ರೊಪ್ಪಕ್ಕೆ ಬೀದಿನಾಯಿಗಳ ದಾಳಿ: 10 ಕ್ಕೂ ಹೆಚ್ಚು ಕುರಿ ಸಾವು
ಗುಬ್ಬಿ: ಬೀದಿ ನಾಯಿಗಳ ಗುಂಪೊಂದು ಕುರಿ ರೊಪ್ಪಕ್ಕೆ ನುಗ್ಗಿ ಸುಮಾರು 10 ಕ್ಕೂ ಹೆಚ್ಚು ಕುರಿ ಹಾಗೂ ಕುರಿ ಮರಿಗಳನ್ನು ಕಚ್ಚಿ ಸಾಯಿಸಿರುವ ಘಟನೆ ತಾಲೂಕಿನ ಅಮ್ಮನಘಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೋಡಿಹಟ್ಟಿ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.
ಗ್ರಾಮದ ಪಕ್ಕದಲ್ಲಿದ್ದ ಕುರಿ ರೊಪ್ಪಕ್ಕೆ ರಾತ್ರಿ ವೇಳೆ ನುಗ್ಗಿದ ಬೀದಿನಾಯಿಗಳ ಗುಂಪು ರೊಪ್ಪದಲ್ಲಿದ್ದ ಕುರಿ ಹಾಗೂ ಕುರಿ ಮರಿಗಳನ್ನು ಮನಬಂದಂತೆ ಕಚ್ಚಿದ್ದು 6 ಕುರಿಗಳು ಹಾಗೂ 3 ಮರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ. ಉಳಿದೆರಡು ಕುರಿಗಳನ್ನು ನಾಯಿಗಳು ಎಳೆದುಕೊಂಡು ಹೋಗಿವೆ. ಸುಮಾರು 50 ಸಾವಿರದಷ್ಟು ನಷ್ಟ ಸಂಭವಿಸಿದೆ ಎಂದು ಕುರಿ ಮಾಲೀಕರು ತಿಳಿಸಿದ್ದಾರೆ.
ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು ಹಗಲು ವೇಳೆಯಲ್ಲಿಯೇ ಕುರಿ ಹಾಗೂ ಮನುಷ್ಯರ ಮೇಲೆರಗುತ್ತವೆ ಆದ್ದರಿಂದ ಸಂಬಂದಿಸಿದವರು ಕೂಡಲೇ ಬೀದಿ ನಾಯಿಗಳ ಅಟ್ಟಹಾಸಕ್ಕೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಸದಸ್ಯ ಸಿದ್ದರಾಜು, ಪಶು ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.