ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಿಎಸ್‌ವೈ ಕೈ ಬಲಪಡಿಸುವುದೇ ಮುಖ್ಯ ಗುರಿ: ಲೋಕೇಶ್ವರ

Vishwanath S
Updated On : 11 Jan 2014, 1:17 am

ಕ.ಪ್ರ.ವಾರ್ತೆ , ತಿಪಟೂರು , ಜ.10
ರಾಜ್ಯ ಬಿಜೆಪಿ ಪ್ರಶ್ನಾತೀತ ನಾಯಕ ಯಡಿಯೂರಪ್ಪನವರ ಕೈಬಲಪಡಿಸಬೇಕೆಂದರೆ ನಾವೆಲ್ಲಾ ಒಗ್ಗಟ್ಟಾಗಿ ಬಿಜೆಪಿ ಪಕ್ಷಕ್ಕೆ ಶಕ್ತಿ ತುಂಬುವುದೇ ಪ್ರಮುಖ ಗುರಿಯಾಗಿರಬೇಕೆಂದು ತಾಲೂಕಿನ ಬಿಜೆಪಿ ಮುಖಂಡ ಲೋಕೇಶ್ವರ ಕರೆ ನೀಡಿದರು.
ಪಟ್ಟಣದ ಶ್ರೀ ಗುರುಲೀಲಾ ಕಲ್ಯಾಣ ಮಂಟಪದಲ್ಲಿ ಇಂದು ಕಟ್ಟ ಕಡೆಯ ಕೆಜೆಪಿ ಸಮಾವೇಶ ನಡೆಸುವ ಮೂಲಕ ಕಾರ್ಯಕರ್ತರು, ಅಭಿಮಾನಿದಳ ಜೊತೆ ಅಭಿಪ್ರಾಯ ಹಂಚಿಕೊಂಡ ಅವರು ಬಿಜೆಪಿಗೆ ಸೇರುತ್ತಿರುವ ಈ ಸಂದರ್ಭದಲ್ಲಿ ಯಾರೂ ಯಾವುದೇ ಗೊಂದಲಗಳಿಗೆ ಅವಕಾಶ ನೀಡಬೇಡಿ. ಬಿಜೆಪಿ ಕಾರ್ಯಕರ್ತರ ಜೊತೆ ಹೊಂದಾಣಿಕೆಗೆ ಪ್ರಾಮುಖ್ಯತೆ ನೀಡಿ. ನಮ್ಮೆಲ್ಲರ ನಾಯಕರಾಗಿರುವ ಯಡಿಯೂರಪ್ಪನವರ ಶಕ್ತಿ ಏನೆಂಬುದನ್ನು ಮತ್ತೊಮ್ಮೆ ತೋರಿಸಬೇಕಾದರೆ ರಾಜ್ಯದಲ್ಲಿ ಲೋಕಸಭೆಗೆ ಬಿಜೆಪಿಯಿಂದ ಕನಿಷ್ಠ 20 ಅಭ್ಯರ್ಥಿಗಳನ್ನು ಗೆಲ್ಲಿಸಬೇಕಾಗಿದೆ. ದೇಶದಲ್ಲಿ ಉಂಟಾಗಿರುವ ನಾನಾ ರೀತಿಯ ಬಿಕ್ಕಟ್ಟುಗಳನ್ನು ಪರಿಹರಿಸಲು ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸುವ ಛಲ ತೊಟ್ಟಿರುವ ಯಡಿಯೂರಪ್ಪನವರ ಕೈಬಲಪಡಿಸುವ ಕೆಲಸವನ್ನು ಈ ಕ್ಷಣದಿಂದಲೇ ಆರಂಭಿಸಲು ಮುಂದಾಗಬೇಕೆಂದು ಲೋಕೇಶ್ವರ ಕರೆ ನೀಡಿದರು.
ಬಿಜೆಪಿಗೆ ಪರ್ಯಾಯವಲ್ಲ: ಮುಂದುವರಿದು ಮಾತನಾಡಿದ ಅವರು ನಾನು ಸರ್ಕಾರಿ ಉದ್ಯೋಗ ಬಿಟ್ಟು ತಾಲೂಕಿನ ಜನಸೇವೆ ಮಾಡಲು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಾವಿರಾರು ಕಾರ್ಯಕರ್ತರು ನನಗೆ ದುಡಿದಿದ್ದೀರಿ. ಆದರೆ ಇಂದು ಕೆಜೆಪಿ ಪಕ್ಷ ಬಿಜೆಪಿಯೊಂದಿಗೆ ವಿಲೀನಗೊಂಡಿರುವುದರಿಂದ ನನ್ನನ್ನು ಬೆಂಬಲಿಸಿದ ಕೆಲವರಿಗೆ ತಕ್ಷಣಕ್ಕೆ ಬಿಜೆಪಿಗೆ ಬರಲು ಮನಸ್ಸು ಒಗ್ಗದಿರುವುದರಿಂದ ನಾನು ಯಡಿಯೂರಪ್ಪ ಅಭಿಮಾನಿ ವೇದಿಕೆಯನ್ನು ಹುಟ್ಟು ಹಾಕಿದ್ದು, ಇದರ ಅಡಿಯಲ್ಲಿ ಅಂತಹ ಕಾರ್ಯಕರ್ತರಿಗೆ ಮತ್ತು ಅಭಿಮಾನಿಗಳಿಗೆ ಸ್ಪಂದಿಸುವ ಸಲುವಾಗಿ ಮಾತ್ರ ಈ ವೇದಿಕೆ ಹುಟ್ಟು ಹಾಕಿದ್ದೇನೆ. ಈ ವೇದಿಕೆ ಯಾವ ಕಾರಣಕ್ಕೂ ತಾಲೂಕು ಬಿಜೆಪಿ ಘಟಕಕ್ಕೆ ಪರ್ಯಾಯ ಅಲ್ಲ ಎಂದು ಸಭೆಯಲ್ಲಿ ಲೋಕೇಶ್ವರ ಸ್ಪಷ್ಟಪಡಿಸಿದರು. ಈವರೆಗೂ ತಾಲೂಕಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅನ್ಯಾಯ ಮತ್ತು ಜನವಿರೋದಿ ಕೆಲಸಕಾರ್ಯಗಳನ್ನು ವಿರೋಧಿಸಿ ಜನತೆಗೆ ಹೇಗೆ ಸ್ಪಂದಿಸುತ್ತಿದ್ದೇನೊ ಹಾಗೆಯೇ ಮುಂದೆಯೂ ಎಲ್ಲರಿಗೂ ಸ್ಪಂದಿಸುವುದಾಗಿ ತಿಳಿಸಿದರು.
ನಾವೆಲ್ಲಾ ನಾಯಕ ಲೋಕೇಶ್ವರ ಹಿಂದೆ: ತಾಲೂಕು ಕೆಜೆಪಿ ಮಾಜಿ ನಾಯಕರುಗಳಾದ ಆಲದಹಳ್ಳಿ ವಿಶ್ವಣ್ಣ, ಕರಡಿ ದೇವರಾಜು, ಕಾಮಗೊಂಡನಹಲ್ಳಿ ಶಿವಣ್ಣ, ಮುನ್ನಾವರ್, ನಹೀಂಪಾಶ, ಚಿಕ್ಕಸ್ವಾಮಿಗೌಡ, ರಂಗಾಪುರ ದೇವರಾಜು, ಕೆ.ಆರ್.ಸಿದ್ದರಾಮಣ್ಣ, ಎಂ.ಸಿ.ಬಸವರಾಜ್, ವಕೀಲೆ ಶೋಭಾ, ನಗರಸಭಾ ಸದಸ್ಯರಾದ ಯದುನಂದನ, ನಿಜಗುಣ, ಕುಸ್ತರ್ ಉನ್ನೀಸಾ, ಗಂಗಮ್ಮ, ನೇತ್ರಾ, ಗ್ರಾ.ಪಂ.ಅಧ್ಯಕ್ಷ ನಾಗರಾಜು, ರವಿ ಮುಂತಾದವರು ಲೋಕೇಶ್ವರ ಬಿಜೆಪಿ ಸೇರುತ್ತಿರುವ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ ಲೋಕೇಶ್ವರ ನಮ್ಮ ತಾಲೂಕಿನ ಡೈನಾಮಿಕ್ ನಾಯಕರಾಗಿದ್ದು, ಅವರು ತಾಲೂಕು ರಾಜಕಾರಣಕ್ಕೆ ಬಂದಾಗಲಿಂದಲೂ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿರುವುದಲ್ಲದೆ ಸಾಕಷ್ಟು ಜನಪರ, ರೈತಪರ ಸಮಸ್ಯೆಗಳನ್ನು ಪರಿಹರಿಸಲು ಬೀದಿಗಿಳಿದು ಹೋರಾಟ ಮಾಡುವ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಅವರು ಯಾವುದೇ ಪಕ್ಷಕ್ಕೆ ಹೋಗಲಿ, ನಾವೆಲ್ಲಾ ಅವರ ಬೆಂಬಲಿಗರಾಗಿ ಅವರ ರಾಜಕೀಯ ಏಳಿಗೆಗೆ ಅವರ ಬೆನ್ನೆಲುಬಾಗಿ ದುಡಿಯುತ್ತೀವೆ. ಮುಂಬರಲಿರುವ ಲೋಕಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಮತ್ತು ಲೋಕೇಶ್ವರ ಅವರ ಸೂಚನೆ ಮೇರೆಗೆ ನರೇಂದ್ರ ಮೋದಿಯವರನ್ನು ದೇಶದ ಪ್ರಧಾನಿಯನ್ನಾಗಿಸಲು ಬಿಜೆಪಿ ಗೆಲವಿಗೆ ದುಡಿಯುತ್ತೇವೆ ಎಂದು ಸಮಾವೇಶದಲ್ಲಿ ತಿಳಿಸಿದರು.
ಸಮಾವೇಶದಲ್ಲಿ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿ ಲೋಕೇಶ್ವರ ಜೊತೆ ಬಿಜೆಪಿ ಸೇರಿ ದುಡಿಯುವುದಾಗಿ ಹರ್ಷೋದ್ಘಾರದ ಮೂಲಕ ಲೋಕೇಶ್ವರ ನಾಯಕತ್ವಕ್ಕೆ ತಮ್ಮ ಒಕ್ಕೊರಲಿನ ಅಭಿಪ್ರಾಯ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement