ಗಡಿ ಪ್ರದೇಶದಲ್ಲಿ ಭಾಷಾ ಸಮಸ್ಯೆ
ಮಧುಗಿರಿ: ರಾಜ್ಯದ ಗಡಿ ಪ್ರದೇಶಗಳಲ್ಲಿ ಕನ್ನಡಿಗರು ಎದುರಿಸುತ್ತಿರುವ ಸಾಕಷ್ಟು ಸಮಸ್ಯೆಗಳ ಪೈಕಿ ಭಾಷಾ ಸಮಸ್ಯೆ ಕೂಡ ಒಂದು. ಭಾಷಾವಾರು ಪ್ರಾಂತ್ಯ ರಚನೆ ವೇಳೆ ಭಾಷಾ ಅಲ್ಪಸಂಖ್ಯಾತರ ಹಕ್ಕು ರಕ್ಷಣೆಗಾಗಿ ರಾಜ್ಯಾಂಗದತ್ತವಾಗಿ ಸೃಷ್ಟಿಸಿದ ನಿಯಮಗಳನ್ನು ನೆರೆ ರಾಜ್ಯಗಳು ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಹಕ್ಕು ರಕ್ಷಿಸುವಂತೆ ಕೋರಲಾಗುವುದು ಎಂದು ಕನ್ನಡಿಗರ ಗಡಿನಾಡು ಶೈಕ್ಷಣಿಕ ಮತ್ತು ಅವಶ್ಯಕತೆಗಳ ಪರಿಶೀಲನೆಗಾಗಿ ನೇಮಕಗೊಂಡಿರುವ ವಿಶೇಷ ಸದನ ಸಮಿತಿ ಅಧ್ಯಕ್ಷ ಹಾಗೂ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ತಿಳಿಸಿದರು.
ಮಧುಗಿರಿಯ ಆರ್ಯವೈಶ್ಯ ಮಂಡಳಿ ಇಲ್ಲಿನ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಮುಕ್ಕೋಟಿ ದ್ವಾದಶಿ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು, ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ಜತೆ ಮಾತನಾಡಿ ಈ ವಿಷಯ ತಿಳಿಸಿದರು. ಈಚೆಗೆ ತಮಿಳುನಾಡು ಗಡಿಭಾಗಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಕನ್ನಡ ಶಾಲೆಗಳ ನಿರ್ಲಕ್ಷ್ಯ ಮತ್ತು ಭಾಷೆಯನ್ನು ಐಚ್ಚಿಕವನ್ನಾಗಿ ಮಾಡಿ ಕನ್ನಡ ಕತ್ತು ಹಿಸುಕುವಂತಹ ಕ್ರಮಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ತಮಿಳುನಾಡು, ಕೇರಳ, ಆಂಧ್ರ ಗಡಿಭಾಗಳಲ್ಲಿರುವ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಆಯಾ ಸರ್ಕಾರಗಳ ಹೊಣೆ ಆದರೆ, ಈ ಸರ್ಕಾರಗಳು ಗಡಿನಾಡ ಕನ್ನಡಿಗರಿಗೆ ರಾಜ್ಯಾಂಗದತ್ತವಾಗಿ ಬಂದ ಹಕ್ಕುಗಳನ್ನು ಹತ್ತಿಕ್ಕುವ ಕಾರ್ಯದಲ್ಲಿ ನಿರತವಾಗಿರುವುದು ಖಂಡನೀಯ ಎಂದರು.
ಹೊರ ರಾಜ್ಯದ ಗಡಿಭಾಗಗಲ್ಲಿ ರಾಜ್ಯ ಸರ್ಕಾರದಿಂದಲೇ ಕನ್ನಡ ಶಾಲೆಗಳನ್ನು ತೆರೆಯಲು ಬರುವುದಿಲ್ಲ, ಆಯಾ ಸರ್ಕಾರಗಳ ಮೇಲೆ ಒತ್ತಡ ಹಾಕಿ ಭಾಷಾ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದ ಅವರು, ಈಚೆಗೆ ಚಾಮರಾಜ ನಗರಕ್ಕೆ ಸದನ ಸಮಿತಿ ತೆರಳಿದ್ದಾಗ ತಾಳವಾಡ ಭೇಟಿ ರದ್ದುಪಡಿಸಲಾಯಿತು.ಇದಕ್ಕೆ ಆ ಸರ್ಕಾರದ ಕಡೆಯಿಂದ ಕೇಳಿ ಬಂದ ಅಪಸ್ವರವೇ ಕಾರಣ. ಭೇಟಿ ನೀಡಿದ್ದರೆ ಭಾಷಾ ಅಲ್ಪಸಂಖ್ಯಾತರ ಸಮಸ್ಯೆಯಂತಹ ಸೂಕ್ಷ್ಮ ವಿಚಾರ ಸಂಘರ್ಷ ಪಡೆದುಕೊಳ್ಳುವ ಸಾಧ್ಯತೆಯಿತ್ತು ಎಂದು ಮಾರ್ಮಿಕವಾಗಿ ನುಡಿದರು.
ಕಾಸರಗೊಡು, ಆಂಧ್ರ ಗಡಿ ಭಾಗಗಳಿಗೆ ಅಧಿವೇಶನದ ನಂತರ ಸಮಿತಿ ಪ್ರವಾಸ ಮಾಡಲಿದೆ ಎಂದರು. ಭಾಷಾ ಅಲ್ಪಸಂಖ್ಯಾತರಿಗೆ ನೀಡಲಾದ ಹಕ್ಕುಗಳ ಸಂರಕ್ಷಣೆಗೆ ಕೇಂದ್ರ ಸರ್ಕಾರದ ಸಂಸದೀಯ ಸಮಿತಿಯಿದ್ದು ಗಡಿನಾಡ ಕನ್ನಡಿಗರ ಸ್ಥಿತಿ ಗತಿಗಳ ಬಗ್ಗೆ ಪತ್ರ ಬರೆಯುವುದಾಗಿ ತಿಳಿಸಿದರು. .
ಆರ್ಯವೈಶ್ಯ ಮಂಡಲಿ ಅಧ್ಯಕ್ಷ ತಾತಾ ರಾಮಲಿಂಗ ಶೆಟ್ಟಿ, ಕಾರ್ಯದರ್ಶಿ ಶ್ರೀನಿವಾಸ್, ಗುತ್ತಿಗೆದಾರ ದ್ವಾರಕನಾಥ್, ಯುವ ಜನ ಸಂಘದ ಕೆ.ಎಂ.ಮಧು, ರವಿಕುಮಾರ್, ವೆಂಕಟೇಶಬಾಬು, ಕೆಂಚೇಶ್ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.