೂಫಿ ಇಂಟರ್ನ್ಯಾಷನಲ್ ಸಂಸ್ಥೆಯ ಮೂಲಕ ಭಾರತದ ಜಾತ್ಯತೀತ ಪರಂಪರೆಯನ್ನು ಎತ್ತಿ ಹಿಡಿಯುವ ಅನೇಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಕರ್ನಾಟಕ ಉರ್ದು ಸಾಹಿತ್ಯ ಅಕಾಡೆಮಿಯಿಂದ ಎರಡು ಬಾರಿ ಪ್ರಶಸ್ತಿ ಗಳಿಸಿದ್ದಾರೆ.