ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕ್ರೀಡೆಯಿಂದ ಮನೋಬಲ ವೃದ್ಧಿ: ರಮೇಶ್‌ಕುಮಾರ್

Vishwanath S
Updated On : 13 Jan 2014, 1:16 am

ಚಿಕ್ಕನಾಯಕನಹಳ್ಳಿ: ಮನಸ್ಸಶಕ್ತಿ ವೃದ್ಧಿಗೆ ಬುದ್ಧಿ ವಿಕಾಸಕ್ಕೆ, ಶೀಲ ರೂಪುಗೊಳ್ಳಲು ಕ್ರೀಡೆ ಪ್ರಮುಖವಾದ ಶಿಕ್ಷಣ ಎಂದು ತಾಪಂ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಎ.ಬಿ. ರಮೇಶ್‌ಕುಮಾರ್ ನುಡಿದರು. ಭಾನುವಾರ ಅವರು ಶೆಟ್ಟೀಕೆರೆಯಲ್ಲಿ ಶ್ರೀಸ್ವಾಮಿವಿವೇಕಾನಂದ ಜಯಂತಿ ಪ್ರಯುಕ್ತ ಜನತಾ  ಪ್ರೌಢಶಾಲೆ ಆವರಣದಲ್ಲಿ ಆಟದ ಮೈದಾನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು. ಕ್ರೀಡೆಯಿಂದ ನಾವು ನಮ್ಮ ಕಾಲಮೇಲೆ ನಿಲ್ಲುವ ಶಕ್ತಿಯನ್ನು ಗಳಿಸಬಹುದು.
ಗುರುವಿನ ಮೇಲ್ಪಂಕ್ತಿಯಿಲ್ಲದೆ ನಿಜವಾದ ಶಿಕ್ಷಣವಿಲ್ಲ.ನಮ್ಮ ವಿವಿಗಳನ್ನೇ ತೆಗೆದುಕೊಳ್ಳಿ, ಐವತ್ತು ವರ್ಷಗಳಿಂದ ಅವುಗಳು ಮಾಡಿರುವುದೇನು. ಸ್ವತಂತ್ರವಾಗಿ ಆಲೋಚಿಸುವ ವ್ಯಕ್ತಿಯನ್ನು ಅವು ತಯಾರು ಮಾಡಲು ಪರದಾಡುತ್ತಿವೆ. ವಿದ್ಯಾರ್ಥಿಗಳನ್ನು ಬರೀ ಪುಸ್ತಕದ ಹುಳುಗಳನ್ನಾಗಿ ಸಷ್ಟಿಸಿವೆ ಎಂದರು. ಗ್ರಾಪಂ ಅಧ್ಯಕ್ಷೆ ದಾಕ್ಷಾಯಿಣಿ ರಮೇಶ್‌ಕುಮಾರ್, ಸದಸ್ಯ ಭೈರೇಶ್, ಮಾಜಿ ಅಧ್ಯಕ್ಷ ಜಗದೀಶ್ ಬಾಬು, ಸಹಾಯಕ ನಿರ್ದೇಶಕ ರವೀಂದ್ರಕುಮಾರ್, ಪಿಡಿಓ ಸಿದ್ದರಾಮಯ್ಯ ಮುಂತಾದವರಿದ್ದರು.
ಇಂದು ಕನ್ನಡ ರಾಜ್ಯೋತ್ಸವ
ಕೊರಟಗೆರೆ: ಪಟ್ಟಣದ ಕಾಳಿದಾಸ ಪ್ರೌಢಶಾಲಾ ಆವರಣದಲ್ಲಿ ಜ.13 ರ ಸೋಮವಾರ ಸಂಜೆ ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ತಾಲೂಕು ಶಾಖೆಯ ಉದ್ಘಾಟನೆ ಹಾಗೂ ವೈಭವದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಿದೆ. ಸಿದ್ದರಬೆಟ್ಟ ರಂಭಾಪುರಿ ಖಾಸಾ ಶಾಖಾ ಮಠದ ಶ್ರೀವೀರಭದ್ರಶಿವಾಚಾರ್ಯ ಸ್ವಾಮೀಜಿ ಸಾನಿದ್ಯದಲ್ಲಿ ವಾಜಿ ಸಚಿವ ಸಿ.ಚನ್ನಿಗಪ್ಪ ಕಾರ್ಯಕ್ರಮ ಉದ್ಘಾಟಿಸುವರು, ಶಾಸಕ ಪಿ.ಆರ್. ಸುಧಾಕರಲಾಲ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಜನಾಬ್ ಟಿಪ್ಪು ಖಾಸಿಂ ಆಲಿ ತಾಲೂಕು ಶಾಖೆ ಉದ್ಘಾಟಿಸುವರು, ರಾಜ್ಯ ಟಿಪ್ಪು ಸುಲ್ತಾನ್ ಪ್ರಚಾರ ಸಮಿತಿ ರಾಷ್ಟ್ರೀಯ ಅಧ್ಯಕ್ಷ ತಲಕಾಡು ಚಿಕ್ಕರಂಗೇಗೌಡ ಪ್ರಾಸ್ತಾವಿಕ ನುಡಿಗಳನ್ನಾಡುವರು. ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಸಂಸದ ಜಿ.ಎಸ್. ಬಸವರಾಜು, ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್, ಜಿ.ಪಂ.ಅಧ್ಯಕ್ಷೆ ಸಾಕಮ್ಮ ನಾಗರಾಜು, ಮಾಜಿ ಶಾಸಕ ಡಿ.ಸಿ. ಗೌರಿಶಂಕರ್, ಜಿ.ಪಂ.ಸದಸ್ಯರಾದ ಪ್ರೇಮಾಮಹಾಲಿಂಗಪ್ಪ, ನಾರಾಯಣಮೂರ್ತಿ, ಪ್ರಸನ್ನಕುಮಾರ್, ದಾಕ್ಷಾಯಿಣಿರಾಜಣ್ಣ ಭಾಗವಹಿಸಲಿದ್ದಾರೆ.
ಚಿ.ನಾ.ಹಳ್ಳಿ ಸಾಹಿತ್ಯ ಸಮ್ಮೇಳನಾಧ್ಯಕ್ಷನಟರಾಜ್ ಹುಳಿಯಾರ್
ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಫೆಬ್ರವರಿ 22, 23  ರಂದು ಆಯೋಜಿಸಿರುವ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಾರಾಗಿ ಸಾಹಿತಿ, ಬರಹಗಾರದ ಡಾ.ನಟರಾಜ್ ಹುಳಿಯಾರ್ ಅವರನ್ನು ಆಯ್ಕೆಮಾಡಿದ್ದಾರೆ. ಪಟ್ಟಣದ ಎಂಪಿಎಸ್ ಶಾಲೆಯಲ್ಲಿ ನಡೆದ ಸದಸ್ಯರ ಸಭೆಯಲ್ಲಿ ಎಲ್ಲಾ ಸದಸ್ಯರು ಸೇರಿ ಚರ್ಚಿಸಿ ಸಾಹಿತಿ ಡಾ.ನಟರಾಜ್ ಹುಳಿಯಾರ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದಾಗಿ ತಾಲೂಕು ಕಸಾಪ ಅಧ್ಯಕ್ಷ ರವಿಕುಮಾರ್ ಮಾಧ್ಯಮದವರಿಗೆ ತಿಳಿಸಿದ್ದಾರೆ. ಮೂಲತಃ ಹುಳಿಯಾರಿನವೇ ಆಗಿರುವ ಇವರು ಇಂಗ್ಲಿಷ್‌ನಲ್ಲಿ ಎಂ.ಎ ಪದವಿ ಪಡೆದಿದ್ದು, ಕನ್ನಡ ಸಾಹಿತ್ಯದಲ್ಲಿ ಆಧುನಿಕತೆ ಮತ್ತು ಪರಂಪರೆ ಎಂಬ ತೌಲನಿಕ ಅಧ್ಯಯನಕ್ಕೆ ಪಿಹೆಚ್.ಡಿ ಪದವಿ ಪಡೆದಿದ್ದಾರೆ. ಒಂದು ವರ್ಷದ ಕಾಲ ಗುಲ್ಬರ್ಗ ಕೇಂದ್ರಿಯ ವಿಶ್ವವಿದ್ಯಾಲಯದ ಡೀನ್ ಹಾಗೂ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತೊಬ್ಬ ಸರ್ವಾಧಿಕಾರಿ, ಮಾಯಾಕಿನ್ನರಿ (ಕಥಾಸಂಕಲನಗಳು), ರೂಪಕಗಳ ಸಾವು (ಕವಿತೆ), ಗಾಳಿಬೆಳಕು, ಇಂತಿ ನಮಸ್ಕಾರ ಸೇರಿದಂತೆ ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶಿವರಾಮಕಾರಂತ ಪ್ರಶಸ್ತಿ, ನಾಡಚೇತನ ಪ್ರಶಸ್ತಿ,ಅಮ್ಮಪ್ರಶಸ್ತಿ ಸೇರಿದಂತೆ ಇನ್ನೂ ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಲಭಿಸಿವೆ.
ಹಾಡಹಗಲೇ ನಗದು, ಒಡವೆ ಕಳ್ಳತನ
ತಿಪಟೂರು: ನಗರದ ಕೆ.ಆರ್. ಬಡಾವಣೆಯ ಬಸವರಾಜು ಎಂಬುವವರ ಮನೆಯಲ್ಲಿ ಶನಿವಾರ ಮಧ್ಯಾಹ್ನ ನಗದು-ಒಡವೆ ಸೇರಿ ಲಕ್ಷಾಂತರ ರು. ಕಳ್ಳತನ ನಡೆದಿರುವುದು ನಗರದ ಜನತೆಯಲ್ಲಿ ಭಯವನ್ನುಂಟು ಮಾಡಿದೆ.
ಬಸವರಾಜು ಎಂದಿನಂತೆ ಮಧ್ಯಾಹ್ನ 4ಗಂಟೆ ವೇಳೆಯಲ್ಲಿ ಊಟ ಮುಗಿಸಿಕೊಂಡು ಅಂಗಡಿಗೆ ತೆರಳಿದ್ದಾರೆ. ನಂತರ ಇವರ ಪತ್ನಿ ಮನೆಗೆ  ಬೀಗ ಹಾಕಿಕೊಂಡು ಸ್ನೇಹಿತರ ಮನೆಗೆ ಹೋಗಿದ್ದಾರೆ. ಇದನ್ನೇ ಕಾಯುತ್ತಿದ್ದವರಂತೆ ಕಳ್ಳರು, ಮನೆ ಬೀಗ ಒಡೆದು ಒಳನುಗ್ಗಿ ಬೀರುವಿನ ಬಾಗಿಲು ತೆಗೆದು ನಗದು ಹಾಗೂ 3 ಚಿನ್ನದ ಸರಗಳು ಸೇರಿ 4 ಲಕ್ಷಕ್ಕೂ ಹೆಚ್ಚಿನ ಕಳ್ಳತನ ನಡೆದಿದ್ದು ಪ್ರಕರಣ ನಗರ ಠಾಣೆಯಲ್ಲಿ ದಾಖಲಾಗಿದೆ.
ಹಣ ದುರುಪಯೋಗವಾಗಿಲ್ಲ, ಸದುಪಯೋಗವಾಗಿದೆ: ಅಧ್ಯಕ್ಷರ ಸ್ಪಷ್ಟನೆ
ತುರುವೇಕೆರೆ: ತಾಲೂಕಿನ ತಾಳ್ಕೆರೆ ಗ್ರಾಮ ಪಂಚಾಯ್ತಿಯಲ್ಲಿ ಸಾರ್ವಜನಿಕರ ಹಣ ದುರುಪಯೋಗವಾಗಿಲ್ಲ ಎಂದು ಗ್ರಾಮ ಪಂಚಾಯ್ತಿಯ ಅಧ್ಯಕ್ಷ ನಟರಾಜು ಸ್ಪಷ್ಟನೆ ನೀಡಿದ್ದಾರೆ.
ಗ್ರಾಪಂ ಬಿಲ್ ಕಲೆಕ್ಟರ್ ಹಣ ದುರುಪಯೋಗ ಮಾಡಿಕೊಂಡಿದ್ದನ್ನು ಪತ್ತೆ ಹಚ್ಚಿ ಆತನನ್ನು ಅಮಾನತು ಮಾಡಿದ್ದೇ ನಾವು. ಆತ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡು ದುರುಪಯೋಗ ಪಡಿಸಿಕೊಂಡಿದ್ದ ಹಣವನ್ನು ಗ್ರಾಮ ಪಂಚಾಯ್ತಿಗೆ ಕಟ್ಟಿದ್ದಾನೆ ಎಂದು ನಟರಾಜು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 2013-14 ನೇ ಸಾಲಿನ 13 ನೇ ಹಣಕಾಸಿನ ಮೊದಲನೇ ಹಂತದ ಕಾಮಗಾರಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಹಣವನ್ನು ಅವರು ವಾಸಿಸುವ ಕಾಲೋನಿಗಳಲ್ಲಿ ಅಗತ್ಯವಾಗಿ ಮಾಡಬೇಕಿದ್ದ ರಸ್ತೆ ಅಭಿವೃದ್ಧಿ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಬಳಸಲಾಗಿದೆ. 2 ನೇ ಹಂತದ ಕಾಮಗಾರಿಯ ಕ್ರಿಯಾಯೋಜನೆಯನ್ನು ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಮಾಡಲಾಗಿದೆ. ಆದರೆ ಆ ವೇಳೆ ತೀವ್ರ ಬರಗಾಲವಿದ್ದುದರಿಂದ ಕುಡಿಯುವ ನೀರಿಗೂ ಹಾಹಾಕಾರವಿತ್ತು. ಗ್ರಾಮಸ್ಥರುಗಳು ಪಂಚಾಯ್ತಿಗೆ ಬೀಗ ಜಡಿದು ಪ್ರತಿಭಟನೆಯನ್ನೂ ಮಾಡಿದ್ದರು. ಇದನ್ನು ಮನಗಂಡ ಪಂಚಾಯ್ತಿ ಸದಸ್ಯರು ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡಿದ್ದರಿಂದ ಕುಡಿಯುವ ನೀರನ್ನು ಒದಗಿಸಲು ಸದರಿ ಹಣವನ್ನು ಬಳಸಲಾಗಿದೆ ಎಂದು ಅಧ್ಯಕ್ಷ ನಟರಾಜು ಸ್ಟಷ್ಟಪಡಿಸಿದ್ದಾರೆ. ಶಾಲೆಗಳಿಗೆ ನೀಡಲಾಗಿರುವ ಪೀಠೋಪಕರಣಗಳ ವಿಷಯದಲ್ಲೂ ಯಾವುದೇ ಲೋಪ ಎಸಗಿಲ್ಲ. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಣೆ ಮಾಡಲಾಗಿದೆ. ಕೆಲವರು ದುರುದ್ದೇಶಪೂರ್ವಕವಾಗಿ ತಮ್ಮ ಗ್ರಾಮ ಪಂಚಾಯ್ತಿಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ನಟರಾಜು ಹೇಳಿದ್ದಾರೆ.
ಶಿರಾದಲ್ಲಿ ಅದ್ವಾನದ ರಸ್ತೆ
ಅದ್ವಾನದ, ಗುಂಡಿ ಬಿದ್ದ ರಸ್ತೆಯನ್ನು ನೋಡಬೇಕಾದರೆ ಶಿರಾಕ್ಕೆ ಬನ್ನಿ. ಶಿರಾ ಪಟ್ಟಣದ ಅಮರಾಪುರ ರಸ್ತೆಯ ಚಂಗಾವರ ಕ್ರಾಸ್‌ನಲ್ಲಿ ರಸ್ತೆಯ ಡಾಂಬರು ಕಿತ್ತುಹೋಗಿದ್ದು, ಗುಂಡಿ ನಿರ್ಮಾಣಗೊಂಡಿದೆ. ಇದರಿಂದ ದ್ವಿಚಕ್ರವಾಹನ ಸೇರಿದಂತೆ ವಿವಿಧ ವಾಹನಗಳು ತಿರುವಿನಲ್ಲಿ ಅಪಘಾತಕ್ಕೀಡಾಗುವ ಸಂಭವ ಹೆಚ್ಚಿರುವುದರಿಂದ ಸಂಬಂಧಪಟ್ಟ ಇಲಾಖೆಯವರು ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕು.  ಚಂಗಾವರ ತಿರುವಿನಲ್ಲೇ ಕಿತ್ತು ಹೋಗಿರುವ ಟಾರ್‌ನಿಂದಾಗಿ ಸ್ಥಳದ ಮಣ್ಣು ಸಡಿಲಗೊಂಡಿದ್ದು, ದ್ವಿಚಕ್ರವಾಹನಗಳು ಸ್ಕಿಡ್ ಆಗಿ ಈಗಾಗಲೇ ಐದು ಜನರು ಅಪಘಾತಕ್ಕೊಳಗಾಗಿದ್ದಾರೆ.
ಈಗಾಗಲೇ ರಸ್ತೆ ದುರಸ್ಥಿ ಮಾಡಿಸಬೇಕೆಂದು ಹಲವಾರು ಬಾರಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಣ್ಣ  ಪುಟ್ಟ ಅಪಘಾತಗಳು ನಡೆಯುತ್ತಲೇ ಇದೆ. ಹೆಚ್ಚಿನ ಅನಾಹುತಗಳು ಜರುಗುವುದಕ್ಕೂ ಮುನ್ನವೇ ರಸ್ತೆ ದುರಸ್ತಿ ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಜರುಗಿಸಬೇಕೆಂದು ಪ್ರಜ್ಞಾವಂತರು ಒತ್ತಾಯಿಸಿದ್ದಾರೆ.
ಮೂಲಭೂತ ಸೌಲಭ್ಯ ಕಲ್ಪಿಸಬೇಕಾದ ಸಂಬಂಧಪಟ್ಟ ಇಲಾಖೆಯವರು ಗೊತ್ತಿದ್ದೂ ಕುರುಡರಾಗಿ ಕೂತಿದ್ದಾರೆ. ಪ್ರತಿಭಟನೆಯ ಎಚ್ಚರಿಕೆ ನೀಡಿದರೆ ಜಾಣ ಕಿವುಡರಾಗುತ್ತಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಂಡು ಈ ಮಾರ್ಗದ ರಸ್ತೆ ದುರಸ್ತಿಪಡಿಸುವರೇ ಎಂಬ ನಿರೀಕ್ಷೆಯಲ್ಲಿ ಈ ಭಾಗದಲ್ಲಿ ಓಡಾಡುವ ವಾಹನ ಸವಾರರು ಇದ್ದಾರೆ.
ಪರೀಕ್ಷೆ ಎದುರಿಸುವುದು ಹೇಗೆ: ಕಾರ್ಯಾಗಾರ
ಮಧುಗಿರಿ: ವಿದ್ಯಾರ್ಥಿ ಜೀವನ ಅತಿ ಸುಂದರವಾದುದು.ಈ ದಿಸೆಯಲ್ಲಿ ಮತುವರ್ಜಿ ವಹಿಸಿ ಶಿಸ್ತು ಬದ್ಧ ಜೀವನ, ನಡೆಸುವ ಮೂಲಕ ಗುಣ ಮಟ್ಟದ ಶಿಕ್ಷಣ ಕಲಿತು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಕರೆ ನೀಡಿದರು. ಇಲ್ಲಿನ ಗುರುಭವನದಲ್ಲಿ ತಾಲೂಕು ಕನ್ನಡ ಜಾಗೃತಿ ವೇದಿಕೆ ವತಿಯಿಂದ ಏರ್ಪಟಾಗಿದ್ದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳಿಗಾಗಿ ಪರೀಕ್ಷೆ ಎದುರಿಸುವುದು ಹೇಗೆ ಎಂಬ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಆತ್ಮ ವಿಶ್ವಾಸದಿಂದ ಚೆನ್ನಾಗಿ ಓದಿ, ಬರೆದು ಧೈರ್ಯ, ಉತ್ಸಾಹದಿಂದ ಪರೀಕ್ಷೆ ಬರೆದಾಗ ಉತ್ತಮ ಫಲಿತಾಂಶ ಬರಲಿದೆ ಎಂದರು. ಪಿಎಸ್‌ಐ ಎಂ.ಅಂಬರೀಶ್ ವಿದ್ಯೆ ಸಾಧಕನ ಸ್ವತ್ತು, ಅದನ್ನು ಯಾರು ಕದಿಯಲಾರರು. ಚೆನ್ನಾಗಿ ಅಭ್ಯಾಸ ಮಾಡಿದರೆ ಪರೀಕ್ಷೆಯನ್ನು ಸಮರ್ಥವಾಗಿ  ಎದರಿಸಲು ಸಾಧ್ಯ ಎಂದರು. ಕನ್ನಡ ಜಾಗೃತಿ ವೇದಿಕೆ ಗೌರವಾಧ್ಯಕ್ಷ ಕೇಬಲ್ ಸುಬ್ಬು ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಭೌತಶಾಸ್ತ್ರ ಪ್ರಾಧ್ಯಾಪಕ ತಿಪ್ಪೇರುದ್ರಯ್ಯ, ಎಬಿವಿಪಿ ಮುಖ್ಯಸ್ಥ ಜಿ.ಎನ್.ಜನಾರ್ದನ್ ಪರೀಕ್ಷೆ ಎದುರಿಸುವ ಬಗ್ಗೆ  ವಿಶೇಷ ಉಪನ್ಯಾಸ ನೀಡಿ ವಿದ್ಯಾರ್ಥಿಗಳ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಎಂ.ಎಸ್. ಚಂದ್ರಶೇಖರ್, ಎಂ.ವಿ.ಮಂಜುನಾಥ್, ಕಾರ್ಯದರ್ಶಿ ರಾಘವೇಂದ್ರ ಗಿರೀಶ್ ನಾಯ್ಕ್, ಟಿ.ಪಿ.ಸ್ವಾಮಿ, ರಮೇಶ್, ನವೀನ್, ಶ್ರುತಿ, ಭವ್ಯ ಸುಷ್ಮ, ರಮ್ಯ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಆರ್. ದರ್ಶನ್ ರಾಜ್ಯ ಮಟ್ಟಕ್ಕೆ ಆಯ್ಕೆ
ಮಧುಗಿರಿ: ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿ ಕ್ಲಸ್ಟರ್ ವ್ಯಾಪ್ತಿಗೆ ಸೇರಿದೆ ಓಬಳಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿ ಆರ್. ದರ್ಶನ್ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ  ಕ್ಲೇ ಮಾಡಲಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈ ಶಾಲೆಯ ವಿದ್ಯಾರ್ಥಿಗಳು  ಸತತ ನಾಲ್ಕೂ ಬಾರಿ  ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಮಟ್ಟಕೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಮುಖ್ಯ ಶಿಕ್ಷಕ ಕೆ.ನರಸಿಂಹಯ್ಯ ಮತ್ತು  ಸಿಬ್ಬಂದಿ ವರ್ಗ ಆರ್.ದರ್ಶನನ್ನು ಅಭಿನಂದಿಸಿದ್ದಾರೆ.
ಗುಣಮಟ್ಟದ ಶಿಕ್ಷಣದಿಂದ ಉದ್ಯೋಗ ದೊರಕಿಸಿಕೊಳ್ಳಿ
ಗುಬ್ಬಿ: ವಿದ್ಯಾವಂತ ಯುವಕರಿಗೆ ಜಾಗತೀಕರಣ ಸಂದರ್ಭದಲ್ಲಿ ಉದ್ಯೋಗಾವಕಾಶಗಳು ವಿಫುಲವಾಗಿದ್ದು ಇಂದಿನ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುವ ಮೂಲಕ ಉದ್ಯೋಗಗಳನ್ನು ದೊರಕಿಸಿಕೊಂಡು ಅಭಿವೃದ್ಧಿ ಹೊಂದುವಂತೆ ಉದ್ಯೋಗ ಮತ್ತು ತರಬೇತಿ ಇಲಾಖೆಯ ಸಹನಿರ್ದೇಶಕ ಅಲ್ಲಾಭಕ್ಷ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉದ್ಯೋಗ ಮಾರ್ಗದರ್ಶಿ ಘಟಕ, ಎನ್‌ಎಸ್‌ಎಸ್ ಘಟಕ ಹಾಗೂ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ  ನಿಗಮದ ಸಹಯೋಗದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಆಯೋಗಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾವಂತ ಯುವಕ ಯುವತಿಯರು ಸಕ್ರಿಯವಾಗಿ ಭಾಗವಹಿಸುವ ಮೂಲಕ ಉನ್ನತ ಹುದ್ದೆಗಳನ್ನು ಆಯ್ಕೆಮಾಡಿಕೊಳ್ಳುವಂತೆ ತಿಳಿಸಿದರು.
ಪ್ರಾಚಾರ್ಯ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ ಕಾಲೇಜಿನ ಉದ್ಯೋಗ ಮಾರ್ಗದರ್ಶಿ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಪೂರಕವಾದ ಮಾಹಿತಿ ಹಾಗೂ ಮಾರ್ಗದರ್ಶನವನ್ನು ನೀಡಲಾಗುತ್ತಿದೆ. ಅಲ್ಲದೆ ನುರಿತ ತಜ್ಞರಿಂದ ಉದ್ಯೋಗಕ್ಕೆ ಸಂಬಂಧಿಸಿದಂತೆ ತರಬೇತಿಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಪ್ರಗತಿ ಪಥದತ್ತ ಸಾಗುವಂತೆ ತಿಳಿಸಿದರು. ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಗಲಗಲಿ, ಗ್ರಂಥಪಾಲಕ ಜಿ.ಟಿ.ಕುಮಾರ್, ಉಪನ್ಯಾಸಕ ಎಂ.ಎಚ್.ನಾಗರಾಜು, ನರಸಿಂಹಪ್ರಸಾದ್ ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement