ಅತಿಥಿ ಉಪನ್ಯಾಸಕರ ಬದುಕು ಅತಂತ್ರ
ಕ.ಪ್ರ. ವಾರ್ತೆ , ತುಮಕೂರು , ಜ. 15
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆರ್ಥಿಕ ನೀತಿಗಳಿಂದ ಶಿಕ್ಷಕರ ಹಾಗೂ ಜನಸಾಮಾನ್ಯರ ಬದುಕು
ಅತಂತ್ರ ಸ್ಥಿತಿಗೆ ತಲುಪಿದೆ. 4 ಲಕ್ಷ ಪದವಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ಅತಿಥಿ ಉಪನ್ಯಾಸಕರ ಬದುಕು ಇಂದು ಡೋಲಾಯಮಾನವಾಗಿದೆ ಎಂದು ಡಿವೈಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮೂರ್ತಿ ವಿಷಾದಿಸಿದರು.
ಅವರು ನಗರದ ಗುಬ್ಬಿ ವೀರಣ್ಣ ರಂಗತಾಲೀಮು ಕೇಂದ್ರದಲ್ಲಿ ಅತಿಥಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘ ಆಯೋಜಿಸಿದ್ದ ಮೊದಲ ಜಿಲ್ಲಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಜಾತಿ ಹಾಗೂ ಧರ್ಮಾಧಾರಿತ ಚಟುವಟಿಕೆಗಳಿಗೆ ಒತ್ತು ನೀಡುತ್ತಿರುವ ರಾಜಕಾರಣಿಗಳಿಂದ ಸಾಮಾಜಿಕ ವ್ಯವಸ್ಥೆಯೇ ಹದಗೆಡುತ್ತಿದೆ. ವೈಚಾರಿಕತೆ, ವೈಜ್ಞಾನಿಕತೆ ಮೈಗೂಡಿಸಿಕೊಂಡು ಸಮಾಜದ ಎಲ್ಲಾ ವರ್ಗದ ಜನತೆ ಪ್ರಗತಿ ಕಾಣುವಂತೆ ಸಲಹೆ ಇತ್ತರು.
ತಮ್ಮ ಶಿಕ್ಷಣ ಸಂಸ್ಥೆ ಏಳಿಗೆಗೆ ಯತ್ನ: ಶಿಕ್ಷಣ ಸಚಿವ ಸ್ಥಾನದಂತಹ ಉನ್ನತ ಪದವಿ ಅಲಂಕರಿಸಿರುವವರು ತಮ್ಮದೇ ಆದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ಅವುಗಳ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಸರ್ಕಾರಿ ಒಡೆತನಕ್ಕೆ ಸೇರಿದ
ಸಂಸ್ಥೆಗಳಲ್ಲಿ ಸಾಕಷ್ಟು ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದರೂ ಅವರಿಗೆ ನ್ಯಾಯಯುತ ವೇತನ ದೊರಕುತ್ತಿಲ್ಲ. ಆಳುವ ಪ್ರತಿನಿಧಿಗಳೂ ತಾರತಮ್ಯ ಧೋರಣೆ ಹೊಂದಿ ಶಿಕ್ಷಕರನ್ನು ನಿರ್ಲಕ್ಷಿಸುತ್ತಿದ್ದಾರೆ. ತತ್ಪರಿಣಾಮ
ವಿದ್ಯಾರ್ಥಿಗಳೇ ಅತಿಥಿ ಉಪನ್ಯಾಸಕರನ್ನು ಗೌರವಿಸದ ಸ್ಥಿತಿ ಬಂದೊದಗಿದೆ. ಇಷ್ಟೆಲ್ಲಾ ಸಮಸ್ಯೆಗಳು ಮರುಕಳುಹಿಸಲು ಯಾರೂ ಹೊಣೆ ಎಂದು ಪ್ರಶ್ನಿಸಿದರು.
ಮುಂದಾಗಲಿ: ವಿಧಾನ ಪರಿಷತ್ ಸದಸ್ಯ ಎ.ಎಚ್. ಶಿವಯೋಗಿಸ್ವಾವು ಮಾತನಾಡಿ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಬೇಕೆಂದು ತಿಳಿಸಿದರು.
ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ದಶಕಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ ಆಯಾ ಕಾಲದಲ್ಲಿ ಅಧಿಕಾರದಲ್ಲಿದ್ದ ಸರ್ಕಾರಗಳು ಭರವಸೆಯನ್ನು ನೀಡಿರುವುದನ್ನು ಬಿಟ್ಟರೆ ಅತಿಥಿ ಉಪನ್ಯಾಸಕರಿಗೆ ಅನುಕೂಲವಾಗುವಂತಹ ಯಾವುದೇ ಕಾನೂನು ಜಾರಿಗೊಳಿಸಿಲ್ಲ ಎಂದು ವಿಷಾದಿಸಿದರು.
ಪದವಿಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುವ ಒಟ್ಟು 14 ಮಂದಿ ಜನಪ್ರತಿನಿಧಿಗಳಿದ್ದು ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸುವ ಸಲುವಾಗಿ ವಿಧಾನಸಭೆ ಅಧಿವೇಶನಗಳಲ್ಲಿ ಈಗಾಗಲೇ ಸರ್ಕಾರದ ಗಮನ ಸೆಳೆದಿವೆ. ಬೆಂಗಳೂರು ಅಧಿವೇಶನದಲ್ಲಿ ಎಲ್ಲಾ ಸದಸ್ಯರು ಅತಿಥಿ ಉಪನ್ಯಾಸಕರ ವೇತನ ಬಿಡುಗಡೆ ಕುರಿತಾಗಿ ಧ್ವನಿ ಎತ್ತಿದಾಗ ಉನ್ನತ ಶಿಕ್ಷಣ ಸಚಿವರು ಸ್ಪಂದಿಸಿ ಮೊದಲ ಹಂತವಾಗಿ 27 ಕೋಟಿ ರು. ಬಿಡುಗಡೆಗೊಳಿಸಿದ್ದಾರೆ. ಪಕ್ಕದ ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಅತಿ ಹೆಚ್ಚಿನ ಸಂಬಳ ಒದಗಿಸಲಾಗುತ್ತಿದೆ. ಅದರಂತೆ ಕರ್ನಾಟಕದ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಕನಿಷ್ಠ ವೇತನ ನಿಗದಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿರುವುದಾಗಿ ಹೇಳಿದರು. ಪ್ರಗತಿಪರ ಚಿಂತಕ ಕೆ.ದೊರೈರಾಜು, ವಿಧಾನಪರಿಷತ್ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್, ಕಾಲೇಜು ಒಕ್ಕೂಟದ ಅಧ್ಯಕ್ಷ ಡಾ. ಜಯಪ್ರಕಾಶ್, ಆರ್. ಕಾಮರಾಜ್, ಅತಿಥಿ ಉಪನ್ಯಾಸಕ ಸಂಘದ ಜಿಲ್ಲಾಧ್ಯಕ್ಷ ಲೋಕೇಶ್, ಎಸ್ಎಫ್ಐ ಜಿಲ್ಲಾಧ್ಯಕ್ಷ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.