ಶಿಕ್ಷಕ ನರಸಿಂಹಯ್ಯ ಶವ ಪತ್ತೆ, ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ
ಗುಬ್ಬಿ: ಕಳೆದ ಮೂರುದಿನಗಳ ಹಿಂದೆ ಶೈಕ್ಷಣಿಕ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬಳು ಕಾಲುಜಾರಿ ನೀರಿಗೆ ಬಿದ್ದಾಗ ಆಕೆಯನ್ನು ರಕ್ಷಿಸಲು ಹೋದ ಶಿಕ್ಷಕ ನರಸಿಂಹಯ್ಯ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ತೀವ್ರ ಶೋಧ ನಡೆಸಿದ ನಂತರ ಮಂಗಳವಾರ ಬೆಳಗ್ಗೆ ಅವರ ಶವ ಶವ ಪತ್ತೆಯಾಗಿದೆ.
ಪಟ್ಟಣದ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಆವರಣದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಕೆಲ ಸಮಯ ಇಡಲಾಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಈಶ್ವರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ. ಬಸವರಾಜು, ಕ್ಷೇತ್ರ ಸಮನ್ವಯಾಧಿಕಾರಿ ನರೇಂದ್ರಕುಮಾರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಜಿ. ನಾಗಭೂಷಣ್, ಕಾರ್ಯದರ್ಶಿ ಕೆ.ವಿ.ನಾರಾಯಣ್, ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ. ಕರಿಯಪ್ಪ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗೊರವಯ್ಯ, ಕಾರ್ಯದರ್ಶಿ ಎನ್.ಟಿ.ಪ್ರಕಾಶ್, ಜಿಲ್ಲಾ ಖಜಾಂಚಿ ಬಿ.ಸಿ.ಶಿವಣ್ಣ, ಸಿ.ಆರ್.ಪಿ.ವೆಂಕಟೇಶ್, ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಬಂದಗುಂಟೆ ನಾಗರಾಜಯ್ಯ ಸೇರಿದಂತೆ ಶಿಕ್ಷಕ ಸಂಘಟನೆಯ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆದರು.
ನಂತರ ಶಿಕ್ಷಕರ ಸ್ವಗ್ರಾಮ ಅಮ್ಮನಘಟ್ಟದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಬಂದಗುಂಟೆ ನಾಗರಾಜಯ್ಯ ಜೀವದ ಹಂಗುತೊರೆದು ನೀರಿನಲ್ಲಿ ಮುಳುಗಿದ ವಿದ್ಯಾರ್ಥಿನಿಯನ್ನು ಉಳಿಸಲು ಹೋಗಿ ತಾನು ನೀರಿನಲ್ಲಿ ಮುಳುಗಿ ಮೃತಪಟ್ಟ ಶಿಕ್ಷಕ ನರಸಿಂಹಯ್ಯ ಅವರಿಗೆ ಶೌರ್ಯ ಪ್ರಶಸ್ತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.