ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ
ಪಾವಗಡ: ಕ್ಷುಲ್ಲಕ ಕಾರಣದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದು ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಅವಮಾನಪಡಿಸಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ ಘಟನೆ ತಾಲೂಕಿನ ಟಿ.ಎನ್.ಕೋಟೆಯಲ್ಲಿ ನಡೆದಿದೆ.
ಸವರ್ಣಿಯರಿಂದ ಹಲ್ಲೆಗೆ ಒಳಗಾದ ವ್ಯಕ್ತಿ ದಲಿತ ವರ್ಗಕ್ಕೆ ಸೇರಿದ ಹನುಮಂತರಾಯ(30)ಎಂಬುವವರು. ಅಹಿಂದ ಸಮಾವೇಶಕ್ಕೆ ಟಿ.ಎನ್. ಕೋಟೆ ಗ್ರಾಮದ ಅನೇಕ ಮಂದಿ ಕಾರ್ಯಕರ್ತರು ಬೆಂಗಳೂರಿಗೆ ತೆರಳಿದ್ದು ಸಮಾವೇಶ ಮುಗಿಸಿಕೊಂಡು ಬೆಂಗಳೂರಿನಿಂದ ಗ್ರಾಮಕ್ಕೆ ವಾಪಸಾಗುವ ಸಂದರ್ಭದಲ್ಲಿ ತಮ್ಮ ಗ್ರಾಮಕ್ಕೆ ಬರುವ ಬಸ್ನ ನಿಖರ ಮಾಹಿತಿ ಸಿಗದ ಕಾರಣ ಜವಾಬ್ದಾರಿ ವಹಿಸಿಕೊಂಡ ಶ್ರೀನಿವಾಸ್ ಅವರೊಂದಿಗೆ ಮಾತನಾಡಿದಾಗ ಜಗಳ ಶುರುವಾಗಿದೆ.
ನಂತರ ಬಸ್ನಲ್ಲಿಯೇ ಈ ಇಬ್ಬರ ಮಧ್ಯೆ ಜಗಳ ತಾರಕಕ್ಕೇರಿದ್ದನ್ನು ಗಮನಿಸಿದ ಇತರ ಕಾರ್ಯಕರ್ತರು ಜಗಳ ಬಿಡಿಸಿ ಇಬ್ಬರನ್ನೂ ಸಮಾಧಾನ ಪಡಿಸಿದ್ದಾರೆ. ಗ್ರಾಮಕ್ಕೆ ಬಂದ ನಂತರ ಸವರ್ಣೀಯರ ಗುಂಪು ಕಟ್ಟಿಕೊಂಡ ಶ್ರೀನಿವಾಸ್ ಬಸ್ ನಿಲ್ದಾಣದಲ್ಲಿದ್ದ ಹನುಮಂತರಾಯನನ್ನು ಏಕಾಏಕಿ ಹಿಡಿದು ದೌರ್ಜನ್ಯವೆಸಗಿ ಮಾರಣಾಂತಿಕ ಹಲ್ಲೆ ಹಾಗೂ ಜಾತಿ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ.
ಸವರ್ಣೀಯರ ಗುಂಪಿನಿಂದ ಪೆಟ್ಟು ತಿಂದ ಹನುಮಂತರಾಯ ಭಯಭೀತನಾಗಿ ಅಲ್ಲಿಂದ ಕೂಡಲೇ ತಮ್ಮ ಮನೆಗೆ ದೌಡಾಯಿಸಿದ. ಮನೆಗೆ ತೆರಳಿದ ಸರ್ವಣೀಯರ ಗುಂಪು ಮನೆಗೆ ಕಲ್ಲು ತೂರಾಟ ನಡೆಸಿ ತಮ್ಮ ಮಕ್ಕಳೊಂದಿಗೆ ಮನೆಯಲ್ಲಿಯೇ ಅವಿತಿದ್ದ ಆತನ ಪತ್ನಿಯನ್ನೂ ನಿಂದಿಸಿದ ಎನ್ನಲಾಗಿದೆ. ಹಲ್ಲೆ ಮತ್ತು ಅವಮಾನಕ್ಕೆ ಒಳಗಾದ ಹನುಮಂತರಾಯ ತಾ.ಅರಸೀಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ದೂರಿನ ಮೇರೆಗೆ ರಮೇಶ್, ಮೋಹನ್, ಶ್ರೀನಿವಾಸ್(ಶೀನಾ) ನಾಗರಾಜ್, ಲಕ್ಷ್ಮಣ್ ಸೇರಿದಂತೆ ಅನೇಕ ಮಂದಿ ಆರೋಪಿಗಳ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಘಟನೆಯನ್ನು ಇಲ್ಲಿನ ವಿವಿಧ
ದಲಿತಪರ ಸಂಘಟನೆಗಳು ಖಂಡಿಸಿವೆ.