ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಯುವಜನತೆಯಲ್ಲಿ ದೇಶಪ್ರೇಮದ ಕೊರತೆ

Vishwanath S
Updated On : 16 Jan 2014, 1:38 am

ಕ.ಪ್ರ.ವಾರ್ತೆ , ಕುಣಿಗಲ್ , ಜ.15
ಯುವಜನತೆಯಲ್ಲಿ ದೇಶಪ್ರೇಮ ಕೊರತೆ,  ಜೊತೆಯಲ್ಲಿ ಭ್ರಷ್ಟಾಚಾರ ವಿರೋಧಿಸುವ ಮನೋಭಾವ ಕುಂಠಿತವಾಗಿರುವ ಕಾರಣ ದೇಶವು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ತಾಪಂ ಸ್ಥಾಯಿಸಮಿತಿ ಅಧ್ಯಕ್ಷ ಜಗದೀಶ್ ಅಭಿಪ್ರಾಯಪಟ್ಟರು.
  ತಾಲೂಕಿನ ಎಡೆಯೂರಿನ ಸರ್ಕಾರಿಪ.ಪೂ.ಕಾಲೇಜಿನಲ್ಲಿ ಸೋಮವಾರ, ಎಡೆಯೂರಿನ ವಿವೇಕಾನಂದ ಯುವಕ ಸಂಘ ಹಮ್ಮಿಕೊಂಡಿದ್ದ ಸ್ವಾಮಿವಿವೇಕಾನಂದ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿನ ಯುವಜನತೆ ಇಂದು ಸ್ವಾರ್ಥಪರರಾಗುತ್ತಾ, ಬಹುಪಾಲು ಯುವಕರು ತಮ್ಮ ಜೀವನ ನಿರ್ವಹಣೆಯ ಬಗ್ಗೆಯೆ ಯೋಚಿಸುತ್ತಾ ಕಾಲಕಳೆಯುವಂತಾಗಿರುವುದು ಖೇದಕರ. ದೈನಂದಿನ ಜೀವನ ನಿರ್ವಹಣೆಯ ಕಾಲದಲ್ಲಿ ಕೆಲಕಾಲವಾದರೂ, ದೇಶದ ಬಗ್ಗೆ, ಸಮಾಜದಲ್ಲಿನ ಭ್ರಷ್ಟಾಚಾರಗಳ ಬಗ್ಗೆ ಅವಲೋಕಿಸಿ ಅವುಗಳ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿ ತೊಡಗಿಕೊಂಡಾಗ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪೂರಕವಾಗುತ್ತದೆ. ಸ್ವಾಮಿವಿವೇಕಾನಂದರು ದೇಶದ ಯುವಜನತೆಯಲ್ಲಿ ಸ್ವಾಭಿಮಾನ ಮೂಡುವಂತೆ ಮಾಡಿದ ಕಾರ್ಯ ಸರ್ವಕಾಲಕ್ಕೂ ಶ್ಲಾಘನೀಯ ಎಂದರು.
ಪರಿಣಾಮಕಾರಿ ನಿರ್ವಹಿಸಬೇಕಿದೆ: ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕ ವೀರಣ್ಣ, ಪ್ರಧಾನ ಭಾಷಣಕರರಾಗಿ ಮಾತನಾಡಿ, ಪ್ರಸ್ತುತ ಯುವಜನತೆಗೆ ಸ್ವಾಮಿ ವಿವೇಕಾನಂದರ ಬಗ್ಗೆ ಮತ್ತಷ್ಟು ಅರಿವು ಮೂಡಿಸುವಂತ ಕೆಲಸವನ್ನು ಸರ್ಕಾರ ಸೇರಿದಂತೆ ಖಾಸಗಿ ಸಂಘ, ಸಂಸ್ಥೆಗಳು ಪರಿಣಾಮಕಾರಿಯಾಗಿ ನಿರ್ವಹಿಸಬೇಕಿದೆ. ಅವರು ಯುವಜನತೆಯ ಸಬಲತೆಗೆ ನೀಡಿರುವ ಹಲವು ಸಂದೇಶಗಳು ಸರ್ವಕಾಲಕ್ಕೂ ಮಾನ್ಯವಾಗಿದ್ದು ಯುವಜನತೆ ತಮ್ಮ ಜೀವನದಲ್ಲಿ ಅವರ ಸಂದೇಶದ ಸ್ವಲ್ಪವನ್ನಾದರೂ ಅಳವಡಿಸಿಕೊಂಡಲ್ಲಿ ಸಾರ್ಥಕ ಜೀವನ ನಡೆಸಬಹುದೆಂದರು.
ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ದೀಪು ಅಧ್ಯಕ್ಷತೆ ವಹಿಸಿದ್ದು, ಪ್ರಾಚಾರ್ಯ ನಂಜಪ್ಪ, ಸಂಘದ  ಪದಾಧಿಕಾರಿಗಳಾದ ದೇವರಾಜ, ಮಾರುತೀಶ್, ಲೋಕೇಶ, ಭರತ, ರಾಮು, ಪ್ರಮುಖರಾದ ಚನ್ನೇಗೌಡ,ಬಸವರಾಜು, ನಾಗರಾಜು ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement