ಬಿಎಸ್‌ವೈ ಮರಳಿರುವುದು ಆನೆ ಬಲ ತಂದಿದೆ
ತಿಪಟೂರು: ಹುಟ್ಟು ಹೋರಾಟಗಾರ ಹಾಗೂ ರೈತನಾಯಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬಿಜೆಪಿಗೆ ಮರಳಿ ಬಂದಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದು ಜಿಲ್ಲಾ ಬಿಜೆಪಿ ಹಿರಿಯ ಮುಖಂಡ, ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷರೂ ಆದ ಶಿವಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪನವರ ಅಧಿಕಾರವಧಿಯಲ್ಲಿ ನಡೆದಂತಹ ಜನಪ್ರಿಯ ಕಾರ್ಯಕ್ರಮಗಳಾದ ಭಾಗ್ಯಲಕ್ಷ್ಮಿ, ವೃದ್ಧಾಪ್ಯವೇತನ, ಸಣ್ಣ ಹಿಡುವಳಿದಾರರಿಗೆ ಸಬ್ಸಿಡಿ ಹಣ, ಹಾಲು ಉತ್ಪಾದಕರಿಗೆ ಲೀಟರ್‌ಗೆ 2ರು. ಸಹಾಯಧನ, ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ, ರೈತರ 25ಸಾವಿರ ರು.ಸಾಲ ಮನ್ನಾ ಸೇರಿದಂತೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಇನ್ನೂ ಅನೇಕ ಜನಪರ ಕಾರ್ಯಕ್ರಮಗಳು ಗ್ರಾಮಾಂತರ ಪ್ರದೇಶದ ರೈತರ ಮನದಲ್ಲಿ ಅಚ್ಚಳಿಯದಂತೆ ಉಳಿದಿವೆ.
ಲೋಕಸಭಾ ಚುನಾವಣೆಯಲ್ಲಿ ಈ ಅಭಿಮಾನವು ಮತಗಳಾಗಿ ಪರಿವರ್ತನೆಯಾಗಿ ಕನಿಷ್ಠ 22 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಯು ಜಯಭೇರಿ ಬಾರಿಸುವುದರಲ್ಲಿ ಅನುಮಾನವೇ ಇಲ್ಲ.
ತುಮಕೂರು ಜಿಲ್ಲೆಯಲ್ಲಿ ಕೆಜೆಪಿಯ ವಿಲೀನದಿಂದ ತುಮಕೂರು ಲೋಕಸಭಾ ಕ್ಷೇತ್ರವನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗುತ್ತದೆ. ಯಡಿಯೂರಪ್ಪ ಮತ್ತು ಕೆಜೆಪಿ ಕಾರ್ಯಕರ್ತರನ್ನು ಬಿಜೆಪಿ ಕಾರ್ಯಕರ್ತರು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದು, ತಾಲೂಕಿನ ಕೆಜೆಪಿ ಮತ್ತು ಬಿಜೆಪಿ ಕಾರ್ಯಕರ್ತರ ವಿಲೀನದಿಂದ ಮುಂದಿನ ಎಲ್ಲಾ ಚುನಾವಣೆಗಳಲ್ಲಿಯೂ ಬಿಜೆಪಿ ಜಯಗಳಿಸುವುದರಲ್ಲಿ ಅನುಮಾನವೇ ಇಲ್ಲ ಎಂದು ಶಿವಸ್ವಾಮಿ ತಿಳಿಸಿದ್ದಾರೆ.