ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತೆಂಗಿನಲ್ಲಿ ಕೆಂಪು ಮೂತಿ ಹುಳು ನಿರ್ವಹಣೆ ಪ್ರಾತ್ಯಕ್ಷಿಕೆ

Vishwanath S
Updated On : 14 Jan 2014, 1:17 am

ತಿಪಟೂರು: ತಾಲೂಕಿನ ಬಿದರೆಗುಡಿ ಕಾವಲ್‌ನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಘದ ವತಿಯಿಂದ ತೆಂಗಿನಲ್ಲಿ ಸುಧಾರಿತ ಬೇಸಾಯ ಕ್ರಮಗಳು ಮತ್ತು ಮರ ಹತ್ತುವ ಸಾಧನ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ವಿಷಯ ತಜ್ಞ ಡಾ. ಶ್ರೀನಿವಾಸ್ ತೆಂಗಿನ ಕೆಂಪು ಮೂತಿ ಹುಳು ಹಾಗೂ ರೈನೋಸರಾಸ್ ದುಂಬಿಯನ್ನು ಆಕರ್ಷಿಸುವ ಮೋಹಕ ಬಲೆ ಬಳಸುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮತ್ತು ತೆಂಗಿನಲ್ಲಿ ರಸ ಸೋರುವ ರೋಗ ಹಾಗೂ ಅಣಬೆ ರೋಗ ನಿರ್ವಹಣೆ ಕುರಿತು ಮಾಹಿತಿಯನ್ನು ನೀಡಿದರು. ಕೇಂದ್ರದ ವಿಜ್ಞಾನಿಗಳಾದ ಡಾ. ಶಂಕರ್, ಡಾ.ಬಿ. ಮಮತಾ ಸೇರಿದಂತೆ 20ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.
'ಅಧಿಕಾರದ ಆಸೆ ಕಾಂಗ್ರೆಸ್‌ಗೆ ಬಸವರಾಜು'
ತುಮಕೂರು: ಕೇವಲ ಅಧಿಕಾರದ ಆಸೆಗಾಗಿ ಸಂಸದ ಜಿ.ಎಸ್. ಬಸವರಾಜು ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಈಗ ಮತ್ತೆ ಅಧಿಕಾರದ ಆಸೆಯಿಂದ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಎಚ್.ಎನ್. ಚಂದ್ರಶೇಖರ್ ಆರೋಪಿಸಿದ್ದಾರೆ. ಕಾಂಗ್ರೆಸ್‌ನಲ್ಲಿದ್ದು ಸದಾ ಅಲ್ಲಿನ ನಾಯಕರ ಕಾಲೆಳೆಯುತ್ತಾ, ಅದೇ ಪಕ್ಷಕ್ಕೆ ದ್ರೋಹ ಮಾಡುತ್ತಿದ್ದರು. ಅಂದು ಅಧಿಕಾರದಲ್ಲಿದ್ದ ಜೆಡಿಎಸ್ ಜೊತೆಗೆ ಅವರು ಮೈತ್ರಿ ಮಾಡಿಕ್ಕೊಳ್ಳುತ್ತಾ ಕಾಂಗ್ರೆಸ್ ನಾಯಕರ ಸೋಲಿಗೆ ಕಾರಣರಾಗಿದ್ದರು ಎಂದು ಆರೋಪಿಸಿದರು. ನಂತರ ಅಧಿಕಾರದ ದಾಹದಿಂದ ಕಾಡಿಬೇಡಿ ಬಿಜೆಪಿ ಸೇರಿಕೊಂಡರು. ಬಿಜೆಪಿ ಮತ್ತು ಸಂಘ ಪರಿವಾರದವರ ಸಹಕಾರ ಮತ್ತು ಪ್ರಾಮಾಣಿಕ ಪ್ರಯತ್ನದಿಂದ ಮತ್ತೆ ಸಂಸದರಾಗಿ ಆಯ್ಕೆ ಆಗಿದ್ದರೂ ಪಕ್ಷಕ್ಕೆ ಸ್ವಲ್ಪವೂ ನಿಷ್ಠೆ ತೋರದೆ, ಅಥವಾ ಬಿಜೆಪಿಗೆ ರಾಜಿನಾಮೆಯನ್ನೂ ನೀಡದೆ ತನ್ನ ಪುತ್ರನನ್ನು ಶಾಸಕರನ್ನಾಗಿ ಮಾಡುವ ದುರಾಸೆಯಿಂದ ಕೆಜೆಪಿಗೆ ಬೆಂಬಲ ಕೊಡುವ ಗೋಸಂಬೆ ರಾಜಕಾರಣ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಹಿತರಕ್ಷಣಾ ಸಮಿತಿ ಸಭೆ
ತಿಪಟೂರು: ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯನ್ನು  ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜ.17ರ ಶುಕ್ರವಾರ  ಬೆಳಿಗ್ಗೆ 11ಗಂಟೆಗೆ ಕರೆಯಲಾಗಿದೆ.
ಓ. ಧನಂಜಯ ಪ್ರಧಾನ ಕಾರ್ಯದರ್ಶಿ
ಪಾವಗಡ: ತಾ.ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಗೌಡಹಟ್ಟಿ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಓ. ಧನುಂಜಯ ನೇಮಕಗೊಂಡಿದ್ದಾರೆ. ಪಟ್ಟಣದಲ್ಲಿ ನಡೆದ ಮುಖ್ಯೋಪಾಧ್ಯಾಯರ ಸಂಘದ ಸಭೆಯಲ್ಲಿ ತೀರ್ಮಾನಿಸಿ ಅವರನ್ನು ನೇಮಕ ಮಾಡಲಾಗಿದೆ.
ಶಾಸಕರ ಸಂಬಂಧಿ ಸರಗಳ್ಳತನ
ತಿಪಟೂರು: ನಗರದ ಗೋವಿನಪುರ ಬಡಾವಣೆಯ ಕೆಂಪನಂಜಮ್ಮ ಎಂಬ ಶಾಸಕರ ಸಂಬಂದಿಯೊಬ್ಬರು ಹತ್ತಿರದಲ್ಲಿದ್ದ ದೇವಾಲಯಕ್ಕೆ ಪೂಜೆಗೆ ಹೋಗುತ್ತಿದ್ದ ಸಮಯದಲ್ಲಿ ಕಳ್ಳನೊಬ್ಬ ಸರ ಕಿತ್ತ ಘಟನೆ ನಡೆದಿದೆ. ಸರದ ತುಂಡೊಂದು ಮಾತ್ರ ಕಳ್ಳನಿಗೆ ಸಿಕ್ಕಿದ್ದು ಉಳಿದ ಸರ ರಸ್ತೆ ಪಕ್ಕಕ್ಕೆ ಬಿದ್ದಿದೆ. ಕತ್ತಲೆಯಲ್ಲಿ ಕಳ್ಳನಿಗೆ ಸಿಕ್ಕಿಲ್ಲ. ಮಹಿಳೆ ಕೂಗಿಕೊಂಡಿದ್ದರಿಂದ ಕಳ್ಳ ಓಡಿ ಹೋಗಿದ್ದಾನೆ. ರಸ್ತೆ ಪಕ್ಕ ಬಿದ್ದಿದ್ದ ಸರ ಬೆಳಗಾದಾಗ ವ್ಯಕ್ತಿಯೊಬ್ಬರಿಗೆ ಸಿಕ್ಕಿದೆ. ಘಟನೆ  ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.
ಇಂದು ಈದ್ ಮಿಲಾದ್ ಉತ್ಸವ
ಕುಣಿಗಲ್: ಪಟ್ಟಣದ ರಝಾ ಎಜುಕೇಶನಲ್ ಅಂಡ್ ವೆಲ್‌ಫೇರ್ ಟ್ರಸ್ಟ್ ಮತ್ತು ಮಜ್ಲಿಸೇ ಅತಾವುರ್  ಮಜ್ಲಿಸೇ ಇಸ್ಲಾಮಿಯ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜ. 14ರಂದು ಕೋಟೆ ಪ್ರದೇಶದ ಉರ್ದುಶಾಲೆಯ ಅವರಣದಲ್ಲಿ ಈದ್ ಮಿಲಾದ್ ಉತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಉತ್ಸವದ ಅಂಗವಾಗಿ ಮಧ್ಯಾಹ್ನ ಎರಡೂವರೆ ಗಂಟೆಗೆ ಮೆರವಣಿಗೆ ಹಾಗೂ ರಾತ್ರಿ ಎಂಟು ಗಂಟೆಗೆ ಧರ್ಮಗುರು ಮೌಲಾನ ಮುಕ್ತಿಯಾರ್ ಖಾದ್ರಿಯವರಿಂದ ಧಾರ್ಮಿಕ ಪ್ರಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ ಪ್ರಕಟಣೆಯಲ್ಲಿ ತಿಳಿಸಿದೆ.
ಜಿಎಸ್‌ಎಸ್‌ಗೆ ಭಾವನಮನ
ತುಮಕೂರು: ಇಲ್ಲಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದ ರಂಗ ತಾಲೀಮು ಕೊಠಡಿಯಲ್ಲಿ ಜ.16 ರಂದು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರಿಗೆ ಭಾವನಮನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಡಾ. ಲಕ್ಷ್ಮಣದಾಸ್, ಎಸ್. ನಾಗಣ್ಣ, ಪ್ರೊ. ಎಚ್. ವಿ. ವೀರಭದ್ರಯ್ಯ,  ಎನ್. ನಾಗಪ್ಪ, ತು.ರಾ. ಸುಂದರರಾಜ್, ಉಗಮ ಶ್ರೀನಿವಾಸ್  ಭಾಗವಹಿಸಲಿದ್ದಾರೆ.  ಅಧ್ಯಕ್ಷತೆಯನ್ನು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸೋ.ಮು. ಭಾಸ್ಕರಾಚಾರ್ ವಹಿಸಲಿದ್ದಾರೆ. ಮಲ್ಲಿಕಾರ್ಜುನ ಕೆಂಕೆರೆ ಮತ್ತು ತಂಡದವರಿಂದ ಗೀತ ನಮನ ಮತ್ತು ಡೇವಿಡ್ ಮತ್ತು ತಂಡದಿಂದ ಚಿತ್ರ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement