ಸ್ವಚ್ಛತೆ ಬಗ್ಗೆ ಗಮನಹರಿಸಲು ವೈದ್ಯರ ಕರೆ
ಕ.ಪ್ರ. ವಾರ್ತೆ , ತುಮಕೂರು , ಜ. 15
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕು ಎಂದು ಶಿರಾ ತಾಲೂಕು ವೈದ್ಯಾಧಿಕಾರಿ ಡಾ. ತಿಮ್ಮರಾಜು ಸಲಹೆ ನೀಡಿದರು.
ಅವರು ಶಿರಾ ತಾಲೂಕು ಚಂಗಾವರ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತ ಶೂ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿ ಮನೆಗೆ ಗ್ರಾಮ ಪಂಚಾಯಿತಿಯಿಂದ ಶೌಚಾಲಯಕ್ಕೆ ಸರ್ಕಾರ ಅನುದಾನ ಕೊಡುತ್ತದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಹಾಗೆಯೇ ಕರ್ನಾಟಕವನ್ನು ಸ್ವಚ್ಛತಾ ರಾಜ್ಯ ಮಾಡುವುದು ನಿಮ್ಮ ಕೈಯಲ್ಲಿದೆ ಎಂದರು.
ಮುಂಬರುವ ದಿನಗಳಲ್ಲಿ ಪೊಲಿಯೋ ಲಸಿಕೆ ಕಾರ್ಯಕ್ರಮವಿದ್ದು ಪ್ರತಿಯೊಂದು ಮಗುವಿಗೆ ಪೊಲಿಯೋ ಹನಿ ಹಾಕಿಸಿರುವುದರ ಮೂಲಕ ಅಂಗವಿಕಲತೆ ತಡೆಗಟ್ಟಬೇಕೆಂದರು.
ಗ್ರಾಮೀಣ ಪ್ರತಿಭೆಗೆ ಕೊರತೆಯಿಲ್ಲ: ಮುಖ್ಯ ಅತಿಥಿಯಾಗಿ ಮಾತನಾಡಿದ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್‌ನ ಚಂಗಾವರ ಮಾರಣ್ಣ, ಗ್ರಾಮೀಣ ಪ್ರತಿಭೆಗಳು ಯಾವುದೇ ನಗರ ಪ್ರದೇಶಗಳ ಪ್ರತಿಭೆಗಳಿಗಿಂತ ಕಡಿಮೆ ಇಲ್ಲ. ಇವತ್ತಿನ ದಿನದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್, ಕೆಎಎಸ್ ಅಧಿಕಾರಿಗಳಾಗಲು
ಪ್ರಯತ್ನಿಸಬೇಕು. ಇತ್ತೀಚಿನ ದಿನದಲ್ಲಿ ಒಳ್ಳೆಯ ಅಧಿಕಾರಿಗಳು, ಕವಿಗಳು, ರಾಜಕೀಯ ವ್ಯಕ್ತಿಗಳು ಹಳ್ಳಿಯವರೇಎಂಬುದು ಗಮನಾರ್ಹ. ಆದ ಕಾರಣ ಇಂದಿನ ಮಕ್ಕಳೇ ಮುಂದಿನ ಒಳ್ಳೆಯ ಪ್ರಜೆಗಳಾಗಬೇಕೆಂದರು.
ಶ್ಲಾಘನೀಯ: ಶಿವು ಚಂಗಾವರ ಮಾತನಾಡಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಶೂ ನೀಡುತ್ತಿರುವ ಬೆಂಗಳೂರಿನ ಕರುಣಾ ಟ್ರಸ್ಟ್ ಮತ್ತು ಪಟ್ಟನಾಯಕನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾರ್ಯ ಶ್ಲಾಘನೀಯ ಎಂದರು.
ಆರೋಗ್ಯ ನಿರ್ವಹಣೆ ಜೊತೆಗೆ ಇಂತಹ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಒಳ್ಳೆಯದು ಹಾಗೆಯೇ ಹಿಂದುಳಿದ ಚಂಗಾವರ ಗ್ರಾಮದಲ್ಲಿ ನಡೆಯುತ್ತಿರುವುದು ಇನ್ನೂ ಒಳ್ಳೆಯ ವಿಚಾರ ಎಂದರು.
ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಕೆಂಚಮ್ಮ ವೆಂಕಟರಾಮಯ್ಯ, ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತಾಧಿಕಾರಿ ವೆಂಕಟೇಶ್ ರೆಡ್ಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರಾದ ನೀಲಕಂಠಪ್ಪ, ಪ್ರೌಢಶಾಲಾ ಪ್ರಭಾರಿ ಮುಖ್ಯ ಶಿಕ್ಷಕ ಪ್ರಕಾಶ್, ಪ್ರಾಥಮಿಕ ಪಾಠಶಾಲೆ ಮುಖ್ಯ ಶಿಕ್ಷಕ ಶಿವಲಿಂಗಯ್ಯ ಎಸ್‌ಡಿಎಂಸಿ ಅಧ್ಯಕ್ಷ ಬೆಟ್ಟಪ್ಪನಹಳ್ಳಿ ಹನುಮಂತರಾಯಪ್ಪ, ಉಪಕೇಂದ್ರದ ಶುಶ್ರೂಷಕಿ ಜ್ಯೋತಿ, ಪುರುಷ ಶುಶ್ರೂಷಕ ಈಶಣ್ಣ, ಗುಬ್ಬಿ ಲಿಂಕ್ ಎ.ಆರ್.ಟಿ. ಶುಶ್ರೂಷಕಿ ಲಕ್ಷ್ಮಿದೇವಿ .ಜಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಅಕ್ಕಮರಾಮಯ್ಯ, ಗ್ರಾಮ ಪಂಚಾಯಿತಿ ಸದಸ್ಯೆ ಲಕ್ಷ್ಮೀದೇವಿ ಕರೆಬೊಮ್ಮಯ್ಯ, ಗ್ರಾಮ ಪಂಚಾಯಿತಿ ಸದಸ್ಯೆ ರತ್ನಮ್ಮ ಗಂಗಾಧರ್, ಗೋವಿಂದಮ್ಮ, ಮತ್ತಿತರರು ಉಪಸ್ಥಿತರಿದ್ದರು.
ಆರ್.ರಾಧಾ ಪ್ರಾರ್ಥಿಸಿ, ದೈಹಿಕ ಶಿಕ್ಷಕ ಎಚ್. ನಾಗರಾಜು ಸ್ವಾಗತಿಸಿ, ಶ್ರೀಧರ್ ವಂದಿಸಿದರು. 469 ವಿದ್ಯಾರ್ಥಿಗಳಿಗೆ ಉಚಿತ ಶೂ ವಿತರಣೆ ಮಾಡಲಾಯಿತು.