ಆಧುನಿಕತೆ ಭರಾಟೆಯಲ್ಲಿ ಓದುವ ಸಂಸ್ಕೃತಿ ಹಾಳು: ಶಾಂತಾ
ತುಮಕೂರು: ಆಧುನಿಕತೆಯ ಭರಾಟೆಯಲ್ಲಿ ಓದುವ ಸಂಸ್ಕೃತಿ ಹಾಳಾಗುತ್ತಿದೆ ಎಂದು ಡಿ. ಶಾಂತ ಸಣ್ಣಗುಡ್ಡಯ್ಯ ವಿಷಾದಿಸಿದರು.
ಅವರು ಇಲ್ಲಿನ ರೆಡ್ಕ್ರಾಸ್ ಬಿಲ್ಡಿಂಗ್ನಲ್ಲಿ ಆರಂಭಿಸಲಾದ ಸಮರ್ಥ ಸಾಹಿತ್ಯ ಭಂಡಾರವನ್ನು ಉದ್ಘಾಟಿಸಿ ಮಾತನಾಡಿದರು.
ಓದು ಎಂಬುದು ಉತ್ತಮ ಸಂಸ್ಕಾರ. ಪುಸ್ತಕ ಪ್ರೀತಿ, ಪುಸ್ತಕದ ಓದು, ಪುಸ್ತಕದ ಬಗೆಗಿನ ಗೌರವ ಮನುಷ್ಯನನ್ನು ಮಾನವೀಯಗೊಳಿಸುತ್ತದೆ ಎಂದರು. ಇಂತಹ ಪುಸ್ತಕ ಸಂಸ್ಕೃತಿಯನ್ನು ಇಂದಿನ ಯುವಜನತೆ ಅಳವಡಿಸಿಕೊಳ್ಳಬೇಕು. ದೂರದರ್ಶನ, ಕಂಪ್ಯೂಟರ್, ಮೊಬೈಲ್ಗಳ ಹಾವಳಿಯಿಂದ ಓದುವ ಸಂಸ್ಕೃತಿ ಹಾಳಾಗುತ್ತಿದೆ. ಇಂದಿನ ಯುವಜನತೆ ಪುಸ್ತಕಗಳನ್ನು ಓದದೆ ವಿಮುಖರಾಗುತ್ತಿದ್ದಾರೆ. ಯುವಜನತೆಯನ್ನು ಮತ್ತೆ ಓದಿನ ಕಡೆಗೆ ಸೆಳೆಯುವ ಪ್ರಯತ್ನವಾಗಬೇಕು ಎಂದರು.
ಈ ದಿಸೆಯಲ್ಲಿ ಸ್ಥಾಪನೆಯಾಗಿರುವ ಸಮರ್ಥ ಸಾಹಿತ್ಯ ಭಂಡಾರ ಒಂದು ಒಳ್ಳೆಯ ಕೆಲಸ ಮಾಡಲಿ. ಓದುಗರಲ್ಲಿ ಪುಸ್ತಕದ ಬಗೆಗಿನ ಪ್ರೀತಿಯನ್ನು ಹೆಚ್ಚಿಸಲಿ ಎಂದರು. ಗ್ರಂಥಾಲಯ ಮತ್ತು ಪುಸ್ತಕ ಮಾಹಿತಿ ಕೇಂದ್ರವಾಗಿ ಉತ್ತಮ ಕೆಲಸ ಮಾಡಬೇಕು. ಈ ದಿಸೆಯಲ್ಲಿ ಈ ಸಂಸ್ಥೆ ಉತ್ತಮ ಕೆಲಸ ಮಾಡಲಿ ಎಂದರು.
ಕೇಂದ್ರವಾಗಲಿ: ಲೇಖಕಿ ಬಾ.ಹ. ರಮಾಕುಮಾರಿ ಮಾತನಾಡಿ ಈ ಸಾಹಿತ್ಯ ಭಂಡಾರ ಸೃಜನಶೀಲ ಚಟುವಟಿಕೆಗಳ ಕೇಂದ್ರವಾಗಲಿ. ಜನರಲ್ಲಿ ಒಳ್ಳೆಯ ಅಭಿರುಚಿಯನ್ನು ಬೆಳೆಸುವುದರ ಜತೆಗೆ ಓದುವ ದಾಹ ತಣಿಸಿ ಓದುಗರಲ್ಲಿ ಸಂಸ್ಕೃತಿ ಹೆಚ್ಚಿಸಲಿ ಎಂದರು. ಪತ್ರಕರ್ತ ಎಸ್. ನಾಗಣ್ಣ ಮಾತನಾಡಿ ಸಮರ್ಥ ಸಾಹಿತ್ಯ ಬಂಡಾರದವರು ಒಳ್ಳೆಯ ಅಕ್ಷರ ವ್ಯವಸಾಯವನ್ನು ಕೈಗೊಂಡಿದ್ದಾರೆ.
ಈ ವ್ಯವಸಾಯ ತೃಪ್ತಿಕರವಾಗಲಿ ಎಂದರು. ಮಾಜಿ ಶಾಸಕ ಎಚ್. ನಿಂಗಪ್ಪ, ಎಂ. ಬಸವಯ್ಯ, ಸಿ.ಎನ್. ಸುಗುಣದೇವಿ, ಕೆ.ಪಿ. ನಟರಾಜ್ ಹಾಜರಿದ್ದರು. ಸುರಭಿ ಪ್ರಾರ್ಥಿಸಿ, ಎಂ.ಎಚ್. ನಾಗರಾಜ್ ಸ್ವಾಗತಿಸಿ ಅಶೋಕ್ ಕುಮಾರ್ ವಂದಿಸಿದರು. ರಾಣಿ ಚಂದ್ರಶೇಖರ್ ನಿರೂಪಿಸಿದರು.