ಶೋಷಿತರೆಲ್ಲರೂ ದಲಿತರೆ: ಈಚನೂರು ಇಸ್ಮಾಯಿಲ್
ತುಮಕೂರು: ಶೋಷಣೆಗೇ ಒಳಗಾದ ಹಲವು ರೀತಿಯ ನೋವುಂಡ ಪ್ರತಿಯೊಬ್ಬರು ದಲಿತರೆ. ನಾನು ಕೂಡ ಹಳ್ಳಿಯ ಸೊಗಡಿನಲ್ಲಿ ಬೆಳೆದು ಜಾತಿ ಮತ್ತು ಬಡತನದ ಕಾರಣದಿಂದ ಹಸಿವು ಮತ್ತು ನೋವು ಅರಿತಿದ್ದೇನೆ. ಈ ಕಾರಣಗಳಿಂದ ನಾನು ಕೂಡ ದಲಿತನೆ ಎಂದು ಸಾಹಿತಿ ಈಚನೂರು ಇಸ್ಮಾಯಿಲ್ ಹೇಳಿದರು.
ದಲಿತ ಸಾಹಿತ್ಯ ಪರಿಷತ್‌ನ ಸರ್ವಸದಸ್ಯರ ಸಭೆಯಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಇಂದು ಧಾರ್ಮಿಕ ಭಯೋತ್ಪಾದನೆಯ ಜೊತೆಗೆ ಅಕ್ಷರ, ಮೌಢ್ಯ, ಜಾತೀಯ ಭಯೋತ್ಪಾದನೆ ಹೆಚ್ಚಾಗಿದ್ದು ಇದರ ನಡುವೆ ಬದುಕುವ ಪರಿಸ್ಥಿತಿ ಉಂಟಾಗಿದೆ. ಮಾನವನ ಮಾನವೀಯ ಸಂಬಂಧಗಳು ಮರೆಯಾಗುತ್ತಿವೆ ಎಂದು ವಿಷಾದಿಸಿದರು.
ವಾಸ್ತವ ಆಯಾಮದಿಂದಲೇ ವರ್ತಮಾನವನ್ನು ಕಟ್ಟುವ ಕೆಲಸವಾಗಬೇಕು. ಮಾನವ ಸಂಬಂಧಗಳನ್ನು ಒಟ್ಟುಗೂಡಿಸಿ ಪರಸ್ಪರ ಹೊಸ ಆಶಯಗಳನ್ನು ಬೆಳೆಸಬೇಕು. ದಲಿತ ಸಾಹಿತ್ಯ ಶೋಷಿತರ ಬದುಕಿನ ಬವಣೆಗಳಿಗೆ ರೂಪಕೊಡುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಡಾ. ಓ. ನಾಗರಾಜು ಮಾತನಾಡಿ ದಲಿತರ ಬದುಕೆ ಒಂದು ಹೋರಾಟವಾಗಿದೆ. ಈ ಹೋರಾಟದ ನಡುವೆಯೂ ದಲಿತರನ್ನು ಬದುಕಲೂ ಬಿಡದ ಈ ವ್ಯವಸ್ಥೆಯಲ್ಲಿ ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಿಕವಾಗಿ ದಲಿತರು ಮೇಲೇಳುವುದು ಕಷ್ಟ ಸಾಧ್ಯವೇ ಸರಿ. ಇಂದು ಕನ್ನಡ ಸಾಹಿತ್ಯ ಪರಿಷತ್ ಬಲಿತ ಸಾಹಿತ್ಯ ಪರಿಷತ್ ಆಗಿದ್ದು, ಶೋಷಿತ ದಲಿತರಿಗೆ ಮತ್ತು ದಲಿತ ಸಾಹಿತ್ಯಕ್ಕೆ ಅಲ್ಲಿ ಪ್ರವೇಶವೇ ಇಲ್ಲದಾಗಿದೆ ಎಂದು ಕಿಡಿಕಾರಿದರು.
ಕಾರ್ಯಕ್ರಮದಲ್ಲಿ ಬಂದಕುಂಟೆ ನಾಗರಾಜುರವರು ಅಧ್ಯಕ್ಷತೆ ವಹಿಸಿದ್ದರು. ದ.ಸಾ.ಪ. ಸರ್ವ ಸದಸ್ಯರ ಸಭೆಯಲ್ಲಿ ಹೋರಾಟಗಾರ ಪ್ರಗತಿ ಪರ ಚಿಂತಕ ಚೇಳೂರು ವೆಂಕಟೇಶ್, ಎಂ.ಸಿ. ನರಸಿಂಹಮೂರ್ತಿ, ಡಾ. ರವಿಕುಮಾರ್ ನೀಹಾ, ಹೊನ್ನಾಂಜನೇಯ, ಡಾ. ಸಂಜೀವರಾಯ, ದ್ವಾರನಕುಂಟೆ ಲಕ್ಷ್ಮಣ್, ಎಸ್.ಆರ್. ಕೃಷ್ಣಮೂರ್ತಿ, ಜಿ.ಕೆ. ನಾಗಣ್ಣ ಮುಂತಾದವರು ಮಾತನಾಡಿದರು.
ಸಭೆಯಲ್ಲಿ ತಾಲೂಕು ಮಟ್ಟದ ಸದಸ್ಯತ್ವ ಮಾಡಿಸಿ ಸಮ್ಮೇಳನ ಮಾಡುವ ಮೂಲಕ ತಾಲೂಕು ಪ್ರತಿನಿಧಿಗಳನ್ನು ಆಯ್ಕೆ ಮಾಡಲು ತೀರ್ಮಾನಿಸಲಾಯಿತು.