ನೀರಿಗಾಗಿ ಬೀದಿ ಬೀದಿ ಅಲೆದಾಟ
ತಿಪಟೂರು: ಪಟ್ಟಣದ ಜನತೆ ಬೇಸಿಗೆ ಆರಂಭಕ್ಕೆ ಮುಂಚೆಯೇ ನೀರಿಗಾಗಿ ಇಡೀ ದಿನವನ್ನೆ ವ್ಯಯಿಸಬೇಕಾದ ಸ್ಥಿತಿ ಇಲ್ಲಿ ಉಂಟಾ ಗಿದ್ದು, ಈ ಬಗ್ಗೆ ನಗರಸಭೆ ಅಧಿಕಾರಿಗಳು ದಿವ್ಯ ನಿರ್ಲಕ್ಷದಿಂದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೇಮಾವತಿ ನೀರನ್ನು 10-15 ದಿವಸಗಳಿಗೊಮ್ಮೆ ಬಿಡುತ್ತಿರುವುದರಿಂದ ನಗರದ ನಾಗರಿಕರು ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಈಚನೂರು ಕೆರೆ ತುಂಬಿ ತುಳುಕುತ್ತಿದ್ದರೂ ನಗರದ ಜನತೆಗೆ ಕನಿಷ್ಠವಾರಕ್ಕೊಮ್ಮೆಯಾದರೂ ನಗರಸಭೆ ನೀರು ಬಿಡದೆ ನಾಗರಿಕರು ಪರದಾಡುವಂತೆ ಮಾಡುತ್ತಿರುವುದು ನಗರಸಭೆ ಅಧಿಕಾರಿಗಳು ಹಾಗೂ ಸದಸ್ಯರು ತೀವ್ರ ನಿರ್ಲಕ್ಷ್ಯವನ್ನು ಎತ್ತಿತೋರಿಸುತ್ತಿದೆ. ಬೋರ್ವೆಲ್ಗಳ ನೀರನ್ನು ಬೀದಿ ನಲ್ಲಿಗಳಲ್ಲಿ ಸಾರ್ವಜನಿಕರು ಕುಡಿಯಲು ಉಪಯೋಗಿಸುತ್ತಿದ್ದು, ಈ ನೀರನ್ನು ಸಹ ವಾರಗಟ್ಟಲೆಯಾದರೂ ಬಿಡುತ್ತಿಲ್ಲ. ಸ್ಟಾರ್ಟರ್, ಮೋಟಾರ್ ಅಥವಾ ಪೈಪ್ಲೈನ್ ರಿಪೇರಿ ನೆಪದಲ್ಲಿ ಬೀದಿನಲ್ಲಿ ನೀರನ್ನು ಸಕಾಲಕ್ಕೆ ನಿತ್ಯವು ಬಿಡದಿರುವುದಕ್ಕೆ ನಗರದ ಮಹಿಳೆಯರಂತೂ ನಗರಸಭೆ ವಿರುದ್ಧ ಕಿಡಿಕಾರುತ್ತಿರುವುದು ನಗರದಾದ್ಯಂತ ಸರ್ವೇಸಾಮಾನ್ಯವಾಗಿದೆ.
ಬೇಸಿಗೆ ಆರಂಭಕ್ಕೆ ಮೊದಲೇ ನಗರದ ನಾಗರಿಕರ ನೀರಿನ ಬವಣೆ ಅರಿತು ಪೌರಾಯುಕ್ತರು ನಗರದ ಎಲ್ಲಾ ಬೀದಿ ನಲ್ಲಿಗಳಲ್ಲಿ ವಿದ್ಯುತ್ ಇರುವ ಎಲ್ಲಾ ವೇಳೆಯಲ್ಲೂ ನೀರು ಬಿಡಿಸಿ ನಗರದ ಜನತೆಗೆ ಉಂಟಾಗಿರುವ ಹಾಹಾಕಾರವನ್ನು ತಪ್ಪಿಸಬೇಕಾಗಿದೆ. ಜೊತೆಗೆ ದಿನಪೂರ್ತಿ ಮಕ್ಕಳು, ಮಹಿಳೆಯರು ಬಿಂದಿಗೆ ಹಿಡಿದುಕೊಂಡು ನೀರಿಗಾಗಿ ಬೀದಿ ನಲ್ಲಿಗಳನ್ನು ಹುಡುಕಿಕೊಂಡು ನಡೆಸುತ್ತಿರುವ ಅಲೆದಾಟಕ್ಕೆ ನಗರಸಭೆ ಇತಿಶ್ರೀ ಹಾಡುವ ಮೂಲಕ ನಾಗರಿಕರ ಆಕ್ರೋಶ ತಣಿಸುವುದೇ ಎಂಬುದುನ್ನು ಕಾದುನೋಡಬೇಕು.