ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಾಟರ್ ಗ್ರಿಡ್ ಸ್ಪಷ್ಟ ನಿರ್ಧಾರ ಕೈಗೊಳ್ಳಿ

Vishwanath S
Updated On : 13 Jan 2014, 1:15 am

ತುಮಕೂರು: ಜಿ.ಎಸ್.ಪರಮಶಿವಯ್ಯನವರ ವರದಿಯಾಧಾರಿತ ಹೆಡ್ ವರ್ಕ್ಸ್ ಯೋಜನೆ, ಎತ್ತಿನ ಹೊಳೆ ಹೆಡ್ ವರ್ಕ್ಸ್ ಯೋಜನೆ, ಹೇಮಾವತಿ ಪ್ಲಡ್ ಪ್ಲೋ ಕೆನಾಲ್ ಹೆಡ್ ವರ್ಕ್ಸ್ ಸೇರಿದಂತೆ ಈ ಮೂರು ಯೋಜನೆಗಳನ್ನು ಒಳಗೊಂಡ ಸಂಯುಕ್ತವಾಗಿ ನೀರು ಹರಿಯುವ ಕರ್ನಾಟಕ ವಾಟರ್ ಗ್ರಿಡ್ ಕೆನಾಲ್ ಯೋಜನೆ ಜಾರಿ ಕುರಿತಂತೆ ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸುವಂತೆ ತುಮಕೂರು ಸಂಸದ ಜಿ.ಎಸ್. ಬಸವರಾಜು ಆಗ್ರಹಿಸಿದ್ದಾರೆ.
ಪರಮಶಿವಯ್ಯ ನೇತೃತ್ವದಲ್ಲಿನ ಉನ್ನತ ಮಟ್ಟದ ತಾಂತ್ರಿಕ ಸಮಿತಿಯ ತಜ್ಞರಾದ ಪ್ರೊ.ಬಿ.ಆರ್. ಶ್ರೀನಿವಾಸಮೂರ್ತಿ, ಪರಿಸರವಾದಿ ಎಲ್ಲಪ್ಪರೆಡ್ಡಿ, ಸೇರಿದಂತೆ ಹಲವಾರು ಹೆಸರಾಂತ ತಜ್ಞರು ಸೇರಿ ಹೆಡ್ ವರ್ಕ್ಸ್ ಯೋಜನೆಯಲ್ಲಿ ಗಾರ್ಲ್ಯಾಂಡ್ ಕೆನಾಲ್‌ಗೆ ಬದಲಾಗಿ ಟನಲ್ ಅಂಡ್ ಪನಲ್ ಯೋಜನೆ ಜಾರಿಗೊಳಿಸಲು ನಿರ್ಣಯ ಕೈಗೊಂಡು ರಾಜ್ಯ ಸರ್ಕಾರದ ಅನುಮತಿಗೆ ಜಲ ಸಂಪನ್ಮೂಲ ಅಭವೃದ್ಧಿ ಸಂಸ್ಥೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಸರ್ಕಾರ ಶೀಘ್ರವಾಗಿ ಅಗತ್ಯ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಎತ್ತಿನ ಹೊಳೆ ಯೋಜನೆಯ ಹೆಡ್ ವರ್ಕ್ಸ್‌ನ್ನು ಸಹ ಏತ ನೀರಾವರಿಗೆ ಬದಲಾಗಿ ಟನಲ್ ಅಂಡ್ ಫನಲ್ ಮೂಲಕವೇ ಯೋಜನೆ ರೂಪಿಸಲು ಪರಿಣಿತ ತಜ್ಞರು ಸರ್ಕಾರದ ಗಮನ ಸೆಳೆದಿದ್ದಾರೆ. ಈ ಬಗ್ಗೆ ಸರ್ಕಾರ ಧೃಡ ನಿಲುವು ಪ್ರಕಟಿಸಲು ಒತ್ತಾಯಿಸಲಾಗಿದೆ.
ಈಗಾಗಲೇ ತುಮಕೂರಿನ ವೇದಾನಂದಮೂರ್ತಿ ರಾಜ್ಯ ಸರ್ಕಾರಕ್ಕೆ ಟನಲ್ ಅಂಡ್ ಇಂಟೆಕ್ ಮೂಲಕ ಸುಮಾರು 8 ಟಿಎಂಸಿ ಗುರುತ್ವಾಕರ್ಷಣೆ ಮೂಲಕ ಮತ್ತು 8 ಟಿಎಂಸಿ ಲಿಪ್ಟ್ ಮೂಲಕ ಸೇರಿ 16 ಟಿಎಂಸಿ ನೀರಿನ ಯೋಜನೆಯ ಸುರಂಗ ಮಾರ್ಗದಲ್ಲಿನ ಕಲ್ಪನಾ ವರದಿಯನ್ನು ಸಹ ಸಲ್ಲಿಸಿದ್ದಾರೆ. ಪರಮಶಿವಯ್ಯನವರು ಟನಲ್ ಅಂಡ್ ಪನಲ್ ಯೋಜನೆ ಮೂಲಕ ಒಂದನೇ ಹಂತದಲ್ಲಿ ಸುಮಾರು 31 ಟಿಎಂಸಿ ನೀರಿನ ಗುರುತ್ವಾಕರ್ಷಣಾ ಯೋಜನೆಯನ್ನು ರೂಪಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರದ ಮುಂದೆ 2 ರೀತಿಯ ಅಂದರೆ ಟನಲ್ ಅಂಡ್ ಪನಲ್ ಮತ್ತು ಏತ ನೀರಾವರಿ ಯೋಜನೆಗಳಿವೆ. ರಾಜ್ಯ ಸರ್ಕಾರ ಎಲ್ಲ ಪರಿಣತ ತಜ್ಞರ ಸಭೆಯಲ್ಲಿ ಸಮಾಲೋಚನೆ ನಡೆಸಿ, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಗೆ ಸೂಕ್ತ ನಿರ್ದೇಶನ ನೀಡಬೇಕಿದೆ ಎಂದು ತಿಳಿಸಿದ್ದಾರೆ.
ಯೋಜನೆ: ಪಶ್ಚಿಮಾಭಿಮುಖವಾಗಿ ಹರಿಯುವ ಹಳ್ಳಗಳ ಯೋಜನೆ, ಕಾವೇರಿ, ಹೇಮಾವತಿ, ಭದ್ರಾ, ತುಂಗಾ, ಹೀಗೆ ಹಲವಾರು ಯೋಜನೆಗಳ ಪ್ಲಡ್ ಕೆನಾಲ್ ಮೂಲಕ ಮಧ್ಯ ಕರ್ನಾಟಕಕ್ಕೆ ನೀರಣಿಸಲು ವಿವಿಧ ಹಂತಗಳಲ್ಲಿ ಯೋಜನೆಗಳು ರೂಪುಗೊಳ್ಳುತ್ತಿವೆ. ಈ ಎಲ್ಲ ಮೂಲದ ನೀರನ್ನು ಒಂದೇ ಸರ್ವಿಸ್ ಕಾಲುವೆಯ ಅಂದರೆ ಕರ್ನಾಟಕ ವಾಟರ್ ಗ್ರಿಡ್ ಕೆನಾಲ್ ಮೂಲಕ ನೀರು ಹರಿಸುವ ಯೋಜನೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಬಹುತೇಕ ತಜ್ಞರು ಸಕಾರಾತ್ಮಕ ನಿಲುವು ಹೊಂದಿದ್ದಾರೆ ಎಂದರು.
ಲಾಬಿಗೆ ಮಣಿದಿದೆ: ಒಬ್ಬ ಅಧಿಕಾರಿ ಮತ್ತು ಕೆಲ ಗುತ್ತಿಗೆದಾರರ ಪೈಪ್ ಲಾಬಿಗೆ ಮಣಿದಿರುವ ಹಿನ್ನೆಲೆಯಲ್ಲಿ ಈ ಯೋಜನೆ ಸರ್ಕಾರದ ಹಂತದಲ್ಲಿ ನೆನೆಗುದಿಗೆ ಬಿದ್ದಿದೆ. ಆದರೂ ಹಾಸನ ಜಿಲ್ಲೆಯ ಅರಸೀಕೆರೆಯಿಂದ ಎತ್ತಿನಹೊಳೆ ಯೋಜನೆಗೆ ನಿರ್ಮಿಸುವ ಸರ್ವೀಸ್ ಕಾಲುವೆಯನ್ನೇ ವಾಟರ್ ಕೆನಾಲ್ ಆಗಿ ನಿರ್ಮಾಣ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದರು.
ಮುಂದಿನ ತಿಂಗಳೊಳಗೆ ಈ ಎಲ್ಲಾ ನಿರ್ಧಾರಗಳ ಬಗ್ಗೆ ಸ್ಪಷ್ಟ ನಿಲುವು ಕೈಗೊಂಡು ಮಧ್ಯ ಕರ್ನಾಟಕದ ಕುಡಿಯುವ ನೀರಿನ ಯಾವುದೇ ಹೆಸರಿನ ಯೋಜನೆಗೆ ಶಂಕುಸ್ಥಾಪನೆಗೆ ಮುಖ್ಯಮಂತ್ರಿಗಳು ಮುಂದಾಗಬೇಕೆಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement