ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪ್ರಜ್ಞಾವಂತರು ಸಮಾಜ ಮುಖಿಗಳಾಗಿದ್ದಾರೆಯೇ?

Vishwanath S
Updated On : 16 Jan 2014, 1:39 am

ಕುಣಿಗಲ್: ಪ್ರಸ್ತುತ ದಿನಗಳಲ್ಲಿ ಶೈಕ್ಷಣಿಕ ಸಂಸ್ಥೆಗಳು ಬುದ್ಧಿವಂತರನ್ನು, ಶಿಕ್ಷಣವಂತರನ್ನು ಸಮಾಜಕ್ಕೆ ನೀಡುತ್ತಿವೆ.
ಆದರೆ ಬುದ್ಧಿವಂತರು, ಶಿಕ್ಷಣವಂತರು ಪ್ರಜ್ಞಾವಂತರಾಗಿ, ಮಾನವೀಯ ಮೌಲ್ಯಗಳನ್ನು ಆಧರಿಸಿ, ಗೌರವಿಸುವ ಸಮಾಜಮುಖಿಗಳಾಗಿದ್ದಾರೆಯೆ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ತುಮಕೂರು ರಾಮಕೃಷ್ಣ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ತಾಲೂಕು ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಜ್ಞಾನಭಾರತಿ ಶಿಕ್ಷಣಸಂಸ್ಥೆಯಲ್ಲಿ ನಡೆದ, ಶಾಲಾ ವಾರ್ಷಿಕೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮೌಲ್ಯ ಹೀನ ಶಿಕ್ಷಣವಂತರು, ಬುದ್ಧಿವಂತರಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಶಿಕ್ಷಣ ಸಂಸ್ಥೆಗಳು ಶಿಕ್ಷಣವಂತರನ್ನು, ಬುದ್ಧಿವಂತರನ್ನು ರೂಪಿಸುವ ಜೊತೆಯಲ್ಲಿ ಮಾನವೀಯ ಮೌಲ್ಯಗಳನ್ನು ಆಧರಿಸಿದ ಸಮಾಜಮುಖಿ ಶಿಕ್ಷಣ ನೀಡುವ ಅಗತ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಯಾಗಬೇಕಿದೆ ಎಂದರು.
ಶಿಕ್ಷಕರು ನಿಜವಾಗಿಯೂ ಸದೃಢ ರಾಷ್ಟ್ರ ನಿರ್ಮಾಪಕರಾಗಿದ್ದಾರೆ. ರಾಷ್ಟ್ರಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಜವಾಬ್ದಾರಿ ಶಿಕ್ಷಕರು ಮತ್ತು ಪೋಷಕರ ಇಬ್ಬರ ಮೇಲೂ ಸರಿಸಮಾನವಾಗಿದೆ. ಇಬ್ಬರು ತಮ್ಮ ಹೊಣೆಗಾರಿಕೆಯಿಂದ ಕೊಂಚ ವಿಚಲಿತರಾದರೂ, ಪೊಲೀಸ್ ಪ್ರಧಾನ ವ್ಯವಸ್ಥೆ ಸಮಾಜದಲ್ಲಿ ಅಸ್ತಿತ್ವಕ್ಕೆ ಬರುವ ಸಾಧ್ಯತೆ ದಟ್ಟವಾಗಿರುವ ಕಾರಣ, ಪೋಷಕರು, ಶಿಕ್ಷಕರು ಸದೃಢ ರಾಷ್ಟ್ರನಿರ್ಮಾಣದಲ್ಲಿ ತಮ್ಮ ಪಾತ್ರ ಮತ್ತು ಜವಾಬ್ದಾರಿ ಅರಿತು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕೆಂದರು.
ಶಿಕ್ಷಣ ಕ್ರಾಂತ್ರಿ ಅಗತ್ಯ: ಸಮಾಜದಲ್ಲಿ ಒಂದು ತತ್ವಾಧಾರಿತ ಉತ್ತಮ ಶಾಲೆ ಪ್ರಾರಂಭಿಸಿದ್ದೇ ಆದಲ್ಲಿ, ಅಂತಹ ಶಾಲೆಗಳಿಂದ ಮುಂದಿನ ದಿನಗಳಲ್ಲಿ ಹಲವು ಜೈಲುಗಳ ಸ್ಥಾಪನೆಯನ್ನು ದೂರವಿಡಬಹುದು. ದೇಶದ ಬಹುತೇಕ ಎಲ್ಲಾ ರೀತಿಯ ಸಮಸ್ಯೆಗಳಿಗೆ ಉತ್ತಮ ಪರಿಹಾರ, ಶಿಕ್ಷಣ ಕ್ರಾಂತಿಯಿಂದ ಮಾತ್ರ ಸಾಧ್ಯ ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ, ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ, ತಾಲೂಕು ಒಕ್ಕಲಿಗ ಸಂಘವು ಕೇವಲ ಯಾವುದೇ ಒಂದುಜಾತಿಗೆ ಸೀಮಿತವಾಗದೆ, ಸಮಾಜದಲ್ಲಿನ ಎಲ್ಲಾ ವರ್ಗದ ಜನತೆಗೆ ಮೌಲ್ಯಾಧಾರಿತ ಗುಣಮಟ್ಟದ ಶಿಕ್ಷಣವನ್ನು ರಿಯಾಯಿತಿ ದರದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಕಲ್ಪಿಸುತ್ತಾ, ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿ ತಾಂತ್ರಿಕ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ಸಂಘವು ಕಾರ್ಯಚಟುವಟಿಕೆ ಹಮ್ಮಿಕೊಂಡಿದೆ ಎಂದರು.
2012-13ನೇ ಸಾಲಿನಲ್ಲಿ  ಜ್ಞಾನಭಾರತಿ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ ಉತ್ತಮ ಅಂಕಗಳಿಸಿದ ಪಿಯುಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅವರ ಪೋಷಕರೊಂದಿಗೆ ಸನ್ಮಾನಿಸಲಾಯಿತು. ಬಿಇಒ ಟಿ.ಜಿ.ಸಿದ್ದಯ್ಯ, ಸಂಘದ ಕಾರ್ಯದರ್ಶಿ ಅನಂತಯ್ಯ, ಗೋವಿಂದೇಗೌಡ, ಖಜಾಂಚಿ ಗಂಗಶಾನಯ್ಯ, ನಿರ್ದೇಶಕರಾದ ಹುಚ್ಚೇಗೌಡ, ಸೋಮಣ್ಣ, ರಾಜಣ್ಣ, ಚನ್ನಪ್ಪ, ಪ್ರಾಚಾರ್ಯ ಗೋವಿಂದೇಗೌಡ, ಮುಖ್ಯಶಿಕ್ಷಕರಾದ ಗಂಗಮ್ಮ,ಪ್ರಕಾಶಮೂರ್ತಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement