ಬದುಕೆಂಬ ಸಂತೆಯಲ್ಲಿ ಉತ್ತಮ ಸರಕನ್ನು ಕೊಳ್ಳಿ
ಚಿಕ್ಕನಾಯಕನಹಳ್ಳಿ: ಅನಿಶ್ಚಿತವಾದ ಜೀವನದಲ್ಲಿ ಗೊಂದಲಗಳ ನಡುವೆ ಬದುಕಿನ ನೆಮ್ಮದಿಯನ್ನು ನೀಡಲು ಮಠಗಳಿಂದ ಮಾತ್ರ ಸಾಧ್ಯ ಎಂದು ತಮ್ಮಡೀಹಳ್ಳಿ ವಿರಕ್ತಮಠಾಧ್ಯಕ್ಷರಾದ ಡಾ. ಅಭಿನವಮಲ್ಲಿಕಾರ್ಜನ ಸ್ವಾಮೀಜಿ ನುಡಿದರು.
ಅವರು ಶ್ರೀಮಠದಲ್ಲಿ ಏರ್ಪಡಿಸಿದ್ದ ಲಿಂಗೈಕ್ಯ ಶ್ರೀಗಳ 5ನೇ ಪುಣ್ಯಸ್ಮರಣೆ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಕಲ್ಪ ನುಡಿಗಳನ್ನಾಡುತ್ತಾ, ನೀಡುವ ಭಕ್ತರಿಗೆ ಬರಗಾಲವೆಂಬ ಚಿಂತೆಯಿಲ್ಲ, ಶ್ರೀಮಠ ಭಕ್ತರ ಭಾವನೆಗಳಿಗೆ ಸದಾ ಸ್ಪಂದಿಸುತ್ತಾ ಬಂದಿರುವ ಕಾರಣ, ತಮಗಿದ್ದುದರಲ್ಲೇ ಮಠಗಳಿಗೆ ದಾನಮಾಡುವ ಉದಾತ್ತ ಗುಣವನ್ನು ಬೆಳಸಿಕೊಂಡಿದ್ದಾರೆ ಎಂದರು.
ಕುಪ್ಪೂರು -ಗದ್ದಿಗೆ ಮಠಾಧ್ಯಕ್ಷರಾದ ಡಾ. ಯತೀಶ್ವರಶಿವಾಚಾರ್ಯ ಸ್ವಾಮೀಜಿ ಮಾತನಾಡುತ್ತಾ, ಮಠಗಳಿಗೆ ಲಕ್ಷಗಳನ್ನು ಕೊಡುವ ಬದಲು ಲಕ್ಷ್ಯ ಕೊಡುವುದು ಭಕ್ತರ ಕರ್ತವ್ಯ. ಭಕ್ತನ ಮೇಲೆ ಗುರುವಿಗೆ, ಗುರುವಿನ ಮೇಲೆ ಭಕ್ತರಿಗೆ ಲಕ್ಷವಿರಲಿ. ಸದಾ ಮಠಮಾನ್ಯಗಳು ನಮ್ಮ ಮನೆಗಳೆಂಬ ಭಾವನೆ ಭಕ್ತರಲ್ಲಿ ಬರಲಿ. ಲಿಂಗೈಕ್ಯ ಹಿರಿಯ ಶ್ರೀಗಳು ರಾಜ್ಯದ ಮೂಲೆಮೂಲೆಗಳಲ್ಲಿ ಯಾವುದೇ ನೂತನ ದೇವಾಲಯವಿರಲಿ ಕಲಶ ಸ್ಥಾಪನೆಯನ್ನು ನೇರವೇರಿಸಿ ಬರುತ್ತಿದ್ದರು. ಅವರೆಂದು ಭಕ್ತರಲ್ಲಿ ಭೇದವೆಣಿಸಲಿಲ್ಲ. ನೀಡಿದವರು ನಮ್ಮವರೇ, ನೀಡದವರು ನಮ್ಮವರೇ ಎಂಬ ಧ್ಯೇಯ ಅವರಲ್ಲಿತ್ತು.
ರಾಜಕಾರಣಿಗಳು ಒಡೆದ ಸಮಾಜವನ್ನು ಧಾರ್ಮಿಕ ಕೇಂದ್ರಗಳು ಒಂದುಗೂಡಿಸುತ್ತವೆ. ಮಠಗಳು ಧಾರ್ಮಿಕ ಕೇಂದ್ರಗಳಾಬೇಕೆ ಹೊರತು ವಾಣಿಜ್ಯ ವ್ಯವಹಾರ ಕೇಂದ್ರಗಳಾಗಬಾರದು. ಇತ್ತೀಚೆಗೆ ಗಲ್ಲಿಗೊಂದರಂತೆ ಮಠಗಳು ತಲೆ ಎತ್ತಿ ಮಠಗಳ ಬಗ್ಗೆ ಜನರಲ್ಲಿದ್ದ ಭಾವನೆ ಕಡಿಮೆಯಾಗುತ್ತಿದೆ. ಸರ್ಕಾರ ಮಠಗಳಿಗೆ ಕೊಟ್ಟ ಅನುದಾನ ದುರುಪಯೋಗವಾಗಿಲ್ಲ. ಒಂದು ವೇಳೆ ಕೊಡದಿದ್ದರು ಮಠಗಳನ್ನು ನಡೆಸುವ ಶಕ್ತಿ ಮಠಾಧೀಶರಿಗೆ ಇದೆ. ಯಾವುದೇ ಅನುದಾನ ಬೇಡದೆ ಸಿದ್ದಗಂಗಾ ಮಠ ಹಿಂದಿನಿಂದಲು ಎಲ್ಲಾ ಜಾತಿಯ ಜನರಿಗೂ ಸಂಸ್ಕಾರ ನೀಡುತ್ತಾ ಬಂದಿದೆ. ರಾಜಕಾರಿಣಿಗಳು ಧರ್ಮಕ್ಕೆ ಮೊದಲ ಆದ್ಯತೆ ನೀಡಬೇಕು.
ಈಗಿರುವ ಸರ್ಕಾರ ಧರ್ಮಕ್ಕೆ ಬೆಂಬಲ ನೀಡುತ್ತಿಲ್ಲ. ರಾಜಕಾರಣಿಗಳು ಧಾರ್ಮಿಕ ಸಂಸ್ಥೆಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕು. ಯಡಿಯೂರಪ್ಪನವರು ಮಠಗಳಿಗೆ ನೀಡಿದ ಉದಾರವಾದ ದೇಣಿಗೆಯನ್ನು ಮಠಗಳು ಸಮಾಜ ಕಾರ್ಯಕ್ಕೆ ವಿನಿಯೋಗಿಸಿವೆ ಎಂದರು.