10 ಆಮೆ ಕೊಂದಿದ್ದಕ್ಕೆ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಖಂಡನೆ
ತುಮಕೂರು: ನಾಗವಲ್ಲಿ ಅಮಾನಿಕೆರೆಯಲ್ಲಿರುವ ಮೀನುಗಳನ್ನು ಹಿಡಿಯಲು ಬಂದಿದ್ದವರಿಗೆ ಮೀನು ಹಿಡಿಯಲು ಹಾಕಿದ ಬಲೆಯಲ್ಲಿ ಸಿಕ್ಕಿ ಬಿದ್ದಿದ್ದ ಅಪರೂಪದ ಎರಡು ಪ್ರಭೇದಕ್ಕೆ ಸೇರಿದ 10 ಆಮೆಗಳನ್ನು ಕೊಂದು ತಿಂದಿರುವುದನ್ನು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಅಧ್ಯಕ್ಷ ಬಿ.ವಿ. ಗುಂಡಪ್ಪ ಖಂಡಿಸಿದ್ದಾರೆ.
ಕೆರೆ ಅಂಗಳದಲ್ಲಿ ಶಾಲಾ ಮಕ್ಕಳು ಕೆರೆ ಅಧ್ಯಯನ ಹಾಗೂ ಪಕ್ಷಿ ವೀಕ್ಷಣೆ ಮಾಡುವಾಗ ಮೀನುಗಾರರು ಹಾಕಿದ ಟೆಂಟ್ ಹತ್ತಿರ ಇಂಡಿಯನ್ ಪಾಂಡ್ ಟೆರಾಪಿನ್ ಹಾಗೂ ಡೆಕ್ಕನ್ ಸಾಫ್ಟ್ ಶೆಲ್ ಟರ್ಟ್ಸ್ ಎಂಬ ಎರಡು ಪ್ರಭೇದದ ಹತ್ತು ಆಮೆಗಳ ಚಿಪ್ಪು ಹಾಗೂ ಮೂಳೆಗಳನ್ನು ವಿದ್ಯಾರ್ಥಿಗಳು ಸಂಗ್ರಹಿಸಿದ್ದಾರೆ.
ವನ್ಯಜೀವಿ ಕಾಯ್ದೆ 1973 ರ ಪ್ರಕಾರ ಇಂತಹ ಆಮೆಗಳ ಸಂಗ್ರಹಣೆ, ಸಾಗಾಣಿಕೆ ಹಾಗೂ ಭಕ್ಷಣೆ ಸಂಪೂರ್ಣ ನಿಷೇಧಿಸಲಾಗಿದೆ. ಅಲ್ಲದೇ ಸಣ್ಣ ನೀರಾವರಿ ಇಲಾಖೆಗೆ ಸೇರಿದ ಕೆರೆಗಳಲ್ಲಿ ಮೀನುಗಳನ್ನು ಬಿಡಲು ಕೆರೆಗುತ್ತಿಗೆ ಪಡೆಯುವಾಗ ಕೆರೆಯಲ್ಲಿರುವ ಯಾವುದೇ ಪ್ರಾಣಿ ಪಕ್ಷಿಗಳ ಜೀವಹಾನಿ ಮಾಡಬಾರದೆಂಬ ಷರತ್ತಿಗೆ ಸಹಿ ಮಾಡಿರುತ್ತಾರೆ ಎಂದಿದ್ದಾರೆ.
ಆದರೆ ಜಿಲ್ಲೆಯಾದ್ಯಂತ ಮೀನುಗಾರಿಕೆಗಾಗಿ ಕೆರೆಗಳನ್ನು ಗುತ್ತಿಗೆ ಮಾಡಿಕೊಂಡಿರುವವರು ತಾವು ಬಿಟ್ಟಂತಹ ಮೀನುಗಳನ್ನು ಪಕ್ಷಿಗಳು ತಿನ್ನುತ್ತವೆ ಎಂಬ ನೆಪದಿಂದ ಬಂದೂಕುಗಳಿಂದ ಬೆದರಿಸುವುದು, ಓಡಿಸುವುದು ಸಾಮಾನ್ಯವಾಗಿದೆ. ನೂರಾರು ವರ್ಷಗಳಿಂದ ಕೆರೆ ಕಟ್ಟೆಗಳಿಗೆ ಚಳಿಗಾಲದಲ್ಲಿ ದೇಶ ವಿದೇಶಗಳಿಂದ ಆಹಾರಕ್ಕಾಗಿ ವಲಸೆ ಬರುವ ಪಕ್ಷಿಗಳಿಗೆ ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಂದ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕೆರೆಗಳಲ್ಲಿ ಮೀನು ಹಿಡಿಯಲು ಮಾರಿಬಲೆ ಮತ್ತು ಬಿಡುಬಲೆ ಹಾಕಿದಾಗ ಸಹಜವಾಗಿ ಅನೇಕ ಪಕ್ಷಿಗಳು, ಆಮೆಗಳು, ಕಪ್ಪೆಗಳು, ಹಾವುಗಳು ಬಲೆಯಲ್ಲಿ ಸಿಕ್ಕಿಬೀಳುತ್ತದೆ. ಅಂತಹ ಪಕ್ಷಿ, ಆಮೆಗಳನ್ನು ಪುನಃ ನೀರಿಗೆ ಬಿಡದೆ ಅವುಗಳನ್ನು ತಿನ್ನಲು ಬಳಸುತ್ತಾರೆ. ಇದರಿಂದ ಅನೇಕ ಪ್ರಭೇದದ ವಲಸೆ ಬರುವ ಹಾಗೂ ಸ್ಥಳೀಯ ಪಕ್ಷಿಗಳ ಸಂತತಿ ಕಡಿಮೆಯಾಗಿದೆ. ಆದ್ದರಿಂದ ಅರಣ್ಯ ಇಲಾಖೆ ಹಾಗೂ ನೀರಾವರಿ ಇಲಾಖೆಯವರ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಬಿ.ವಿ. ಗುಂಡಪ್ಪ ತಿಳಿಸಿದ್ದಾರೆ.