'ಎನ್ಆರ್ಎಲ್ಎಮ್ ಯೋಜನೆ, ಕೊರಟಗೆರೆ ತಾಲೂಕಿಗೂ ವಿಸ್ತರಿಸಿ'
ಕೊರಟಗೆರೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎನ್ಆರ್ಎಲ್ಎಮ್ ಯೋಜನೆಯನ್ನು ಕೊರಟಗೆರೆ ತಾಲೂಕಿಗೂ ಸರ್ಕಾರ ವಿಸ್ತರಿಸಿ ಈ ಭಾಗದ ಜನರು ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗಬೇಕು ಎಂದು ಶಾಸಕ ಪಿ.ಆರ್. ಸುಧಾಕರ್ ಲಾಲ್ ಒತ್ತಾಯಿಸಿದರು.
ಅವರು ತಾಲೂಕಿನ ಕ್ಯಾಮೇನಹಳ್ಳಿ ಸಮುದಾಯ ಭವನದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯಿಂದ ಏರ್ಪಡಿಸಿದ್ದ ಸಮಗ್ರ ಜಲಾನಯ ನಿರ್ವಹಣಾ ಯೋಜನೆ ಹಂತ-2ರ ಸ್ವಸಹಾಯಕ ಸಂಘಗಳಿಗೆ ಸಾಲದ ಚೆಕ್ ವಿತರಿಸಿ ಮಾತನಾಡಿ ಕುಟುಂಬ ಅಭಿವೃದ್ಧಿಯಾಗಬೇಕಾದರೆ ಮಹಿಳೆಯರು ಆರ್ಥಿಕವಾಗಿ ಮುಂದುವರಿಯಬೇಕು. ಈ ನಿಟ್ಟಿನಲ್ಲಿ ಸಾಲವನ್ನು ಪಡೆದು ಸ್ವಯಂ ಉದ್ಯೋಗ ಸೃಷ್ಟಿಸಿಕೊಂಡು ಉತ್ತಮ ಜೀವನ ಕಂಡುಕೊಳ್ಳಬೇಕು ಎಂದರು.
ಜಿ.ಪಂ. ಸದಸ್ಯೆ ದಾಕ್ಷಾಯಿಣಿ ಮಾತನಾಡಿ ಮಹಿಳೆ ಮುಂದುವರಿದರೆ ಸಮಾಜವೇ ಮುಂದುವರಿದಂತೆ. ಆದ್ದರಿಂದ ಸರ್ಕಾರದಿಂದ ದೊರೆಯುವಂತಹ ಸೌಲಭ್ಯವನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು. ಅದಲ್ಲದೇ ಮಹಿಳೆಯರು ತಾನು ಇತರರಿಗೆ ಮಾದರಿಯಾಗಿರಬೇಕು ಎಂದು ತಿಳಿಸಿದರು.
ಜಲಾನಯನ ಅಭಿವೃದ್ಧಿ ಅಧಿಕಾರಿ ಟಿ.ಕೆ. ಸೋಮಶೇಖರ್ ಮಾತನಾಡಿ ಈ ಯೋಜನೆಯಡಿಯಲ್ಲಿ ಪಡೆಯುವಂತಹ ಸಾಲವನ್ನು ಮೂಲ ಬಂಡವಾಳ ಮಾಡಿಕೊಂಡು ಆರ್ಥಿಕ ಸದೃಢತೆ ಕಂಡುಕೊಳ್ಳುವಂತೆ ತಿಳಿಸಿದರು.
ಸಮಾರಂಭದಲ್ಲಿ ತಾ.ಪಂ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷ ಸಂಗೀತಾ, ಸದಸ್ಯರಾದ ಎಲ್.ವಿ. ಪ್ರಕಾಶ್, ಜಯಮ್ಮ, ಗ್ರಾ.ಪಂ ಅಧ್ಯಕ್ಷರಾದ ಉಮಾದೇವಿ, ಶಶೀಕಲಾ, ನಾಗಮಣಿ, ಸದಸ್ಯರಾದ ನರಸಿಂಹಕೃಷ್ಣ, ನಿರ್ಮಲ, ರತ್ನಮ್ಮ, ಬಸವರಾಜು, ರಾಮಕೃಷ್ಣಪ್ಪ, ಮುಖಂಡರಾದ ಎಚ್.ವಿ. ಪಾಳ್ಯ ಮಂಜುನಾಥ್, ಕ್ಯಾಶವಾರ ಹನುಮಂತರಾಯಪ್ಪ, ಅಡಾಡಿ, ಕೃಷಿ ತಜ್ಞರಾದ ಪ್ರೊ. ಶಶಿಕಾಂತ್, ಆನಂದ್ ಕುಮಾರ್ ಸೇರಿದಂತೆ ಸ್ವಸಾಯ ಸಂಘದ ಪ್ರತಿನಿಧಿಗಳು, ಸದಸ್ಯರು ಹಾಜರಿದ್ದರು.