ರುದ್ರ ಭೂಮಿಗೆ ಆಗ್ರಹಿಸಿ ಮನವಿ
ಶಿರಾ: ನಗರದಲ್ಲಿ ವಾಸಿಸುತ್ತಿರುವ ಲಿಂಗಾಯಿತ-ವೀರಶೈವ ಸಮಾಜಕ್ಕೆ ರುದ್ರ ಭೂಮಿ ನೀಡಬೇಕೆಂದು ಒತ್ತಾಯಿಸಿ ಜನಾಂಗದ ಮುಖಂಡರು ತಾಲೂಕು ಕಚೇರಿಗೆ ಮನವಿ ಪತ್ರ ಸಲ್ಲಿಸಿದರು. ಶಿರಾನಗರದಲ್ಲಿ ಲಿಂಗಾಯಿತ-ವೀರಶೈವ ಜನಾಂಗದವರು ಹೆಚ್ಚು ಸಂಖ್ಯೆಯಲ್ಲಿದ್ದು, ನಮ್ಮ ಜನಾಂಗದ ಮೃತ ದೇಹವನ್ನು ಸಂಸ್ಕಾರ ಮಾಡಲು ನಮಗೆ ಯಾವುದೇ ನಿರ್ದಿಷ್ಟ ಭೂಮಿ ಇರುವುದಿಲ್ಲ. ಭೂಮಿ ಇಲ್ಲದ್ದರಿಂದ ನಮ್ಮ ಜನಾಂಗದ ಶವ ಸಂಸ್ಕಾರಕ್ಕೆ ತುಂಬಾ ತೊಂದರೆಯಾಗಿರುತ್ತದೆ. ಆದ್ದರಿಂದ ಶವ ಸಂಸ್ಕಾರಕ್ಕಾಗಿ ಸರ್ಕಾರದ ವತಿಯಿಂದ ಜಮೀನನ್ನು ಮಂಜೂರು ಮಾಡಿಕೊಡಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಮುಖಂಡರಾದ ಚಿಕ್ಕಪ್ಪಯ್ಯ, ಡಿ.ಲೋಕೇಶ್, ಶಾಂತಣ್ಣ, ಶೈಲಜ, ಕೋಟೆ ತಮ್ಮಯ್ಯ, ಪ್ರಸನ್ನಕುಮಾರ್, ಕೋಟೆ ಅನ್ನದಾನಪ್ಪ, ಶಶಿಧರ, ಉಮೇಶ್, ಎಚ್.ಪ್ರಕಾಶ್, ಕುಮಾರ ಸ್ವಾಮಿ ಇದ್ದರು.
ಪ್ರತಿಭಾನ್ವೇಷಣೆ ಪರೀಕ್ಷೆ
ಶಿರಾ: ಸ್ವಾಮಿ ವಿವೇಕಾನಂದರ ಜನ್ಮ ಜಯಂತಿಯ ಅಂಗವಾಗಿ ಶಿರಾ ತಾಲೂಕು ವಿವೇಕಾನಂದ ವಿದ್ಯಾರ್ಥಿ ಘಟಕ ಹಾಗೂ ಪ.ಪೂ. ಶಿಕ್ಷಣ ಇಲಾಖೆ, ಸರ್ಕಾರೇತರ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಜನವರಿ 19 ಭಾನುವಾರ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರತಿಭಾನ್ವೇಷಣೆ ಪರೀಕ್ಷೆ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸೂಕ್ತ ಬಹುಮಾನ ನೀಡಿ ನಗರದಲ್ಲಿ ನಡೆಯುವ ಬೃಹತ್ ಯುವ ಜಾಗೃತಿ ಸಮಾವೇಶದಲ್ಲಿ ಗೌರವಿಸಲಾಗುವುದು. ವಿವರಣೆಗಾಗಿ ರಾಜಶೇಖರ್.ಕೆ. 9739579869 ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ನಾಳೆ ಪುಸ್ತಕ ಮಾಹಿತಿ ಕೇಂದ್ರ ಉದ್ಘಾಟನೆ
ತುಮಕೂರು: ಇಲ್ಲಿನ ಸಮರ್ಥ ಫೌಂಡೇಷನ್ನ ಸಮರ್ಥ ಸಾಹಿತ್ಯ ಭಂಡಾರ ವತಿಯಿಂದ ಗ್ರಂಥಾಲಯ ಮತ್ತು ಪುಸ್ತಕ ಮಾಹಿತಿ ಕೇಂದ್ರ ಉದ್ಘಾಟನೆ ಮತ್ತು ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯನ್ನು ಜ.12 ರಂದು ಸಂಜೆ 4.30 ಕ್ಕೆ ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆಯನ್ನು ಡಿ. ಶಾಂತಾ ಸಣ್ಣಗುಡ್ಡಯ್ಯ ನೆರವೇರಿಸುವರು. ಬಾ.ಹ. ರವಿಕುಮಾರಿ, ಸಿ.ಎನ್. ಸುಗುಣಾದೇವಿ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಎಚ್. ನಿಂಗಪ್ಪ ವಹಿಸಲಿದ್ದಾರೆ. ಕೆ.ಪಿ. ನಟರಾಜು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಪತ್ರಕರ್ತ ಎಸ್. ನಾಗಣ್ಣ, ಎಂ. ಬಸವಯ್ಯ, ಪ್ರೊ. ಕೆ. ಚಂದ್ರಣ್ಣ ಆಗಮಿಸಲಿದ್ದಾರೆ.
ನಿವೃತ್ತ ನೌಕರರ ಸಾಮಾನ್ಯ ಸಭೆ
ತಿಪಟೂರು: ತಾಲೂಕು ನಿವೃತ್ತ ನೌಕರರ ಸಾಮಾನ್ಯ ಸಭೆಯನ್ನು ಸಂಘದ ಕಟ್ಟಡದಲ್ಲಿ ಜ.13ರ ಸೋಮವಾರ ಬೆಳಿಗ್ಗೆ 10.30ಕ್ಕೆ ಸಂಘದ ಅಧ್ಯಕ್ಷರಾದ ಜಿ.ಟಿ.ಶಂಕರೇಗೌಡರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ತಿಳಿಸಿದ್ದಾರೆ. ಸಭೆಯಲ್ಲಿ ಸಂಘದ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗುವುಜು. ದಿನದರ್ಶಿಕೆ ಬಿಡುಗಡೆ ಮತ್ತು ಕುವೆಂಪು ದಿನಾಚರಣೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆದ್ದರಿಂದ ಸಭೆಗೆ ಸಂಘದ ಸದಸ್ಯರು ಸಕಾಲಕ್ಕೆ ಭಾಗವಹಿಸಬೇಕೆಂದು ತಿಳಿಸಿದ್ದಾರೆ.
ವೈಕುಂಠ ಏಕಾದಶಿ
ಅರಸೀಕೆರೆ: ರಾಜ್ಯದ ತಿರುಪತಿಯೆಂದೇ ಇತಿಹಾಸ ಪ್ರಸಿದ್ಧ ಮಾಲೆಕಲ್ಲು ತಿರುಪತಿಯ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಶನಿವಾರ ವಿಶೇಷ ಪೂಜೆ ಕೈಂಕರ್ಯಗಳು ನಡೆಯಲಿವೆ.
ವಿಶೇಷ ಅಲಂಕಾರ: ವೈಕುಂಠ ಏಕಾದಶಿಯ ಪವಿತ್ರ ದಿನದಂದು ಬೆಟ್ಟದ ಮೇಲೆ ನೆಲೆಸಿರುವ ಪದ್ಮಾವತಿ ವೆಂಕಟರಮಣ ಸ್ವಾಮಿಗೆ ಹಾಗೂ ಬೆಟ್ಟದ ತಪ್ಪಲಿನಲ್ಲಿರುವ ಲಕ್ಷ್ಮೀ ಹಾಗೂ ಗೋವಿಂದರಾಜುಸ್ವಾಮಿಗೆ ನಾನಾ ಅಭಿಷೇಕ, ವಿಶೇಷ ಅಲಂಕಾರ ಹಾಗೂ ತೀರ್ಥಪ್ರಸಾದ ವಿನಿಯೋಗ ನಡೆಯಲಿದ್ದು ,ನಂತರ ಬೆಳ್ಳಗ್ಗೆ 7.30ರಿಂದ ಸಂಜೆ 6.30ರವರೆಗೆ ಗೋವಿಂದರಾಜುಸ್ವಾಮಿಗೆ ವೈಕುಂಠ ನಾರಾಯಣ ವಿಶೇಷ ಅಲಂಕಾರವನ್ನು ಏರ್ಪಡಿಸಲಾಗಿದೆ.
ತುಡಿಕೆವೆಂಕಟರಮಣ ದೇಗುಲದಲ್ಲಿ ಇಂದು ವೈಕುಂಠ ಏಕಾದಶಿ
ಕುಣಿಗಲ್: ಪಟ್ಟಣದ ಕೋಟೆ ಪ್ರದೇಶದಲ್ಲಿನ ತುಡಿಕೆವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಶನಿವಾರದಂದು ವೈಕುಂಠ ಏಕಾದಶಿ ಪ್ರಯುಕ್ತ ಶ್ರೀ ಸ್ವಾಮಿಯವರಿಗೆ ವಿಶೇಷ ಪೂಜೆ ಏರ್ಪಡಿಸಲಾಗಿದೆ. ಬೆಳಗ್ಗೆ ಆರುಗಂಟೆ ಯಿಂದಲೂ ವೈಕುಂಠ ದ್ವಾರ ದರ್ಶನ ಹಾಗೂ ವಿಶೇಷ ಅಷ್ಟಲಕ್ಷ್ಮೀ ವೈಭವ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.