ಪ್ರಾಂತೀಯ ಭಾಷೆಯಲ್ಲೇ ಶಿಕ್ಷಣ ಅಗತ್ಯ
ತುಮಕೂರು: ಇಂದು ಎಲ್ಲೆಡೆ ಇಂಗ್ಲಿಷ್ ವ್ಯಾಮೋಹ ಹೆಚ್ಚುತ್ತಿದ್ದು, ಮಕ್ಕಳು ಶೈಕ್ಷಣಿಕವಾಗಿ ಉತ್ತಮ ಪ್ರಗತಿ ಸಾಧಿಸಬೇಕಾದರೆ ಪ್ರಾಂತೀಯ ಭಾಷೆಯಲ್ಲೇ ಶಿಕ್ಷಣ ಕೊಡಿಸುವುದು ಅಗತ್ಯವಾಗಿದೆ ಎಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದರು.
ಅವರು ನಗರದ ಬಡ್ಡಿಹಳ್ಳಿಯಲ್ಲಿರುವ ಎಸ್‌ಆರ್‌ಎಸ್ ಇಂಗ್ಲಿಷ್ ಮೀಡಿಯಂ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಗುವು ದಿನನಿತ್ಯವೂ ಬಳಸುವ ಆಡು ಭಾಷೆಯಲ್ಲಿ ಶಿಕ್ಷಣ ಕಲಿತರೆ ಅದು ಎಲ್ಲಾ ವಿಷಯವನ್ನು ಗ್ರಹಿಸುತ್ತದೆ. ನಂತರ ರಾಷ್ಟ್ರೀಯ ಭಾಷೆ ಹಿಂದಿ ಹಾಗೂ ವ್ಯವಹಾರಿಕೆ ಭಾಷೆ ಇಂಗ್ಲಿಷ್ ಕಲಿಕೆ ಅಗತ್ಯ. ಇದರ ಜೊತೆಗೆ ಇತರೆ ಭಾಷೆಗಳನ್ನು ಕಲಿತರೆ ತನ್ನ ಜ್ಞಾನವೂ ವೃದ್ಧಿಯಾಗಿ ಬೆಳವಣಿಗೆಯಾಗಲು ಸಹಕಾರಿಯಾಗುತ್ತದೆ ಎಂದರು.
ಪೋಷಕರು ತಮ್ಮ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಾಲೆಗಳ ಶೈಕ್ಷಣಿಕ ಪ್ರಗತಿಯ ಜೊತೆಗೆ ತಾವೂ ಕೂಡ ಮಕ್ಕಳ ಬೆಳವಣಿಗೆಗೆ ಸಹಕಾರಿಗಳಾಗಬೇಕೆಂದು ಹೇಳಿದರು.
ಪೋಷಕರ ಜವಾಬ್ದಾರಿ: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಈಶ್ವರಯ್ಯ ಮಾತನಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಜವಾಬ್ದಾರಿ ಪೋಷಕರ ಮೇಲಿದೆ. ಉತ್ತಮ ಸಂಸ್ಕೃತಿ, ಸಂಸ್ಕಾರಗಳಿಂದ ಮಕ್ಕಳನ್ನು ಬೆಳೆಸಬೇಕಾಗಿದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳು ಭಾಗವಹಿಸುವಿಕೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಅವರ ಬೆಳವಣಿಗೆಗೆ ಈ ಚಟುವಟಿಕೆಗಳು ಪೂರಕವಾಗುತ್ತವೆ ಎಂದು ತಿಳಿಸಿದರು.
ಪತ್ರಕರ್ತ ಚಿ.ನಿ. ಪುರುಷೋತ್ತಮ್ ಮಾತನಾಡಿ ಶಾಲಾ ವಾರ್ಷಿಕೋತ್ಸವಗಳು ವಿದ್ಯಾರ್ಥಿಗಳಲ್ಲಿ ಹುದುಗಿರುವ ಕಲೆಯನ್ನು ಹೊರ ತೆಗೆಯುವ ಉತ್ಸವಗಳಾಗಬೇಕು, ತುಮಕೂರು ಜಿಲ್ಲೆ ಕಲೆ, ಸಾಹಿತ್ಯ, ಸಾಂಸ್ಕೃತಿಕವಾಗಿ ತನ್ನದೇ ಆದ ಸ್ಥಾನ ಹೊಂದಿದೆ. ಬೆಳೆಯುವ ಪ್ರತಿಯೊಂದು ಮಗುವಿನಲ್ಲೂ ತನ್ನದೇ ಆದ ಕಲೆ ಇರುತ್ತದೆ. ಆ ಕಲೆಯನ್ನು ಹೊರ ತೆಗೆದು ಪ್ರೋತ್ಸಾಹಿಸುವ ಕೆಲಸ ಆಗಬೇಕೆಂದರು.
ಅಸಮಾನತೆ: ಇಂದು ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಸಮಾನತೆ ಕಂಡು ಬರುತ್ತಿದೆ. ಬಡವ, ಬಲ್ಲಿದ ಎನ್ನುವ ತಾರತಮ್ಯವಿಲ್ಲದೆ ಎಲ್ಲರಿಗೂ ಏಕರೂಪ ಶಿಕ್ಷಣ ಜಾರಿಯಾಗಬೇಕು, ಮಾತೃಭಾಷಾ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದು ಅಗತ್ಯವಾಗಿದೆ. ನಗರದಲ್ಲಿ ಎಸ್‌ಆರ್‌ಎಸ್ ವಿದ್ಯಾಸಂಸ್ಥೆ ಕೆಲವೇ ವರ್ಷಗಳಲ್ಲಿ ಪ್ರಗತಿಯ ದಾಪುಗಾಲು ಹಾಕುತ್ತಿರುವುದು ಈ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯಕ್ಷಮತೆ ಎದ್ದು ಕಾಣುತ್ತದೆ ಎಂದು ನುಡಿದರು.
ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಸ್. ಹಾಲನೂರು ಲೇಪಾಕ್ಷ್ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳಿಗೆ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮವಾದ ಶಿಕ್ಷಣ ನೀಡಬೇಕು ಎನ್ನುವ ಉದ್ದೇಶದಿಂದ ಸಂಸ್ಥೆ ಸ್ಥಾಪಿಸಿದ್ದು, ಗ್ರಾಮೀಣ ಪ್ರದೇಶದ ಅನೇಕ ಮಕ್ಕಳು ನಮ್ಮ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ಸಂತಸ ಮೂಡಿದೆ ಎಂದರು.
ಪತ್ರಕರ್ತ ಎಸ್. ಹರೀಶ್ ಆಚಾರ್ಯ, ಲೇಖಕಿ ಹಾಗೂ ಉಪನ್ಯಾಸಕಿ ಡಾ.ಟಿ.ಆರ್. ಲೀಲಾ ಲೇಪಾಕ್ಷ್, ಮುಖ್ಯ ಶಿಕ್ಷಕ ಎಸ್. ಕೃಷ್ಣಪ್ಪ, ಸತೀಶ್, ಸುಭಾಷ್ ಎಚ್. ಲೇಪಾಕ್ಷ್, ರಾಜಶೇಖರ್ ಮೊದಲಾದವರು ಭಾಗವಹಿಸಿದ್ದರು.