ವಿದ್ಯಾರ್ಥಿ ಹಂತದಿಂದಲೇ ಭ್ರಷ್ಟಾಚಾರ ನಿರ್ಮೂಲನೆ ಅರಿವು ಅಗತ್ಯ
ಹುಳಿಯಾರು: ಪ್ರಸ್ತುತ ಸಮಾಜದಲ್ಲಿನ ಸಾಮಾಜಿಕ ಪಿಡುಗಾಗಿರುವ ಭ್ರಷ್ಟಾಚಾರ, ಲಂಚಗುಳಿತನ, ಕೋಮುವಾದ ಇವುಗಳು ದೇಶದ ಅಭಿವೃದ್ಧಿಗೆ ತೊಡಕಾಗಿದ್ದು, ಇವುಗಳ ನಿರ್ಮೂಲನೆಯಿಂದ ದೇಶದ ಅಭಿವೃದ್ಧಿ ಸಾಧ್ಯ. ಈ ಹಿನ್ನೆಲೆಯಲ್ಲಿ ಇಂದಿನ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಹಂತದಿಂದಲ್ಲೇ ಇಂತಹ ಸಾಮಾಜಿಕ ಪಿಡುಗಗಳ ನಿರ್ಮೂಲನೆ ಮಾಡುವ ಬಗ್ಗೆ ತಿಳಿಯಬೇಕೆಂದು ವಕೀಲ ಎಚ್.ಬಿ. ಸತೀಶ್ ತಿಳಿಸಿದರು.
ಹುಳಿಯಾರಿನ ಕನಕದಾಸ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ವಿವೇಕಾನಂದರ ಜಯಂತಿ ಅಂಗವಾಗಿ ಕಾಲೇಜು ಹಂತದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಭ್ರಷ್ಟಾಚಾರ ನಿರ್ಮೂಲನೆ ಜನಾಂದೋಲನದಿಂದ ಸಾಧ್ಯವೇ,ಇಲ್ಲವೇ ಎಂಬ ವಿಷಯ ಕುರಿತಂತ ಚರ್ಟಾ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಪಾಲ್ಗೊಂಡಿ ಅವರು ಮಾತನಾಡಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಾಜಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಆದರ್ಶ ವ್ಯಕ್ತಿಯಾಗಿ ರೂಪಗೊಳ್ಳಬೇಕು, ತನ್ನಿಂದ ಒಬ್ಬರಿಗೆ ಉಪಯೋಗ ಮಾಡಲು ಆಗದಿದ್ದರೂ ಅಪಕಾರ ಮಾಡಬಾರದು, ವಿವೇಕಾನಂದರ ತತ್ವಾದರ್ಶಗಳನ್ನು ತಿಳಿದು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನಕದಾಸ ಪಿಯು ಕಾಲೇಜಿನ ಪ್ರಾಚಾರ್ಯ ಎಸ್.ಸಿ.ದಯಾನಂದ್, ತೀರ್ಪುಗಾರರಾಗಿದ್ದ ಯಳನಡು ಶಾಲೆಯ ರವೀಂದ್ರನಾಥ್, ಹಿರಿಯ ವಿದ್ಯಾರ್ಥಿ ಸಂಘದ ವರದರಾಜು ಮಾತನಾಡಿದರು. ಉಪನ್ಯಾಸಕರಾದ ಗೋವಿಂದಪ್ಪ, ಗಂಗಾಧರ್ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಚೈತ್ರಾ ಪ್ರಾರ್ಥಿಸಿ, ಪ್ರದೀಪ್ ಸ್ವಾಗತಿಸಿ, ಪರಮೇಶ್ವರ್ ನಿರೂಪಿಸಿ, ವಂದಿಸಿದರು.