ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮುನಿಯೂರು ಗ್ರಾಪಂ ಅಧ್ಯಕ್ಷೆಯಾಗಿ ರತ್ನಮ್ಮ ಅವಿರೋಧ ಆಯ್ಕೆ

Vishwanath S
Updated On : 16 Jan 2014, 1:41 am

ತುರುವೇಕೆರೆ: ತಾಲೂಕಿನ ಮುನಿಯೂರು ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷೆಯಾಗಿ ಕಾಳಂಜೀಹಳ್ಳಿ ಗ್ರಾಮದ ರತ್ನಮ್ಮ ಕೃಷ್ಣಪ್ಪ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ನಂಜಪ್ಪ ಕರ್ತವ್ಯ ನಿರ್ವಹಿಸಿದರು. ಸದಸ್ಯರಾದ ಎಸ್. ಕುಮಾರ್, ಪಾಂಡುರಂಗೇಗೌಡ, ಕೀರ್ತಿ, ಪರಮೇಶ್, ಶಿವಗಂಗಮ್ಮ, ರಂಗಸ್ವಾಮಿ, ನಾಗರಾಜು, ಕುಸುಮ, ಗೋರಮ್ಮ, ನಿಂಗೇಗೌಡ, ಶಿವಾನಂದ್, ಜಗದೀಶ್, ಲೋಕೇಶ್, ಯಶೋಧಮ್ಮ ಹಾಗೂ ಕರಿಯಮ್ಮ ಭಾಗವಹಿಸಿದ್ದರು.  ಪಿಡಿಓ ರಾಜಶೇಖರ್, ಕಾರ್ಯದರ್ಶಿ ಮಾಯಣ್ಣ ಉಪಸ್ಥಿತರಿದ್ದರು. ಬಿಜೆಪಿ ಮಾಜಿ ಅಧ್ಯಕ್ಷ  ಟಿ.ಎಸ್. ಬೋರೇಗೌಡ, ನಂಜೇಗೌಡ, ಕೆಜೆಪಿ ಮುಖಂಡ ಎಂ.ಡಿ.ಮೂರ್ತಿ, ಕಾಳಂಜೀಹಳ್ಳಿ ಸೋಮಶೇಖರ್,  ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕೆಂಪರಾಜು, ಎಪಿಎಂಸಿ ನಿರ್ದೇಶಕ ಮುನಿಯೂರು ಚಂದ್ರು ಮೊದಲಾದ ಮುಖಂಡರು ನೂತನ ಅಧ್ಯಕ್ಷೆ ರತ್ನಮ್ಮ ರವರನ್ನು ಅಭಿನಂದಿಸಿದರು.
ಕುಡಿಯುವ ನೀರಿಗೆ ಕನ್ನ
ಚಿಕ್ಕನಾಯಕನಹಳ್ಳಿ: ಪಟ್ಟಣದ ಕುಡಿಯುವ ನೀರಿನ ಬವಣೆ ನೀಗಿಸುವ ಸಲುವಾಗಿ ಹೇಮಾವತಿ ನಾಲೆಯಿಂದ ಏತನೀರಾವರಿ ಮೂಲಕ ಪೈಪ್ ಲೈನ್‌ನಲ್ಲಿ ಹರಿಸುತ್ತಿರುವ  ನೀರಿಗೆ ಕಾಡೇನಹಳ್ಳಿ ಬಳಿ ಕನ್ನಕೊರೆದು ನೀರನ್ನು ಹಾಳುಮಾಡಿರುವ ಕೃತ್ಯ ನಡೆದಿದೆ.  
ಈಗ ಕಾಡೇನಹಳ್ಳಿ ಬಳಿ ಪೈಪ್‌ಲೈನ್ ಒಡೆದಿದೆ. ಆದರೆ ಇದನ್ನು ನಾವೇ ಮಾಡಿದ್ದೇವೆ ಎಂದು ಯಾರು ಒಪ್ಪಿಕೊಂಡಿಲ್ಲ. ಆದರೆ ಪೈಪ್ ಲೈನ್ ಸುಕಾಸುಮ್ಮನೆ ಒಡೆಯುವುದಿಲ್ಲವೆಂಬ ಸತ್ಯ ಎಲ್ಲರಿಗೂ ಗೊತ್ತು.
ಈ ಎಲ್ಲಾ ರಾದ್ಧಾಂತಗಳಿಂದ ಪ್ರತಿಬಾರಿ ಕೆರೆಗೆ ಹರಿಯುತ್ತಿದ್ದ ನೀರಿನ ಪ್ರಮಾಣಕ್ಕೆ ಹೋಲಿಸಿದರೆ, ಈ ಬಾರಿ ಬಹಳ ಕಡಿಮೆ ನೀರು ಬಂದಿದೆ.
ಇದರಿಂದ ಮುಂಬರುವ ಬೇಸಿಗೆಯಲ್ಲಿ ಪುರಸಭೆ ಪಟ್ಟಣದ ಜನತೆಗೆ ಕುಡಿಯುವ ನೀರೊದಗಿಸಲು ಬಹಳ ಕಷ್ಟಪಡಬೇಕಾಗುವುದಂತು ಸತ್ಯ.
ಅಳತೆಯಲ್ಲಿ ಮೋಸ ಮಾಡುತ್ತಿದ್ದ ವಂಚಕಿ ಪೊಲೀಸ್ ವಶಕ್ಕೆ
ಕುಣಿಗಲ್: ಅಳತೆಯಲ್ಲಿ ಮೋಸ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ ಗ್ರಾಹಕರು, ರೈತರು ಮೋಸ ಮಾಡುತ್ತಿದ್ದ ವಂಚಕಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು, ಪೊಲೀಸರ ವಶಕ್ಕೆ ನೀಡಿದ ಘಟನೆ ಬುಧವಾರ ನಡೆಯಿತು.
ಮಕರ ಸಂಕ್ರಾಂತಿ ಹಬ್ಬಾಚರಣೆ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ರಸ್ತೆಯ ಇಕ್ಕೆಲೆಗಳಲ್ಲಿ ನೂರಾರು ಬೀದಿಬದಿ ವ್ಯಾಪಾರಿಗಳು ಸಿಹಿಗೆಣಸು, ಅವರೆಕಾಯಿ, ಕಡಲೆಕಾಯಿ ಇತರೆ ವ್ಯಾಪಾರದಲ್ಲಿ ತೊಡಗಿದ್ದು, ಗ್ರಾಮದೇವತೆ ದೇವಾಲಯ ಬಳಿ ಹಸಿಕಡಲೆಕಾಯಿಯನ್ನು ರಾಶಿ ಹಾಕಿಕೊಂಡು ಪಾರ್ವತಿ ಎಂಬಾಕೆ ವ್ಯಾಪಾರ ಮಾಡುತ್ತಿದ್ದರು. ಸೇರೊಂದಕ್ಕೆ 25 ರು.ನಂತೆ ಮಾರಾಟ ಮಾಡುತ್ತಿದ್ದು, ಗ್ರಾಮಾಂತರ ಪ್ರದೇಶದ ರೈತನೊಬ್ಬ ಎರಡು ಸೇರು ಕಡಲೆಕಾಯಿ ಖರೀದಿಸಿದ್ದು, ಪರಿಶೀಲಿಸಲಾಗಿ ತುಂಬಾ ಕಡಿಮೆ ಬಂದ ಕಾರಣ, ಮಾರಾಟ ಮಾಡುತ್ತಿದ್ದವರ ಬಳಿ ಸೇರನ್ನು ಕಸಿದು ನೋಡಲಾಗಿ, ಮೇಲಿನಿಂದ ಮಾತ್ರ ಸೇರಿನಂತೆ ಕಾಣುತ್ತಿದ್ದು, ಒಳಗೆ ಸುಮಾರು ಅರ್ಧಲೀಟರ್‌ನ ಮತ್ತೊಂದು ಜಾಡಿಕೂರಿಸಿರುವುದು ಕಂಡುಬಂತು. ಆಕೆ ಮಾಡುತ್ತಿದ್ದ ವಂಚನೆ ಹೊರಬಿತ್ತು.
ಈ ವಿಷಯವನ್ನು ರೈತ ಕಡಲೆಕಾಯಿ ಕೊಳ್ಳಲು ಬಂದಿದ್ದ ಇತರೆ ಗ್ರಾಹಕರಿಗೂ ತಿಳಿಸಿದ. ವಂಚಕಿ ತನ್ನ ವ್ಯಾಪಾರದ ಗುಟ್ಟು ಬಹಿರಂಗಗೊಳಿಸಿದ ರೈತನನ್ನು ಅವಾಚ್ಯಶಬ್ದಗಳಿಂದ ನಿಂದಿಸಲು ಮುಂದಾದಳು. ಹೊರಗೆ ಸೇರು, ಒಳಗೆ ಅರ್ಧಲೀಟರ್  ರಹಸ್ಯ ತಿಳಿದ ಗ್ರಾಹಕರೆಲ್ಲರೂ, ವಂಚಕ ವರ್ತಕಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು, ಸೇರನ್ನು ಅಕೆಯಿಂದ ಕಿತ್ತುಕೊಂಡು, ಆಕೆಯ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿ, ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿದರು. ಗ್ರಾಹಕರ ದೂರಿನ ಮೇರೆಗೆ ಸ್ಥಳಕ್ಕಾಗಮಿಸಿದ ಎಎಸೈ ಗಂಗಾಧರ ಮತ್ತು ಸಿಬ್ಬಂದಿ, ವರ್ತಕಿ ಮಾರಾಟ ಮಾಡುತ್ತಿದ್ದ ಸೇರು, ಇತರೆ ಪರಿಕರಗಳನ್ನು ವಶಪಡಿಸಿಕೊಂಡು ಆಕೆಯನ್ನು ಠಾಣೆಗೆ ಕರೆದೊಯ್ದರು.
ನೀರು ಪೂರೈಸುವ ಸಾಧನ ಕೊಡುಗೆ
ತಿಪಟೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮದಲ್ಲಿ  ಉಜ್ಜೀವನ್ ಮೆಕ್ರೋ ಫೈನಾನ್ಸ್ ಕಂಪನಿಯ ವತಿಯಿಂದ ಸಾರ್ವಜನಿಕ ಆಸ್ಪತ್ರೆಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವ ಸಲುವಾಗಿ 50ಸಾವಿರ ರು. ಮೊತ್ತದ ಶುದ್ಧ ನೀರು ಪೂರೈಸುವ ಸಾಧನವನ್ನುನೀಡಲಾಯಿತು.  ಈ ಸಂದರ್ಭದಲ್ಲಿ ತಹಸೀಲ್ದಾರ್ ಬಿ.ಆರ್.ಮಂಜುನಾಥ್, ವೈದ್ಯಾಧಿಕಾರಿ ಡಾ.ಪ್ರಹ್ಲಾದ್, ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ಆರ್.ಸ್ವಾಮಿ, ಉಜ್ಜೀವನ್ ಸಂಸ್ಥೆಯ ತಾಲೂಕು ಘಟಕದ ವ್ಯವಸ್ಥಾಪಕ ಫ್ರಾನ್ಸಿಸ್ ಮತ್ತಿತರರಿದ್ದರು.
ಶಿರಾ ತಾಲೂಕಿಗೆ 8025 ಕೆಜಿ ಹಾಲಿನ ಪುಡಿ ಅವಶ್ಯ
ಶಿರಾ: ವಾರದಲ್ಲಿ ಮೂರು ದಿನ ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಕ್ಷೀರ ಭಾಗ್ಯ ಯೋಜನೆಗೆ ತಿಂಗಳಿಗೆ ತಾಲೂಕಿಗೆ 8025 ಕೆಜಿ ಹಾಲಿನ ಪುಡಿ ಅವಶ್ಯವಿದ್ದು ಇದಕ್ಕೆ ತಗಲುವ ವೆಚ್ಚ 20.07 ಲಕ್ಷ ಮೀರಿದೆ ಎಂದು ಇಲಾಖಾ ಮೂಲಗಳು ತಿಳಿಸಿವೆ.
ತಾಲೂಕಿನಲ್ಲಿ ಒಂದರಿಂದ ಹತ್ತನೇ ತರಗತಿವರೆಗಿನ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಶಾಲೆಗಳಲ್ಲಿರುವ 35866 ಮಕ್ಕಳಿಗೆ ಸೋಮವಾರ, ಬುಧವಾರ ಹಾಗೂ ಶನಿವಾರಗಳಂದು ಪ್ರತಿ ವಿದ್ಯಾರ್ಥಿಗೆ 150 ಎಂ.ಎಲ್. ಹಾಲು ನೀಡಲಾಗುತ್ತಿದೆ.
ಯೋಜನೆ ಆರಂಭವಾದ ಹೊಸತರಲ್ಲಿ ಸ್ವಾಗತದ ಜೊತೆಗೆ ಅಪಸ್ವರಗಳೂ ಕೇಳಿ ಬಂದಿದ್ದವು. ಶಾಲಾ ಮಕ್ಕಳಿಗೆ ಶುದ್ಧವಾದ ಹಾಲು ಕುಡಿಸುವ ಬದಲು ಅಶುದ್ಧ ಹಾಲು ಕುಡಿಸಲಾಗುತ್ತಿದೆ ಎನ್ನುವ ಅನುಮಾನಗಳಿದ್ದವು. ಆದರೆ ತಿಂಗಳು ಉರುಳಿದಂತೆ ಕ್ಷೀರ ಭಾಗ್ಯ ಯೋಜನೆಗೆ ಉತ್ತಮ ಪ್ರತಿಕ್ರಿಯೆ ನಗರ ಪ್ರದೇಶಗಳಿಗಿಂತ ಗ್ರಾಮಾಂತರ ಪ್ರದೇಶದ ಮಕ್ಕಳು, ಪೋಷಕರಿಂದ ಉತ್ತಮ ಪ್ರತಿಕ್ರಿಯೆ ಕಾಣ ಬರುತ್ತಿದೆ.
19ರಂದು ತಾಲೂಕು ಮಟ್ಟದ ಕಬಡ್ಡಿ
ಶಿರಾ: ನ್ಯೂ ಪ್ರಿನ್ಸ್ ಕ್ಲಬ್, ತಾವರೆಕೆರೆ ಇವರ ವತಿಯಿಂದ ಜ.19ರಂದು ತಾವರೆಕೆರೆಯಲ್ಲಿ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಪ್ರಥಮ ಬಹುಮಾನ 5001, ದ್ವಿತೀಯ ಬಹುಮಾನ 3001 ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅರುಣ್ ಸಿಂಗ್ 8453932745, ಭರತ್.ಎಸ್.ಎಂ. 8694983773, ಭರತ್ ಗೌಡ 8183935050, ಶಶಿಕುಮಾರ್.ಟಿ  8746903112 ಇವರನ್ನು ಸಂಪರ್ಕಿಸಿ.
ನಾಳೆ ನಾಟಕ ಪ್ರದರ್ಶನ
ಶಿರಾ: ಜಮುರಾ ಕಲಾಲೋಕ ಚಿತ್ರದುರ್ಗ  ಮುರುಘಾ ಮಠ, ಪೆಸಿಲಿಟೇಟರ್ ಶಾರ್ದಾ ಎನ್.ಜಿ.ಒ. ಶಿರಾ ಸಂಯುಕ್ತಾಶ್ರಯದಲ್ಲಿ ಜ. 17 ರಂದು ಸಂಜೆ 6-30 ಕ್ಕೆ ನಗರದ ಶ್ರೀ ನಾರಾಯಣ ಸ್ವಾಮಿ ಬಯಲು ಕಲ್ಯಾಣ ಮಂಟಪದಲ್ಲಿ ತಲ್ಲಣಿಸದಿರು ಕಂಡ್ಯ ತಾಳು ಮನವೆ ಎಂಬ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಉದ್ಘಾಟಿಸುವರು.
ಸಂಗೊಳ್ಳಿ ರಾಯಣ್ಣ ನೆನಪಿಗಾಗಿ ಕ್ಯಾಲೆಂಡರ್ ಬಿಡುಗಡೆ
ಮಧುಗಿರಿ: ಪೊಲೀಸ್ ಇಲಾಖೆಯಲ್ಲಿ ದಕ್ಷ ಆಡಳಿತಗಾರರಾಗಿ, ಉತ್ತಮ ಸ್ನೇಹಿತರಾಗಿದ್ದ  ಗುಲ್ಬರ್ಗ ನಗರ  ಠಾಣೆಯ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಸಾವಿಗೆ ಮಧುಗಿರಿ ಸಬ್ ಇನ್ಸ್‌ಪೆಕ್ಟರ್  ಎಂ. ಅಂಬರೀಶ್ ಕಂಬನಿ  ಮಿಡಿದಿದ್ದಾರೆ.
ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಮಧುಗಿರಿ ತಾಲೂಕು ಸಂಗೊಳ್ಳಿ ರಾಯಣ್ಣ ಯುವ ಸೇನೆ, ರಾಯಣ್ಣ ಅವರ ಸವಿ ನೆನಪಿಗಾಗಿ ಏರ್ಪಾಟು ಮಾಡಿದ್ದ ಸಮಾರಂಭದಲ್ಲಿ  2014 ನೇ ವರ್ಷದ  ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪೊಲೀಸ್ ಇಲಾಖೆಗೆ ಇಂದು ದುಃಖದ ದಿನ, ತರಬೇತಿ ಸಂದರ್ಭದಲ್ಲಿ ಉತ್ತಮ ಸ್ನೇಹಿತರಾಗಿದ್ದ ಬಂಡೆ  ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದದ್ದು ವಿಷಾದನಿಯ. ದಕ್ಷ, ಪ್ರಮಾಣಿಕ  ಪೋಲಿಸ್ ಅಧಿಕಾರಿ ಬಂಡೆಗೆ  ಇಂತಹ ಸಾವು ಬರಬಾರದಿತ್ತು ಎಂದು ಭಾವುಕಾರದರು. ಬಂಡೆ ಅಕಾಲಿಕ ನಿಧನದಿಂದ ಅವರ  ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬ ವರ್ಗದವರಿಗೆ  ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದರು. ಸಂಗೋಳ್ಳಿ ರಾಯಣ್ಣ ಯುವ ಸೇನೆ ತಾಲೂಕಿನಲ್ಲಿ ಸದೃಢವಾಗಿ ಬೆಳೆದು ಸಮಾಜಮುಖಿ ಕಾರ್ಯ ಮಾಡಲಿ ದುಷ್ಟರ ಸದ್ದಡಗಿಸುವ ನಿಟ್ಟಿನಲ್ಲಿ ಯುವ ಸಂಘಟನೆ ಮುಂದಾಗಲಿ ಎಂದು ಅಂಬರೀಶ್  ಶುಭ ಕೋರಿದರು.
ಗುರುಸಿದ್ಧರಾಮಣ್ಣನದು ಕರ್ಮ ನಿಷ್ಠೆ
ತುಮಕೂರು: 12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರದ್ದು ಕಾಯಕ ನಿಷ್ಠೆಯಾದರೆ ಗುರು ಸಿದ್ದರಾಮಣ್ಣನವರದ್ದು ಕರ್ಮನಿಷ್ಠೆ ಎಂದು ಬಸವ ಸೇನೆ ಅಧ್ಯಕ್ಷ ಪಿ. ಗಂಗರಾಜು ಅಭಿಪ್ರಾಯಪಟ್ಟರು.
ಅವರು ಜಿಲ್ಲಾ ಬಸವ ಸೇನೆ ಕಚೇರಿಯಲ್ಲಿ ಗುರುಸಿದ್ಧರಾಮೇಶ್ವರ 841ನೇ ಜಯಂತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಅಲ್ಲಮಪ್ರಭು, ಅಕ್ಕನಾಗಲಾಂಬಿಕೆ, ಚನ್ನಬಸವಣ್ಣನವರ ಮಾರ್ಗದರ್ಶನದಲ್ಲಿ ಊರುಗಳಿಗೆ ಕೆರೆ ಕಟ್ಟೆಗಳನ್ನು ಕಟ್ಟಿಸಿದ ಕೀರ್ತಿ ಸಿದ್ಧರಾಮಣ್ಣನವರಿಗೆ ಸಲ್ಲುತ್ತದೆ ಎಂದು ತಿಳಿಸಿದರು. ಬಸವ ಸೇನೆ ಉಪಾಧ್ಯಕ್ಷ ಟಿ.ಆರ್. ಸದಾಶಿವಯ್ಯ ಮಾತನಾಡಿ ಸಿದ್ದರಾಮಯ್ಯ ಸೊನ್ನಲಿಗೆ ರಾಜರು ಕೊಟ್ಟ ಕಾಣ್ಕೆಯಿಂದ ನಾಡಿನಾದ್ಯಂತ ಕೆರೆ ಕಟ್ಟೆಗಳನ್ನು ಕಟ್ಟಿಸಿ ಕರ್ಮದಿಂದಲೇ ಶಿವನನ್ನು ಕಂಡ ಮಹಾಶರಣ ಎಂದು ಅಭಿಪ್ರಾಯಪಟ್ಟರು. ಸಮಾರಂಭದಲ್ಲಿ 26ನೇ ವಾರ್ಡ್ ಕಾರ್ಪೋರೇಟರ್ ಮಂಜುಳಾ ನಿರಂಜನ್, ಬಸವಸೇನೆ ಮಹಿಳಾ ಘಟಕ ಅಧ್ಯಕ್ಷೆ ರಾಧಮ್ಮ, ನಗರ ಅಧ್ಯಕ್ಷ ಪ್ರಕಾಶ್, ಶೇಖರ್, ವಿನಯ್ ಜೈನ್, ನಂದೀನಾಥ್, ಲೋಕೇಶ್, ಸಂದೀಪ್, ಲೋಕೇಶ್, ಶ್ರೀಧರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement