ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿವಿಗಳು ತುಕ್ಕು ಹಿಡಿಯುತ್ತಿವೆ: ಪ್ರೊ. ಬಲರಾಮ್

Vishwanath S
Updated On : 13 Jan 2014, 1:15 am

ಕ.ಪ್ರ.ವಾರ್ತೆ ,  ತುಮಕೂರು ,  ಜ.12
ಭಾರತೀಯ ವಿಶ್ವ ವಿದ್ಯಾಲಯಗಳಲ್ಲಿ ಸಂಶೋಧನೆಗೆ ಕೊಡುವ ಒತ್ತು ಕಡಿಮೆಯಾಗುತ್ತಿದ್ದು, ಕಲಿಕೆಯ ಕೇಂದ್ರಗಳಾದ ವಿವಿಗಳು ವಿಶೇಷ ತಾಂತ್ರಿಕ ವಿದ್ಯಾಲಯಗಳಾಗಿ ತುಕ್ಕು ಹಿಡಿಯುತ್ತಿವೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಪ್ರೊ. ಪಿ. ಬಲರಾಮ್ ವಿಷಾದಿಸಿದರು. ಅವರು ತುಮಕೂರು ವಿವಿ 7 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದರು.
ಸಾಂಪ್ರದಾಯಿಕ ವಿವಿಗಳು ವಿಜ್ಞಾನ ಮತ್ತು ಮಾನವಿಕ ಅಧ್ಯಯನಕ್ಕೆ ಸೀಮಿತವಾಗಿವೆ. ಈಗ ಎಷ್ಟೋ ರಾಜ್ಯಗಳಲ್ಲಿ ವೈದ್ಯಕೀಯ, ತಾಂತ್ರಿಕ, ಕಾನೂನು ವಿಷಯಗಳಿಗಾಗಿ ಪ್ರತ್ಯೇಕ ವಿವಿಗಳಿವೆ. (ಕೃಷಿ ವಿಷಯ ಪ್ರತ್ಯೇಕವಾಗಿದ್ದು, ಪ್ರಾರಂಭದ ಹಂತದಲ್ಲಿಯೇ ಇದೆ). ಸ್ನಾತಕ ಹಾಗೂ ಸ್ನಾತಕೋತ್ತರ ಅಧ್ಯಯನಗಳು ಬೇರ್ಪಟ್ಟು, ಸ್ನಾತಕ ಕಲಿಕೆಯು ಕೇವಲ ಕಾಲೇಜುಗಳಿಗೆ ಸೀಮಿತವಾಗಿದೆ. ಸ್ನಾತಕೋತ್ತರ ಅಧ್ಯಯನ ನಡೆಯುತ್ತಿರುವ ಕಾಲೇಜುಗಳಲ್ಲಿ ಸಂಶೋಧನಾ ಚಟುವಟಿಕೆಗಳು ಕಡಿಮೆಯಾಗಿ, ಅಧ್ಯಾಪನ ಮತ್ತು ಸಂಶೋಧನೆಗಳು ಪ್ರತ್ಯ-ಪ್ರತ್ಯೇಕವಾಗಿ ಪರಸ್ಪರ ದೂರಾಗಿವೆ. ಸಂಶೋಧನೆಗಾಗಿಯೇ ಸ್ಥಾಪಿಸಿದ ಸಂಸ್ಥೆಗಳು ಅಧ್ಯಾಪನ ಮಾಡದೇ,  ಸ್ನಾತಕ ಹಾಗೂ ಸ್ನಾತಕೋತ್ತರ ಶಿಕ್ಷಣದ ಕಡೆ ಯಾವುದೇ ಗಮನವನ್ನು ಹರಿಸಿಲ್ಲ ಎಂದು ವಿಷಾದಿಸಿದರು.
ಕೈಜೋಡಿಸಿ: 2007 ರ ರಾಷ್ಟ್ರೀಯ ಜ್ಞಾನ ಆಯೋಗದ ವರದಿ ಪ್ರಕಾರ, ನಾವು ದೀರ್ಘಕಾಲೀನ ದೃಷ್ಟಿಕೋನದಿಂದ ಅರ್ಥಪೂರ್ಣವಾದ ಉನ್ನತ ಶಿಕ್ಷಣದ ಸುಧಾರಣೆಯನ್ನು ಮಾಡುವುದು, ಸಂಕೀರ್ಣವಾದುದು ಹಾಗೂ ಕಠಿಣವಾದುದಾದರೂ, ನಾವು ಮಾಡಲೇಬೇಕಾದ ಕೆಲಸ.  ಈ ವರದಿ ಕೆಲವು ಸಲಹೆಗಳನ್ನು ಮಾಡಿದ್ದು, ಅವುಗಳನ್ನು ಅಷ್ಟು ಸುಲಭವಾಗಿ ಕಾರ್ಯರೂಪಕ್ಕೆ ತರುವುದು ಕಷ್ಟಸಾಧ್ಯ. ಈ ರೀತಿಯ ಸುಧಾರಣೆ ಮತ್ತು ಪುನರ್ ರಚನೆ ಕಾರ್ಯ ವಿಶ್ವ ವಿದ್ಯಾಲಯದ ವ್ಯವಸ್ಥೆಯ ಒಳಗಿನಿಂದಲೇ ಬರಬೇಕಿದೆ. ಇದಕ್ಕಾಗಿ ಅಧ್ಯಾಪಕರು, ಆಡಳಿತಾಧಿಕಾರಿಗಳು ಸಕ್ರಿಯವಾಗಿ ಕೈ ಜೋಡಿಸಬೇಕಿದೆ ಎಂದರು.
ಅಧ್ಯಾಪನ ಮತ್ತು ಸಂಶೋಧನೆಯ ಬೇರ್ಪಡಿಸುವಿಕೆ ಭಾರತೀಯ ಉನ್ನತ ಶಿಕ್ಷಣದ ಮಿತಿಗಳಲ್ಲಿ ಒಂದು. ವಿಜ್ಞಾನದ ಸಂದರ್ಭದಲ್ಲಿ ಯಾರು ಬೋಧನೆ ಮಾಡುತ್ತಾನೋ ಅವನಿಗೆ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಕಲಿಕೆಯ ಲಾಭವಾಗುತ್ತದೆ. ವಿದ್ಯಾರ್ಥಿಗಳಿಗೆ ಓರ್ವ ಅತ್ಯುತ್ತಾಹಿ ಮತ್ತು ಪಾಂಡಿತ್ಯ ಪೂರ್ಣ ಬೋಧಕ ಯಾವತ್ತೂ ಸ್ಫೂರ್ತಿಯನ್ನು ಕೊಡುತ್ತಿರುತ್ತಾನೆ. ಪಿಎಚ್‌ಡಿ ಸಂಶೋಧನೆಯಲ್ಲಿ ಅಧ್ಯಯನ ಸೀಮಿತಗೊಳಿಸುವುದು ಸಂಶೋಧಕರು ಮುಂದೆ ಕೈಗೊಳ್ಳಬಹುದಾದ ಸಂಶೋಧನೆಗೆ ಮಾರಕವಾಗುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ಎಷ್ಟೋ ಪ್ರಯೋಗಾಲಯಗಳಿದ್ದು, ಅವು ಕೇವಲ ಸಂಶೋಧನೆ ಮಾಡುತ್ತಿವೆಯೇ ಹೊರತು ಬೋಧನೆಯನ್ನಲ್ಲ.
ಸಾಕಾರವಾಗುತ್ತೆ: ಇದೇ ರೀತಿ ಎಷ್ಟೋ ಕಾಲೇಜು ಮತ್ತು ವಿಶ್ವ ವಿದ್ಯಾಲಯಗಳು ಸಂಶೋಧನೆಗಿಂತ ಬೋಧನೆಗೆ ಹೆಚ್ಚು ಒತ್ತು ಕೊಡುತ್ತಿವೆ. ಐಐಟಿಗಳು ಹಾಗೂ ಹೊಸದಾಗಿ ಸ್ಥಾಪಿಸಲ್ಪಟ್ಟ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು (ಐಐಎಸ್‌ಸಿ ಆರ್) ಸ್ನಾತಕ ಹಾಗೂ ಸ್ನಾತಕೋತ್ತರ ಅಧ್ಯಯನಗಳನ್ನು ಸಂಶೋಧನಾತ್ಮಕ ವಾತಾವಾರಣದಲ್ಲಿ ಕೊಡುತ್ತಿವೆ. ಐಐಟಿಗಳು  ಅರ್ಧ ಶತಮಾನದ ಅನುಭವವನ್ನು ಹೊಂದಿದ್ದರೆ, ಐಐಎಸ್‌ಸಿಆರ್‌ಗಳು ಇನ್ನೂ ಬಾಲ್ಯಾವಸ್ಥೆಯಲ್ಲೇ ಇವೆ. ಸ್ನಾತಕ ಶಿಕ್ಷಣದಲ್ಲಿ ಸಂಶೋಧನಾತ್ಮಕ ಅಂಶಗಳನ್ನು ಅಳವಡಿಸುವುದು ಈಗಿನ ಶಿಕ್ಷಣ ವ್ಯವಸ್ಥೆಯ ಜರೂರಿ. ನನ್ನ ಪ್ರಕಾರ ವಿಜ್ಞಾನಿಗಳು ತಾವು ಬೋಧಕರಾಗಿ ತಮ್ಮ ಕಾರ್ಯವನ್ನು ನಿರ್ವಹಿಸಿದರೆ, ವಿಜ್ಞಾನ ಶಿಕ್ಷಣವನ್ನು ಉತ್ತಮಗೊಳಿಸುವ ನಮ್ಮ ಪ್ರಯತ್ನ ಸಾಕಾರವಾಗುತ್ತದೆ ಎಂದು ತಿಳಿಸಿದರು.
ಅಂತರ್ಶಿಸ್ತೀಯ ಸಂಶೋಧನೆ ಸ್ನಾತಕ ಶಿಕ್ಷಣಕ್ಕೆ ಬೇರೆ ಆಯಾಮ ಪಡೆಯಬೇಕಾಗುತ್ತದೆ. ವಿಜ್ಞಾನ ಹಾಗೂ ತಾಂತ್ರಿಕತೆ ಅನ್ನುವ ವಿಷಯಗಳ ಪ್ರತ್ಯೇಕತೆ ಮಾಡದೆ ವಿಶಾಲ ತಳಹದಿಯ ಮೇಲೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವುದರ ಮೂಲಕ ಹೆಚ್ಚು-ಹೆಚ್ಚು ಜ್ಞಾನ ಶಿಸ್ತುಗಳ ಪರಿಚಯ ಮಾಡಿಸಬಹುದು. ಸಂಶೋಧನಾ ಯೋಜನೆಯಂತಹ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಅವರು ಮುಂದೆ ಸಂಶೋಧನೆಯನ್ನು ಕೈಗೊಳ್ಳುವಂತೆ ಅಣಿಗೊಳಿಸಬಹುದು. ಹಲವು ರೀತಿಯಲ್ಲಿ ಸಂಶೋಧನೆ ಎನ್ನುವುದು ಒಂದು ವ್ಯಸನವಾಗಬಹುದು ಮತ್ತು ಸಂಶೋಧನೆಯ ಬಗ್ಗೆ ಆಸಕ್ತಿಯನ್ನು ಮೊದಲೇ ಮೂಡಿಸುವುದರಿಂದ ವಿಜ್ಞಾನವು ಬಹಳ ಆಕರ್ಷಕ ಕ್ಷೇತ್ರವಾಗಬಹುದು ಎಂದರು.
ಒಟ್ಟುಗೂಡಿಸಬೇಕು: ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ವಿಜ್ಞಾನಗಳನ್ನು ಮತ್ತು ಸಂವಹನ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವುದು ಸೂಕ್ತ. ಸ್ನಾತಕ ವಿಜ್ಞಾನ ಶಿಕ್ಷಣವನ್ನು ಪರಿವರ್ತಿಸುವುದು ತುಂಬಾ ಸವಾಲಿನ ಕೆಲಸ ಎಂದು ತಿಳಿಸಿದರು.
 ನಾಲ್ವರಿಗೆ ಗೌರವ ಡಾಕ್ಟರೇಟ್ ಪ್ರದಾನ
ತುಮಕೂರು: ಮಾಜಿ ಸಚಿವ ಎಚ್.ಜಿ. ಗೋವಿಂದೇಗೌಡ, ಸೂಲಗಿತ್ತಿ ನರಸಮ್ಮ ಸೇರಿದಂತೆ ನಾಲ್ವರಿಗೆ ಭಾನುವಾರ ನಡೆದ ತುಮಕೂರು ವಿವಿ ಏಳನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಸಾವಿರಾರು ಗರ್ಭೀಣಿಯರಿಗೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ ತುಮಕೂರು ಜಿಲ್ಲೆಯ ಪಾವಗಡದ ನರಸಮ್ಮ, ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಹಾವೇರಿ ಜಿಲ್ಲೆಯ ಡಾ. ಪಿ.ಎಸ್. ಶಂಕರ್, ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ 'ಮಲೆನಾಡ ಗಾಂಧಿ' ಎಂದೇ ಹೆಸರಾಗಿರುವ ಎಚ್.ಜಿ. ಗೋವಿಂದೇಗೌಡ ಹಾಗೂ ಉರ್ದು ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿರುವ ತುಮಕೂರಿನವರೇ ಆದ ಶಾಯಿಸ್ತಾ ಯೂಸುಫ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಶರ್ಮಾ ಅವಧಿ ಅವ್ಯವಹಾರ ತನಿಖೆಗೆ ಒಳಪಡಿಸಿ
ತುಮಕೂರು: ವಿವಿ 7 ನೇ ಘಟಿಕೋತ್ಸವದ ವೇಳೆ ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ಎಸ್.ಎಫ್.ಐ, ಡಿವೈಎಫ್‌ಐ ಸಂಘಟನೆಗಳ ಕಾರ್ಯಕರ್ತರು ತುಮಕೂರು ವಿವಿಯ ವಿಶ್ರಾಂತ ಕುಲಪತಿ ಡಾ.ಎಸ್.ಸಿ.ಶರ್ಮಾ  ಅವರ ಅವಧಿಯಲ್ಲಾಗಿರುವ ಅವ್ಯವಹಾರ, ಕಾನೂನು ಬಾಹಿರ ಚಟುವಟಿಕೆ, ಲೋಗೋ ಬದಲಾವಣೆ, ಅವಧಿಗೂ ಮುನ್ನ ಪಿಎಚ್ ಡಿ ನೀಡಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಉನ್ನತ ಶಿಕ್ಷಣ ಸಚಿವ ಆರ್ . ವಿ. ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರೊ. ಕೆ. ದೊರೈರಾಜ್, ಪ್ರೊ. ಜಿ.ಎಂ. ಶ್ರೀನಿವಾಸಯ್ಯ, ಸಿ. ಯತಿರಾಜು, ವಕೀಲ ರಮೇಶ್, ಎಸ್ ಎಫ್‌ಐ ಮುಖಂಡ ಇ. ಶಿವಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ, ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಇತರರಿದ್ದರು.
ಡೀಮ್ಡ್ ವಿವಿ ಪುನರ್ ಮೌಲ್ಯಮಾಪನ
ತುಮಕೂರು: ಭಾರತದ ಅನೇಕ ವಲಯಗಳು ಪರಿವರ್ತನೆಗೊಳ್ಳುತ್ತಿವೆ. ಇಂತಹ ಕಾಲದಲ್ಲಿ ನಮ್ಮ ವಿವಿಗಳು ಮಾತ್ರ ಬಿಕ್ಕಟ್ಟುಗಳನ್ನು ಎದುರಿಸುತ್ತಾ ಕಷ್ಟ ಕಾಲದಲ್ಲಿವೆ. ಜಗತ್ತಿನಲ್ಲಿ ಎಲ್ಲೂ ಕಂಡುಬರದ ಒಂದು ಮುಖ್ಯವಾದ ವ್ಯತ್ಯಾಸವನ್ನು ನಾವಿಂದು ಆಧುನಿಕ ಭಾರತದಲ್ಲಿ ಕಾಣಬಹುದು. ಅದೇನೆಂದರೆ, ಭಾರತ ಆರ್ಥಿಕವಾಗಿ ಮತ್ತು ಔದ್ಯಮಿಕವಾಗಿ ಮುಂದುವರಿಯುತ್ತಾ ಹೋಗುತ್ತಿದ್ದರೆ, ಇಲ್ಲಿಯ ಶೈಕ್ಷಣಿಕ ಮತ್ತು ಸಂಶೋಧನಾತ್ಮಕ ಸಂಸ್ಥೆಗಳು ಮುಂದುವರಿಯುವ ಲಕ್ಷಣಗಳು ಕಂಡುಬರುತ್ತಿಲ್ಲ. ಉನ್ನತ ಶಿಕ್ಷಣ ವಲಯದಲ್ಲಿ ಹೊಸ ಸಂಸ್ಥೆಗಳ ಸಂಖ್ಯೆ ಹೆಚ್ಚಾಗುತ್ತಿದೆಯೇ ವಿನಃ ನಾವು ನಮ್ಮ ಹಳೆಯ ಸಂಸ್ಥೆಗಳನ್ನು ಬೌದ್ಧಿಕವಾಗಿ ಸದೃಢ ಗೊಳಿಸುವಲ್ಲಿ ವಿಫಲರಾಗುತ್ತಿದ್ದೇವೆ. 2007 ರ ರಾಷ್ಟ್ರೀಯ ಜ್ಞಾನ ಆಯೋಗದ ವರದಿ ಪ್ರಕಾರ, ನಾವು ದೀರ್ಘಕಾಲೀನ ದೃಷ್ಟಿಕೋನದಿಂದ ಅರ್ಥಪೂರ್ಣವಾದ ಉನ್ನತ ಶಿಕ್ಷಣ ಸುಧಾರಣೆ ಮಾಡುವುದು ಸಂಕೀರ್ಣವಾದುದು, ಕಠಿಣವಾದುದಾದರೂ, ನಾವು ಮಾಡಲೇಬೇಕಾದ ಕೆಲಸವಾಗಿದೆ. ಈ ರೀತಿಯ ಸುಧಾರಣೆ ಮತ್ತು ಪುನರ್ ರಚನೆ ಕಾರ್ಯ ವಿವಿ ಒಳಗಿನಿಂದಲೇ ಆಗಬೇಕಿದೆ. ಇದಕ್ಕಾಗಿ ಅಧ್ಯಾಪಕರು, ಆಡಳಿತಾಧಿಕಾರಿಗಳು ಸಕ್ರಿಯವಾಗಿ ಕೈ ಜೋಡಿಸಬೇಕು. ಇದರ ಜತೆಗೆ ವಿಶೇಷ ಸಂಸ್ಥೆಗಳನ್ನು ಡೀಮ್ಡ್ ವಿವಿಗಳನ್ನಾಗಿ ಮಾಡುವ ನೀತಿಯನ್ನು ಪುನರ್ ಮೌಲ್ಯಮಾಪನ ಮಾಡಬೇಕಿದೆ ಎಂದು ಬಲರಾಮ್ ಮಾರ್ಮಿಕವಾಗಿ ನುಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement