ಮರಳು ಸರಬರಾಜಿಗೆ ಅವಕಾಶ ಕಲ್ಪಿಸಿ
ಕ.ಪ್ರ.ವಾರ್ತೆ , ತುಮಕೂರು , ಜ.10
ಜಿಲ್ಲೆಯಲ್ಲಿ ಮರಳು ಸರಬರಾಜು ಸ್ಥಗಿತಗೊಂಡಿದ್ದು, ಕಟ್ಟಡ ಕಾರ್ಮಿಕರು ಕೆಲಸದಿಂದ ವಂಚಿತರಾಗಿದ್ದಾರೆ ಎಂದು ಜಿಲ್ಲಾ ಕಟ್ಟಡ ಕಾರ್ಮಿಕರ ಒಕ್ಕೂಟದ ಜಿಲಾಧ್ಯಕ್ಷ ಕರ್ಣಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಸರ್ಕಾರದ ನೀತಿ ಹಾಗೂ ಮರಳು ಸರಬರಾಜುದಾರರ ನಿಲುವಿನಿಂದಾಗಿ ಜಿಲ್ಲೆಯಲ್ಲಿ ಮರಳು ಸರಬರಾಜು ಸಂಪೂರ್ಣ ನಿಂತು ಹೋಗಿದೆ. ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಂಡಿರುವುದರಿಂದ ಇದನ್ನೇ ನಂಬಿದ್ದ ಕಾರ್ಮಿಕರು ಕೂಲಿ ಇಲ್ಲದೇ ದಿನ ನಿತ್ಯದ ನಿರ್ವಹಣೆ ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದರು.
ಕಟ್ಟಡ ನಿರ್ಮಾಣಕ್ಕೆ ಗಾರೆ ಕಾರ್ಮಿಕರು, ಜಲ್ಲಿ, ಇಟ್ಟಿಗೆ, ಎಲೆಕ್ಟ್ರಿಷಿಯನ್ ಹಾಗೂ ಕಬ್ಬಿಣದ ಕೆಲಸಗಾರರು ಸೇರಿದಂತೆ ಮತ್ತಿತರ ಲಕ್ಷಕ್ಕೂ ಹೆಚ್ಚು ಕಾರ್ಮಿಕರಿದ್ದು, ಮರಳು ಸಾಗಾಣಿಕೆ ನಿಂತಿರುವುದರಿಂದ ಕಟ್ಟಡ ನಿರ್ಮಾಣ ಕೆಲಸ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಕಾರ್ಮಿಕರು ಹಾಗೂ ಕುಟುಂಬಗಳು ಬೀದಿ ಪಾಲಾಗಿವೆ.
ಆದರೆ ಕೆಲಸ ನಿಂತು ಈಗಾಗಲೇ 20 ದಿನಗಳಾಗಿದ್ದು, ಪರಿಸ್ಥಿತಿ ಹೀಗೆ ಮುಂದುವರೆದರೆ ಮನೆಗಳನ್ನು ನಿರ್ಮಾಣ ಮಾಡಲು ಕಷ್ಟದ ಸ್ಥಿತಿ ನಿರ್ಮಾಣವಾಗುತ್ತದೆ ಎಂದರು.
ಉಗ್ರ ಹೋರಾಟ: ಲಾರಿ ಮತ್ತು ಟ್ರ್ಯಾಕ್ಟರ್ ಮಾಲೀಕರು ಮುಷ್ಕರ ಆರಂಭಿಸಿದ್ದು, ಕಾರ್ಮಿಕರ ಪರಿಸ್ಥಿತಿ ಇನ್ನಷ್ಟು ಭೀಕರವಾಗಿದ್ದು, ಈ ಮುಷ್ಕರದಿಂದ ಆರ್ಥಿಕವಾಗಿ ಸದೃಢರಾದ ಮಾಲೀಕರು ಮತ್ತು ಮರಳು ಸಾಗಾಣಿಕೆಯಲ್ಲಿರುವ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಕೂಡಲೇ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದ ಅವರು, ಶೀಘ್ರದಲ್ಲೇ ಮರಳು ಸರಬರಾಜು ಮಾಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ನರಸಿಂಹಮೂರ್ತಿ, ವಿಶ್ವನಾಥ್, ಯೋಗೀಶ್ ಸಿದ್ಧರಾಜು ಭಾಗವಹಿಸಿದ್ದರು.