ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಾಮಗಾರಿ ನಿರ್ವಹಿಸದವರ ವಿರುದ್ಧ ಕ್ರಮ ಕೈಗೊಳ್ಳಿ

Vishwanath S
Updated On : 12 Jan 2014, 1:21 am

ಕುಣಿಗಲ್: ಗುತ್ತಿಗೆ ಪಡೆದೂ ಕಾಮಗಾರಿ ನಿರ್ವಹಿಸದ ಗುತ್ತಿಗೆದಾರರನ ವಿರುದ್ಧ ಕ್ರಮ ಕೈಗೊಳ್ಳದೆ, ಅವನ
ಮನೆಬಾಗಿಲಿಗೆ ಡೋಲು, ದಿಬ್ಬಣ ಸಮೇತ ಹೋಗಿ ಕರೆತಂದು ಕೆಲಸಮಾಡಿಸುವ ಅನಿವಾರ್ಯತೆ ಇದೆಯೇನ್ರಿ ಎಂದು ಮುಖ್ಯಾಧಿಕಾರಿ, ಎಂಜಿನಿಯರ್ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡ ಘಟನೆ ಇಲ್ಲಿ ನಡೆಯಿತು.
ಶಾಸಕ ಡಿ.ನಾಗರಾಜಯ್ಯ, ಪುರಸಭೆ ಕಾರ್ಯಾಲಯಕ್ಕೆ ದಿಢೀರ್ ಭೇಟಿ ನೀಡಿ, ಬಾಕಿ ಇರುವ ಕಾಮಗಾರಿ ವಿವರ ಪರಿಶೀಲಿಸಿದಾಗ 2008-09ನೇ ಸಾಲಿನ ಬರ ಪರಿಹಾರ ಯೋಜನೆಯಡಿಯಲ್ಲಿ ಕೊರೆಸಲಾಗಿರುವ ಕೊಳವೆಬಾವಿಗೆ ಪಂಪು, ಮೋಟಾರ್ ಅಳವಡಿಸಲು, ಗುತ್ತಿಗೆದಾರ, ಗುತ್ತಿಗೆ ಪಡೆದರೂ ಕಾಮಗಾರಿ ನಡೆಸದೆ, ಟೆಂಡರ್ ಕರಾರು ಉಲ್ಲಂಘಿಸಿದ್ದರೂ, ಅಧಿಕಾರಿಗಳು ಕ್ರಮಕೈಗೊಳ್ಳಲು ಮೀನಮೇಷ ಎಣಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇನ್ನೊಂದು ವಾರದೊಳದೆ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಂಡು, ಆತನ ಠೇವಣಿ ಮಟ್ಟುಗೋಲುಹಾಕಿ, ವರದಿ ಸಲ್ಲಿಸಿ, ಕಾಮಗಾರಿ ಬೇರೆಯವರಿಂದ ಮಾಡಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಎಚ್ಚರಿಕೆ: ನೌಕರರ ಹಾಜರಾತಿ ಪುಸ್ತಕ ಪರಿಶೀಲಿಸಿದ ಶಾಸಕರು, ಎಂಜಿನಿಯರ್ ಲಕ್ಷ್ಮೀನರಸೇಗೌಡ, ಕಳೆದ ಹಲವು ದಿನಗಳಿಂದ ಸಹಿ ಮಾಡದೆ ಕರ್ತವ್ಯ ನಿರ್ವಹಿಸುತ್ತಿರುವುದು ಕಂಡುಬಂದಿತು. ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮುಖ್ಯಾಧಿಕಾರಿ ಅನ್ನದಾನಿ, ನಾವು ಎಷ್ಟು ಹೇಳಿದರೂ, ಅವರು ಸಹಿ ಮಾಡೋಲ್ಲ ಎಕ್ಸಿಕ್ಯುಟೀವ್ ವರ್ಕ್ ಎಂದು ಹೇಳುತ್ತಾ, ತಮ್ಮ ಮಾತಿಗೆ ಬೆಲೆ ಕೊಡೊಲ್ಲ ಎಂದರು. ನಿಯಮಾನುಸಾರ ಕೆಲಸ ಮಾಡಬೇಕು ಇಲ್ಲವಾದಲ್ಲಿ, ತಾವೇ ಹಾಜರಾತಿ ಪುಸ್ತಕದಲ್ಲಿ ಶರಾ ಬರೆದು ತಕ್ಕಶಾಸ್ತಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಪುಸ್ತಕದಲ್ಲಿ ವ್ಯವಸ್ಥಾಪಕ ಹನುಮಂತಪ್ಪ ಕಳೆದ ತಿಂಗಳಿನಿಂದಲೂ ಹಲವು ಬಾರಿ ಗೈರಾಗಿದ್ದು, ಇದಕ್ಕೆ ಮುಖ್ಯಾಧಿಕಾರಿ ಗೈರು ನಮೂದಿಸದೆ, ಚುಕ್ಕಿ ಇಟ್ಟಿದ್ದರೆ, ಮತ್ತೊರ್ವ ನೌಕರರು ಗೈರಾಗಿರುವುದಕ್ಕೆ ಪ್ರಶ್ನಾರ್ಥಕ ಚಿಹ್ನೆ ಹಾಕಿದ್ದರಿಂದ ಶಾಸಕರು, ಗೈರಾದ ಸಿಬ್ಬಂದಿ ವಿರುದ್ಧ  ಗೈರು ನಮೂದಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ. ಅದು ಬಿಟ್ಟು ಚುಕ್ಕಿ ಇಡಬೇಡಿ, ಮುಂದಿನ ದಿನಗಳಲ್ಲಿ ಭೇಟಿ ನೀಡಿದಾಗ ತಾವೇ ಅಗತ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೊಳಚೆಗುಂಡಿ: ಪಟ್ಟಣದಲ್ಲಿನ ನೈಮಲ್ಯ ವ್ಯವಸ್ಥೆ ನಿರ್ವಹಣೆ ಬಗ್ಗೆ ಆರೋಗ್ಯ ನಿರೀಕ್ಷಕಿ ವರಲಕ್ಷ್ಮಿಯವರನ್ನು ಪ್ರಶ್ನಿಸಿದಾಗ,18 ಕಾಯಂ, 30 ದಿನಗೂಲಿ ನೌಕರರೊಂದಿದೆ ಪಟ್ಟಣದ ಸ್ವಚ್ಛತೆ ಕಾಪಾಡಲಾಗುತ್ತಿದೆ ಎಂದರು. ಇದಕ್ಕೆ ಸದಸ್ಯ ಅರುಣಕುಮಾರ, ಆಕ್ಷೇಪಿಸಿ, ಕೇವಲ 8 ರಿಂದ10 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಪಟ್ಟಣ ಕೊಳಚೆಗುಂಡಿಯಾಗಿದೆ ಎಂದರು.
ವರಲಕ್ಷ್ಮೀ ಉತ್ತರಕ್ಕೆ  ಶಾಸಕರು, ತಾವೇ ದಿನಂಪ್ರತಿ ಪಟ್ಟಣದಲ್ಲಿನ ವ್ಯವಸ್ಥೆ ನೋಡುತ್ತಿದ್ದು, ಯಾವುದೇ ವಾರ್ಡ್ ನೋಡಿದರೂ, ಕಸತುಂಬಿ ತುಳುಕುತ್ತಿದೆ. ಹೇಳುವವರಿಲ್ಲ, ಕೇಳೋರಿಲ್ಲ, ಗುತ್ತಿಗೆದಾರರೊಂದಿಗೆ ಶಾಮೀಲಾಗಿ ದಿನಗೂಲಿ ಸುಳ್ಳು ಹಾಜರಾತಿ ನೀಡಿ ಹಣ ಖಾಲಿಯಾಗುತ್ತಿದೆ ಹೊರತು ಪಟ್ಟಣದ ಕಸಮಾತ್ರ ಖಾಲಿಯಾಗುತ್ತಿಲ್ಲ. ಬದ್ಧತೆಯಿಂದ ಕೆಲಸಮಾಡಿ ಎಂದರು.
ಪಟ್ಟಣದ ವಿವಿಧೆಡೆಯಲ್ಲಿ ಒಳಚರಂಡಿ ಕಾಮಗಾರಿ ಕೈಗೊಳ್ಳುವುದರಿಂದ ಯಾವುದೇ ಕಾರಣಕ್ಕೂ ಹೊಸ ರಸ್ತೆ, ಬಾಕ್ಸ್‌ಚರಂಡಿ ಕಾಮಗಾರಿ ಕೈಗೊಳ್ಳದಂತೆ, ಈಗಾಗಲೆ ಅನುಮೋದನೆ ಗೊಂಡಿರುವ ಕಾಮಗಾರಿಗಳ ಬದಲಿಗೆ ಕ್ರಮ ಕೈಗೊಳ್ಳುವಂತೆ, ಅಧಿಕಾರಿಗಳಿಗೆ ಸೂಚಿಸಿ, ಆರ್ಥಿಕ ವರ್ಷಪೂರ್ಣಗೊಳ್ಳುತ್ತಿದ್ದರೂ, ಕಾಮಗಾರಿ ಬಾಕಿ ಉಳಿದಿದ್ದು, ಆಡಳಿತಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಎಂಜಿನಿಯರ್ ಶ್ರೀಕಾಂತ್, ಸಿಬ್ಬಂದಿ ರಮೇಶ್, ಶೀಲಾ, ಪುರಸಭೆ ಸದಸ್ಯರಾದ  ಎಲ್. ಹರೀಶ, ಮಂಜು,ಅರುಣಕುಮಾರ, ಸಮೀವುಲ್ಲಾ, ಜಗದೀಶ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement