ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಇಂದು ಸರ್ವ ಸದಸ್ಯರ ಸಭೆ

Vishwanath S
Updated On : 12 Jan 2014, 1:22 am

ತುಮಕೂರು: ತುಮಕೂರಿನ ಎಂಪ್ರೆಸ್ ಕಾಲೇಜಿನಲ್ಲಿ ಜ. 12 ರಂದು ಬೆಳಗ್ಗೆ 11 ಗಂಟೆಗೆ ದಲಿತ ಸಾಹಿತ್ಯ ಪರಿಷತ್ ವತಿಯಿಂದ ಸರ್ವ ಸದಸ್ಯರ ಸಭೆ ಕರೆಯಲಾಗಿದೆ. ಕಳೆದ ಒಂದು ವರ್ಷದಿಂದ ದಲಿತ ಸಾಹಿತ್ಯ ಮತ್ತು ದಲಿತ ಯುವ ಬರಹಗಾರರು, ಕವಿಗಳನ್ನು ಗುರುತಿಸಿ ನೈತಿಕ ಬಲ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಿಕೊಂಡು ಬಂದಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ವಿಸ್ತೃತಗೊಳಿಸಲು ನಿರ್ಧರಿಸಲಾಗಿದೆ. ಮಾರ್ಚ್ 1 ರಂದು ಬೆಳಗ್ಗೆ 11 ಗಂಟೆಗೆ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಲ್ಲಿ ಪಾಲ್ಗೊಳ್ಳುವ ಬಗ್ಗೆ ಚರ್ಚಿಸಲಾಗುವುದು ಎಂದು ಬಂದಕುಂಟೆ ನಾಗರಾಜಯ್ಯ ಹಾಗೂ ಚೇಳೂರು ವೆಂಕಟೇಶ್ ತಿಳಿಸಿದ್ದಾರೆ.
ಇಂದು ಶಿರಾದಲ್ಲಿ ಆಮ್ ಆದ್ಮಿ ಸಭೆ
ತುಮಕೂರು: ಶಿರಾ ನಗರದಲ್ಲಿರುವ ಪ್ರವಾಸಿ ಮಂದಿರದಲ್ಲಿ ಜ.12 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಆಮ್ ಆದಿ ಪಾರ್ಟಿ ಜಿಲ್ಲಾ ಘಟಕದಿಂದ ಸಭೆ ಕರೆಯಲಾಗಿದೆ. ಮಾಹಿತಿಗೆ ನಾಗೇಶ್ 8553408266, 8970859496  ಸಂಪರ್ಕಿಸಬಹುದು.
ಪಾವಗಡದಿಂದ
ಸಮಾವೇಶಕ್ಕೆ 46 ಬಸ್
ಪಾವಗಡ: ಭಾನುವಾರ ಬೆಂಗಳೂರಿನಲ್ಲಿ ನಡೆಯುವ ದಶಮಾನೋತ್ಸವ ಹಾಗೂ ಅಹಿಂದ ಒಕ್ಕೂಟಗಳ ಜಾಗೃತಿ ಸಮಾವೇಶಕ್ಕೆ ತಾಲೂಕಿನಿಂದ ಸುಮಾರು 15ಸಾವಿರ ಜನ ಹೊರಡಲಿದ್ದು 46 ಬಸ್‌ಗಳನ್ನು ನಿಯೋಜಿಸಲಾಗಿದೆ ಎಂದು ತಾ.ಅಹಿಂದ ಒಕ್ಕೂಟಗಳ ಹಿರಿಯ ಮುಖಂಡ ವಕೀಲ ಎಂ. ನಾಗೇಂದ್ರಪ್ಪ ಹಾಗೂ ಮೈಲ್ಲಪ್ಪ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ದಶಮಾನೋತ್ಸವ ಮತ್ತು ಅಹಿಂದ ಒಕ್ಕೂಟಗಳ ಸಮಾವೇಶದ ಹಿನ್ನೆಲೆಯಲ್ಲಿ ತಾಲೂಕಿನ 33 ಗ್ರಾಪಂಗಳು ಸೇರಿದಂತೆ ಪ್ರತಿ ಗ್ರಾಪಂಗೆ ತಲಾ ಒಂದೊಂದು ಬಸ್‌ಗಳನ್ನು ನಿಯೋಜಿಸಿದ್ದು ಅಗತ್ಯವಿರುವ ಪಂಚಾಯಿತಿ ವ್ಯಾಪ್ತಿಗೆ 2 ಬಸ್‌ಗಳನ್ನು ನಿಯೋಜಿಸಲಾಗಿದೆ.
ಇಂದಿನಿಂದ ಕಲ್ಪತರು ನಾಡ ಹಬ್ಬ
ತಿಪಟೂರು: ಪಟ್ಟಣದ ಸಂಸ್ಕಾರ ಭಾರತೀ ವತಿಯಿಂದ ಶ್ರೀ ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆಯ ನಿಮಿತ್ತ ತಿಪಟೂರು ಸಮಿತಿಯ 14ನೇ ವಾರ್ಷಿಕೋತ್ಸವದ ಅಂಗವಾಗಿ ಕಲ್ಪತರು ನಾಡ ಹಬ್ಬವನ್ನು ಭಾನುವಾರದಿಂದ ಜ.14ರವರೆಗೆ ಕೆ.ಆರ್.ಬಡಾವಣೆಯ ಎಂ.ವಿ.ಸೀತಾರಾಮಯ್ಯ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ. ಸಾನಿಧ್ಯವನ್ನು ಗುರುಕುಲಾನಂದಾಶ್ರಮದ ಮಠಾಧೀಶರು ಹಾಗೂ ಸಂಸ್ಕಾರ ಭಾರತೀ ಗೌರವಾಧ್ಯಕ್ಷರಾದ ಶ್ರೀ ಇಮ್ಮಡಿಕರಿಬಸವದೇಶಿಕೇಂದ್ರ ಸ್ವಾಮೀಜಿ ವಹಿಸಲಿದ್ದು, ಸಂಜೆ 4 ಗಂಟೆಗೆ ಚೇತನ್ ಚಕ್ರವರ್ತಿಯವರಿಂದ ಅನಂತ ಗೀತಾ ತರಂಗಿಣಿ ಎಂಬ ಸಂಗೀತ ಜ್ಞಾನ ಸುಧಾ ಕಾರ್ಯಕ್ರಮ ನಡೆಯಲಿದೆ.
ಪಾನಮತ್ತ ಕಟ್ಟಡ ಕಾರ್ಮಿಕ ಆಯತಪ್ಪಿ ಬಿದ್ದು ಸಾವು
ಕುಣಿಗಲ್: ಪಾನಮತ್ತ ಕಟ್ಟಡ ಕಾರ್ಮಿಕ ಆಯತಪ್ಪಿ ತೆರೆದ ಚರಂಡಿಗೆ ಬಿದ್ದು ಮೃತಪಟ್ಟಿರುವ ಘಟನೆ ಪಟ್ಟಣದ ಹೃಯಭಾಗದ ಪುರಸಭೆ ಬಸ್ ನಿಲ್ದಾಣದ ಸಮೀಪ ನಡೆದಿದೆ. ಮೃತನನ್ನು ತಮಿಳುನಾಡಿನ ವೈಲಂಕಣಿಯ ಕುಳ್ಳಬಾಬು (35) ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ ಕಟ್ಟಡ ಕಾರ್ಮಿಕನಾಗಿದ್ದು, ತನ್ನ ಸ್ನೇಹಿತರೊಂದಿಗೆ ಕುವೆಂಪು ನಗರದಲ್ಲಿ ಖಾಸಗಿ ಕಟ್ಟಡ ನಿರ್ಮಾಣಕ್ಕೆ ಕೆಲ ದಿನಗಳ ಹಿಂದೆ ಬಂದು ಕೆಲಸ ಮಾಡುತ್ತಿದ್ದು, ಕೂಲಿ ಹಣ ಪಡೆದು, ನಂತರ ನಾಪತ್ತೆಯಾಗಿದ್ದ. ಶನಿವಾರ ಬೆಳಗ್ಗೆ ಬಸ್ ನಿಲ್ದಾಣದ ಸಮೀಪದ, ಮುಖ್ಯರಸ್ತೆಗೆ ಹೊಂದುಕೊಂಡ ತೆರೆದ ಚರಂಡಿಯಲ್ಲಿ ಮೃತದೆಹ ಪತ್ತೆಯಾಗಿದ್ದು. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಕುಣಿಗಲ್ ಪೊಲೀಸರು, ಮೃತದೆಹ ಹೊರತೆಗೆದು, ಈತನ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದಾರೆ.
ಪುಟ್ಟರಾಜಗವಾಯಿಗಳ ಜನ್ಮಶತಮಾನೋತ್ಸವ
ಚಿಕ್ಕನಾಯಕನಹಳ್ಳಿ: ಲಿಂ. ಪುಟ್ಟರಾಜಗವಾಯಿಗಳ ಜನ್ಮಶತಮಾನೋತ್ಸವ ಆಚರಿಸುವ ಬಗ್ಗೆ ಪಟ್ಟಣದ ಸಂಗೀತಾಸಕ್ತರು ಸೇರಿ ನಿಶ್ಚಯಿಸಿದ್ದಾರೆ. ಈ ಸಂಬಂಧ ಪಟ್ಟಣದ ನಿವೃತ್ತ ನೌಕರರ ಸಂಘದ ಕಾರ್ಯಾಲಯದಲ್ಲಿ ಕರೆದಿದ್ದ ಸಭೆಯಲ್ಲಿ  ಸಂಗೀತ ಚಕ್ರವರ್ತಿ, ಉಭಯಗಾಯನ ವಿಶಾರದ, ತ್ರಿಭಾಷಾ ಕವಿ, ಲಿಂ. ಪುಟ್ಟರಾಜಗವಾಯಿಗಳು ಜನ್ಮತಮಾನೋತ್ಸವದ ಅಂಗವಾಗಿ ಕನ್ನಡ ಸಂಘದ ವೇದಿಕೆಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸಂಗೀತ ಸ್ಪರ್ಧೆ, ಹಿರಿಯ ಸಂಗೀತ ಕಲಾವಿದರಿಗೆ ಸನ್ಮಾನ ಸಂಗೀತ ಕಾರ್ಯಕ್ರಮದೊಂದಿಗೆ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು. ಜನ್ಮ ಶತಮಾನೋತ್ಸವ ಆಚರಣೆ ಪ್ರಯುಕ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಶಿಕ್ಷಕರು, ಕಲಾಪೋಷಕರು, ಪತ್ರಕರ್ತರು ಉಪಸ್ಥಿತರಿದ್ದರು.
ವೈಕುಂಠ ಏಕಾದಶಿ ಪ್ರಯುಕ್ತ ಸಪ್ತ ಮಹಾದ್ವಾರ
ಚಿಕ್ಕನಾಯಕನಹಳ್ಳಿ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಸಪ್ತಮಹಾದ್ವಾರ ದರ್ಶನ ಏರ್ಪಡಿಸಲಾಗಿತ್ತು. ಶುಕ್ರವಾರದಿಂದ  ಹೋಮಹವನ ಇತ್ಯಾದಿ ಪೂಜಾ ಕಾರ್ಯಗಳೊಂದಿಗೆ  ಪ್ರಾರಂಭವಾದ ಧಾರ್ಮಿಕ ಕಾರ್ಯಕ್ರಮ ಶನಿವಾರ ಸಂಜೆ ಸಪ್ತಮಹಾದ್ವಾರದ ದರ್ಶನ ಮಾಡುವ ಮೂಲಕ ಭಕ್ತರು ಪುನೀತರಾದರು. ಸುಮಾರು 25ವರ್ಷಗಳಿಂದ ನಿರ್ವಿಘ್ನವಾಗಿ ನಡೆದುಕೊಂಡು ಬರುತ್ತಿರು ಈ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತರ ಮಹಾಪೂರವೇ ಹರಿದು ಬಂದಿತ್ತು.
ಮುಳುಕುಂಟೆ: ಬಾಳೆಬೆಳೆ ಕ್ಷೇತ್ರೋತ್ಸವ
ತುಮಕೂರು: ಸಮಗ್ರ ಕೃಷಿ ಪದ್ಧತಿ ಅಡಿಯಲ್ಲಿ ಬಾಳೆ ಬೆಳೆಯಲ್ಲಿ ಜೋಡಿ ಸಾಲು ಪದ್ಧತಿ ಮತ್ತು ಬಾಳೆ ಗೊನೆಗೆ ನೆರ ಪೋಷಣೆ ಬಗ್ಗೆ ಹಿರೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಸಮೀಪದ ಮುಳುಕುಂಟೆ ಗ್ರಾಮದ ಪ್ರಗತಿಪರ ರೈತ ಗಂಗಣ್ಣ ರವರ ಜಮೀನಿನಲ್ಲಿ ಬಾಳೆ ಬೆಳೆ ಬಗ್ಗೆ ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿತ್ತು. ಹೊನಿಸಿಗೆರೆ ಗ್ರಾ.ಪಂ. ಅಧ್ಯಕ್ಷ ಸಿ.ಟಿ. ಗಂಗಾಧರ್ ಕಾರ್ಯಕ್ರಮ ಉದ್ಘಾಟಿಸಿ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ ರೈತರಿಗೆ ಅನೂಕೂಲವಾಗುವ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬಾಳೆ ಬೆಳೆಯ ಬಗ್ಗೆ ಹೆಚ್ಚಿನ ತಾಂತ್ರಿಕತೆಯನ್ನು ವಿಜ್ಞಾನ ಕೇಂದ್ರಕ್ಕೆ ಭೇಟಿ ಕೊಟ್ಟು ಪಡೆಯಬೇಕೆಂದು ರೈತರಿಗೆ ತಿಳಿಸಿದರು.
ತಾ.ಪಂ. ಸದಸ್ಯ ಎಚ್.ಜಿ. ಕೃಷ್ಣಪ್ಪ ಮಾತನಾಡಿ ಆಧುನಿಕ ತಾಂತ್ರಿಕತೆಯನ್ನು ಬಳಸಿಕೊಂಡು ಹೆಚ್ಚು ಇಳುವರಿ ಕೊಡುವ ಹಲವಾರು ಬೆಳೆಗಳನ್ನು ಬೆಳೆಯುವುದು ಸೂಕ್ತವೆಂದು ರೈತರಿಗೆ ಕರೆ ನೀಡಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎನ್. ಯೋಗಾನಂದ್ ಅವರು ಕೃಷಿ ವಿಜ್ಞಾನ ಕೇಂದ್ರದ ಸೌಲಭ್ಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಹೊನ್ನುಡಿಕೆ ಮೈಸೂರು ಬ್ಯಾಂಕ್ ವ್ಯವಸ್ಥಾಪಕ ಉಮೇಶ ಬ್ಯಾಂಕ್ ಸಾಲ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿಷಯ ತಜ್ಞ ಜಗದೀಶ ರೈತರಿಗೆ ಕ್ಷೇತ್ರೋತ್ಸವ ಮಹತ್ವ ಹಾಗೂ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಿಗುವ ವಿವಿಧ ಪರಿಕರಗಳ ಬಗ್ಗೆ ತಿಳಿಸಿದರು. ಮತ್ತೊಬ್ಬ ವಿಷಯ ತಜ್ಞ ಪ್ರಶಾಂತ ಜೆ.ಎಂ. ಅವರು ಆಧುನಿಕ ಬಾಳೆ ಬೆಳೆ ಬೇಸಾಯ ಪದ್ಧತಿಯನ್ನು ರೈತರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬಿ. ಜಿ. ಸೋಮಶೇಖರ, ಮಾಯಣ್ಣ ಉಪಸ್ಥಿತರಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement