ಸತ್ತ ರಾಸುಗಳ ರೈತರಿಗೆ ಪರಿಹಾರ ನೀಡಿ: ಶಾಸಕ
ಕ.ಪ್ರ.ವಾರ್ತೆ , ಕೊರಟಗೆರ , ಜ.13
ತಾಲೂಕಿನಲ್ಲಿ ಕಾಲುಬಾಯಿ ಜ್ವರದಿಂದ 262 ಹಸುಗಳು ಬಳಲುತ್ತಿದ್ದು 53 ಹಸುಗಳು ಸಾವನಪ್ಪಿದೆ. ಸರ್ಕಾರ ಈ ರೈತರಿಗೆ ವಿಶೇಷ ಪರಿಹಾರ ನೀಡಬೇಕು ಎಂದು ಶಾಸಕ ಪಿ.ಆರ್. ಸುಧಾಕರ್ ಲಾಲ್ ಒತ್ತಾಯಿಸಿದರು.
ಅವರು ತಾಲೂಕಿನ ಅಳಾಲಸಂದ್ರದಲ್ಲಿ ಪಶು ಇಲಾಖೆ, ಭಗವಾನ್ ಬುದ್ದ ಗ್ರಾಮೀಣ ಸರ್ವಾಂಗೀಣ ಅಭಿವೃದ್ಧಿ ಸೇವಾ ಸಂಸ್ಥೆ ಮತ್ತು ತುಮಕೂರು ಹಾಲು ಒಕ್ಕೂಟದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಿಶ್ರತಳಿ ಆಕಳು ಮತ್ತು ಕರುಗಳ ಪ್ರದರ್ಶನ ಹಾಗೂ ಬರಡು ರಾಸುಗಳ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ ಕಾಲುಬಾಯಿ ರೋಗಕ್ಕೆ ತುತ್ತಾದ ಕರುವಿಗೆ 10 ಸಾವಿರ, ಹಸುವಿಗೆ 20 ಸಾವಿರ, ಹಾಲು ನೀಡುವ ಹಸುವಿಗೆ 25 ಸಾವಿರ ಪರಿಹಾರ ಧನ ನೀಡಲಾಗುತ್ತಿದೆ. ಇದರೊಂದಿಗೆ ವಿಶೇಷವಾಗಿ ಹಸುವನ್ನು ಉಚಿತವಾಗಿ ವಿತರಿಸುವ ಯೋಜನೆ ಜಾರಿ ಮಾಡಿ ರೈತರನ್ನು ಸಂಕಷ್ಟದಿಂದ ದೂರಮಾಡಬೇಕು ಎಂದರು.
ರೈತರು ತಮ್ಮ ಆರ್ಥಿಕ ಸ್ಥಿತಿ ಉತ್ತಮಗೊಳಿಸಿಕೊಳ್ಳಲು ಹೈನುಗಾರಿಕೆ ಮಾಡುವಂತೆ ಸಲಹೆ ನೀಡಿ, ಹಾಲು ಎಷ್ಟೇ ಉತ್ಪಾದಿಸಿದರೂ ಕೆಎಂಎಫ್ ಖರೀದಿಸುವುದಾಗಿ ಹೇಳಿ ರೈತರ ನೆರವಿಗೆ ಬಂದಿದೆ. ನೀರು, ಬೆಳೆ ಕೊರತೆಯಿಂದ ಕ್ಷೇತ್ರದಲ್ಲಿ ಬರಗಾಲ ತಾಂಡವವಾಡುತ್ತಿರುವ ದಿಸೆಯಲ್ಲಿ ಕಷ್ಟದಲ್ಲಿರುವ ರೈತರಿಗೆ ಹಸು ಸಾಗಾಣೆಕೆ ಒಂದು ವರದಾನವಾಗಲಿದೆ ಎಂದು ಹೇಳಿದರು.
ಪಶುಸಂಗೋಪನೆಯ ಸಹಾಯಕ ನಿರ್ದೇಶಕ ಡಾ. ಎಂ.ಆರ್ ರವಿ ಮಾತನಾಡಿ ಕಾಲುಬಾಯಿ ಜ್ವರದಿಂದ ಹಸುಗಳನ್ನು ರಕ್ಷಿಸಲು ಸರ್ಕಾರ ಫೆ.14 ರಿಂದ ರಾಜ್ಯಾದ್ಯಂತ ಲಸಿಕೆ ಹಾಕುವ ಆಂದೋಲನ ಹಮ್ಮಿಕೊಂಡಿದ್ದು ರೈತರು ತಮ್ಮ ಹಸು-ಕರುಗಳನ್ನು ಕರೆತಂದು ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು.
ಜಿ.ಪಂ ಮಾಜಿ ಅಧ್ಯಕ್ಷೆ ಪ್ರೇಮಾ, ನೀಲಗೊಂಡನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಚೌಡಮ್ಮ, ಸದಸ್ಯ ನಾಗರಾಜು, ಕೆಎಂಎಫ್ ಉಪವ್ಯವಸ್ಥಾಪಕ ಕಾಂತಪ್ಪ, ವಿಸ್ತರಣಾಧಿಕಾರಿ ಜಿ. ಹನುಮಂತಯ್ಯ, ಪಶುವೈದ್ಯರಾದ ಯುವರಾಜ್ ಚೌಹಾಣ್, ಗಟ್ಟಿಯೋಗೀಶ್, ವೆಂಕಟೇಶ್, ಮುಖಂಡರಾದ ಲಿಂಗೇಗೌಡ, ಪಣೆಗಾರ್ ಮಂಜುನಾಥ್, ಮಂಜುನಾಥ್ ಇತರರು ಉಪಸ್ಥಿತರಿದ್ದರು.