ವಿದೇಶಿ ಅಂಧಾನುಕರಣೆಯಿಂದ ದೇಸಿ ಸಂಸ್ಕೃತಿ ನಶಿಸುತ್ತಿದೆ: ಕವಿತಾಕೃಷ್ಣ
ಕ.ಪ್ರ.ವಾರ್ತೆ , ತುಮಕೂರು , ಜ.14
ವಿದೇಶಿ ಸಂಸ್ಕೃತಿ ಅಂಧಾನುಕರಣೆಯಿಂದ ಭಾರತೀಯ ಸಂಸ್ಕೃತಿ ನಶಿಸುತ್ತಿದೆ ಎಂದು ವಿದ್ಯಾವಾಚಸ್ಪತಿ ಕವಿತಾಕೃಷ್ಣ ಆತಂಕ ವ್ಯಕ್ತಪಡಿಸಿದರು.
ಅವರು ತುಮಕೂರಿನ ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆ ಪ್ರಥಮ ವಾರ್ಷಿಕೋತ್ಲವದ ಅಂಗವಾಗಿ ಜರುಗಿದ ಜಾನಪದ ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.
ಅಂಧಾನುಕರಣೆಯಿಂದಾಗಿ ಭಾವಜೀವಿಗಳು ರಚಿಸಿದ ಅಮೂಲ್ಯ ಜಾನಪದ ಸಂಪತ್ತು ನಾಶವಾಗುತ್ತಿದೆ ಎಂದು ವಿಷಾದಿಸಿದರು. ನಮ್ಮ ದೇಸಿ ಕಲೆಗಳು ಬದುಕನ್ನು ಕಟ್ಟಿಕೊಡುವಲ್ಲಿ ತುಂಬಾ ಪರಿಣಾಮಕಾರಿ. ನೈತಿಕತೆ
ಬೆಳೆಸುವಲ್ಲಿ ಸಹಕಾರಿ. ಜಾನಪದ ಸಾಹಿತ್ಯ ಕಲೆಗಳನ್ನು ಪುನರುಜ್ಜೀವನಗೊಳಿಸಲು ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆ ಮುಂದಾಗಬೇಕೆಂದು ಕವಿತಾಕೃಷ್ಣ ಕರೆ ನೀಡಿದರು.
ವ್ಯಕ್ತಿಗಿಂತ ಸಮುದಾಯ ದೊಡ್ಡದು. ಈ ಹೇಳಿಕೆ ನೆನಪಿನಲ್ಲಿಟ್ಟುಕೊಂಡು ವೇದಿಕೆ ಮುನ್ನಡೆಯಲಿ ಎಂದು ವಿದ್ಯಾವಾಚಸ್ಪತಿಗಳು ಕಿವಿ ಮಾತು ಹೇಳಿದರು.
ವೇದಿಕೆಯ ಗೌರವಾಧ್ಯಕ್ಷ ಎಚ್. ಈರಣ್ಣ ಮಾತನಾಡಿ, ಜಾನಪದ ಕಲೆಗಳು ಸುಸಂಸ್ಕೃತವಾದವು. ಅವುಗಳನ್ನು ರಕ್ಷಿಸಲು ನಮ್ಮ ವೇದಿಕೆ ಕಂಕಣ ಬದ್ಧವಾಗಿದೆ ಎಂದು ತಿಳಿಸಿದರು.
ಅತಿಥಿಗಳಾಗಿದ್ದ ಬೆಳ್ಳಿ ಲೋಕೇಶ್, ಪ್ರೇಮ ಹೆಗಡೆ ಮಾತನಾಡಿದರು. ವೇದಿಕೆಯ ಅಧ್ಯಕ್ಷ ವೈ.ಎನ್. ಹೊಸಕೋಟೆ ನಟರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿ ಕರ್ನಾಟಕ ಪ್ರಾಚೀನ ಕಲಾ ಪರಂಪರೆಯನ್ನು ಮರು ಹುಟ್ಟುಗೊಳಿಸಲು ಜನತೆ ಸಹಕರಿಸಬೇಕೆಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಕಲಾವಿದರನ್ನು ಗೌರವಿಸಲಾಯಿತು. ಸುಗ್ಗಿ ಕುಣಿತ, ವೀರಗಾಸೆ, ಕಂಸಾಳೆ, ಗೀಗಿಪದ ಮುಂತಾದ ಕಲೆಗಳನ್ನು ಪ್ರದರ್ಶಿಸಲಾಯಿತು. ಎನ್. ವಿಜಯ್ ಸ್ವಾಗತಿಸಿ, ರಾಜಪ್ಪ ವಂದಿಸಿ, ಅಭಿಷೇಕ್ ನಿರೂಪಿಸಿದರು.