ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹಳ್ಳ ಹಿಡಿಯಿತು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ

Vishwanath S
Updated On : 16 Jan 2014, 1:39 am

ತುಮಕೂರು: ತುಮಕೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ ಮಹತ್ವಾಕಾಂಕ್ಷಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಯೋಜನೆ ಅಕ್ಷರಶಃ ಹಳ್ಳ ಹಿಡಿದಿದೆ.
2007 ರಲ್ಲಿ ಅಂದಿನ ತುಮಕೂರು ಜಿಲ್ಲಾಧಿಕಾರಿಯಾಗಿದ್ದ ಎಸ್.ಆರ್. ಉಮಾಶಂಕರ್ ಅವರು  ಯೋಜನಾ ವರದಿ ತಯಾರಿಸಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅನುಮತಿ ಪಡೆದರು. ಜತೆಗೆ  ತುಮಕೂರು ಬಳಿಯ ಕೇಂದ್ರಿಯ ವಿದ್ಯಾಲಯಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಈ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪಿಸಲು 6 ಎಕರೆ 10 ಗುಂಟೆ ಜಾಗ ಮಂಜೂರು ಮಾಡಿದ್ದರು.
ಕೇಂದ್ರ, ರಾಜ್ಯ ಸಹಭಾಗಿತ್ವ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ನಿರ್ಮಾಣವಾಗಬೇಕಾಗಿದ್ದ ಈ ಯೋಜನೆ ಚಾಲನೆಗೆ ಸಕಲ ರೀತಿಯಲ್ಲೂ ತಯಾರು ಮಾಡಿದ್ದರು. 2007 ರಲ್ಲಿ ಈ ಕೇಂದ್ರ ಸ್ಥಾಪಿಸಲು ಅಂದಾಜು 2 ಕೋಟಿ ರು. ವೆಚ್ಚ ತಗಲುತ್ತದೆ ಎಂದು ಅಂದಾಜಿಸಲಾಗಿತ್ತು. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ 1 ಕೋಟಿ ರು. ನೀಡಬೇಕಾಗಿತ್ತು.
ಕೈ ಕೊಟ್ಟ ಕೇಂದ್ರ: ಆದರೆ ಒಂದಷ್ಟು ಅಡ್ಡಿ ಎದುರಾಯಿತು. ಜತೆಗೆ ಅಂದಾಜು ವೆಚ್ಚವೂ 2 ಕೋಟಿ ಯಿಂದ 2.60 ಕೋಟಿಗೆ ಜಿಗಿಯಿತು. ಆಗ ರಾಜ್ಯ ಸರ್ಕಾರ ತನ್ನ ಪಾಲಿನ 1 ಕೋಟಿ 30 ಲಕ್ಷ ನೀಡಿತು. ಕೇಂದ್ರ ಸರ್ಕಾರದ 11ನೇ ಪಂಚವಾರ್ಷಿಕ ಯೋಜನೆಯಲ್ಲಿ 1 ಕೋಟಿ 30 ಲಕ್ಷ ಬರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಹಣವನ್ನು ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಸುರಿಯಲು ಮಗ್ನವಾಯಿತೇ ವಿನಃ ಉಪಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಹಣ ನೀಡಲು ಸುತಾರಾಂ ಸಿದ್ಧವಿರಲಿಲ್ಲ.
ಬಡ್ಡಿಯೇ ಇಲ್ಲ: ಈ ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯ ಸರ್ಕಾರ ನೀಡಿದ್ದ 1 ಕೋಟಿ 30 ಲಕ್ಷ ರು. ಜಿಲ್ಲಾಧಿಕಾರಿಗಳ ಪರ್ಸನಲ್ ಫಂಡ್‌ನಲ್ಲಿ ಡೆಪಾಸಿಟ್ ಮಾಡಲಾಗಿದೆ. ಆದರೆ ಇಲ್ಲಿ ಒಂದು ನಯಾ ಪೈಸೆ ಕೂಡ ಬಡ್ಡಿ ಬರುವುದಿಲ್ಲ. ಕಳೆದ 5 ವರ್ಷಗಳಿಂದ ಈ ಹಣ ಹಾಗೆ ಬಿದ್ದಿದೆ.
ಬೇಕಿದೆ 3 ಕೋಟಿ 70 ಲಕ್ಷ: 2007 ರಲ್ಲಿ ಆರಂಭವಾಗಬೇಕಾಗಿದ್ದ ಈ ಯೋಜನೆ 2014 ಬಂದರೂ ಚಾಲನೆ ಸಿಕ್ಕಿಲ್ಲ. 2 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಬಹುದಿದ್ದ ಈ ಕೇಂದ್ರಕ್ಕೆ ಈಗ ಭರ್ತಿ 5 ಕೋಟಿ ಬೇಕು. ಹಾಲಿ ಇರುವುದು 1 ಕೋಟಿ 30 ಲಕ್ಷ. ಇನ್ನು 3 ಕೋಟಿ 70 ಲಕ್ಷ ರು. ಬೇಕಾಗಿದೆ. ಕೇಂದ್ರ ಸರ್ಕಾರ ಬಿಲ್ ಕುಲ್ ಹಣ ಕೊಡುವುದಿಲ್ಲವೆಂದು ಕೈ ತೊಳೆದುಕೊಂಡಿದೆ. ಹೀಗಾಗಿ ಉಳಿದ ಹಣ ಯಾರು ಕೊಡುತ್ತಾರೆ ಎಂಬ ಯಕ್ಷ ಪ್ರಶ್ನೆ ಇದೆ. ಈಗಾಗಲೇ ಉಪಪ್ರಾದೇಶಿಕ ಕೇಂದ್ರದ ಕಾರ್ಯದರ್ಶಿಗಳು ಹಾಗೂ ಸಹ ಕಾರ್ಯದರ್ಶಿಗಳು ಹಲವಾರು ಇಲಾಖೆಗಳಿಗೆ ಮನವಿ ಮಾಡಿ ಹಣ ಬಿಡುಗಡೆ ಮಾಡುವಂತೆ ಕೋರಿದ್ದಾರೆ. ಈ ಮಹತ್ವಾಕಾಂಕ್ಷಿ ಕೇಂದ್ರ ಸ್ಥಾಪನೆಗೆ ಹಣ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದಾರೆ.
ತುಮಕೂರಿನಲ್ಲಿ ಈ ಕೇಂದ್ರ ಸ್ಥಾಪನೆಗೆ ಅಡ್ಡಿ ಎದುರಾಗಿದ್ದು ಇನ್ನು 3 ಕೋಟಿ 70 ಲಕ್ಷ ರು. ಹಣದ ಅವಶ್ಯಕತೆ ಇದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸೇರಿದಂತೆ ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೂ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ.
- ಸಿ. ವಿಶ್ವನಾಥ್
ಉಪ ವಿಜ್ಞಾನ ಕೇಂದ್ರದ ಕಾರ್ಯದರ್ಶಿ
ತುಮಕೂರಿನಲ್ಲಿ ಈ ಕೇಂದ್ರ ಸ್ಥಾಪನೆಗೆ 3ಕೋಟಿ 70 ಲಕ್ಷ ರು. ಹಣದ ಅಗತ್ಯತೆ ಇದೆ. ಹೇಗೂ ತುಮಕೂರು ಮಹಾನಗರಪಾಲಿಕೆಯಾಗಿದೆ. 100 ಕೋಟಿ ರು. ಹಣ ಬರುತ್ತದೆ. ಆ ಹಣದಲ್ಲಿ 3 ಕೋಟಿ 70 ಲಕ್ಷ ರು.ಗಳನ್ನು ಕೇಂದ್ರ ಸ್ಥಾಪನೆಗೆ ನೀಡಿದರೆ ಅನುಕೂಲವಾಗುತ್ತದೆ.
- ಸಿ. ಯತಿರಾಜು
ಉಪ ವಿಜ್ಞಾನ ಕೇಂದ್ರದ ಸಹ ಕಾರ್ಯದರ್ಶಿ
ಮುಖ್ಯಾಂಶಗಳು...
1. ಈ ಕೇಂದ್ರ ಸ್ಥಾಪನೆಗೆ 2007 ರಲ್ಲಿ ನೀಲ ನಕ್ಷೆ
2. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವ
3. ಆರಂಭದಲ್ಲಿ 2 ಕೋಟಿ, ಈಗ 5 ಕೋಟಿಗೆ ಏರಿಕೆ
4. ಕೈ ಎತ್ತಿದ ಕೇಂದ್ರ, ಕೈ ಹಿಡಿದ ರಾಜ್ಯ ಸರ್ಕಾರ
5. ಅಂದಿನ ಡಿಸಿ ಉಮಾಶಂಕರ್ ಈ ಯೋಜನೆ ರೂವಾರಿ
ಕೇಂದ್ರದ ಉದ್ದೇಶ ಏನು?
1. ವಿಜ್ಞಾನ ಮತ್ತು ತಂತ್ರಜ್ಞಾನ ಪರಂಪರೆ ಮಾಹಿತಿ
2. ಜೀವ ಯಾಂತ್ರಿಕ ಮತ್ತು ಮೋಜಿನ ವಿಜ್ಞಾನ
3. ಪ್ರದರ್ಶನಾಲಯಗಳು ಮತ್ತು ತಾರಮಂಡಲ
4. ವಿಜ್ಞಾನ ಪ್ರಾತ್ಯಕ್ಷಿಕೆ, ವಿಜ್ಞಾನ ಉದ್ಯಾನವನ
5. ವಿದ್ಯಾರ್ಥಿಗಳಿಗೆ ವೈವಿಧ್ಯ ಮಾದರಿಗಳ ಪರಿಚಯ
ಆಗಿರುವ ಕೆಲಸ ಏನೇನು?
1. ಅಪ್ರೋಚ್ ರಸ್ತೆ ನಿರ್ಮಾಣ
2. ಭೂಮಿ ಲೆವೆಲಿಂಗ್ ಆಗಿದೆ
3. ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ
4. ನೀರಿನ ಸೌಕರ್ಯ ಇಲ್ಲಿಗೆ ಸಿಕ್ಕಿದೆ
5. 1 ಸಾವಿರ ಗಿಡ ನೆಟ್ಟು ಪೋಷಣೆ
6. ಕೇಂದ್ರದಲ್ಲಿ ಜಲಸಂಗ್ರಹಗಾರ ಸ್ಥಾಪನೆ
ಸಂಸದರಿಂದ ಹಣ ಬಿಡುಗಡೆ
ತುಮಕೂರು: ಅತ್ತ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯಿಂದ ಈ ಯೋಜನೆ ಹಳ್ಳ ಹಿಡಿದಿದ್ದರೆ ಇತ್ತ ಹಾಲಿ ಸಂಸದ ಜಿ.ಎಸ್. ಬಸವರಾಜು ಅವರು ತಮ್ಮ ಸಂಸದರ ನಿಧಿಯಿಂದ ಒಂದಷ್ಟು ಹಣ ಬಿಡುಗಡೆ ಮಾಡಿದ್ದಾರೆ. ಹೀಗಾಗಿ ಕಲ್ಲು, ಬಂಡೆ, ಗುಡ್ಡಗಳಿಂದ ಕೂಡಿದ್ದ ಈ ಜಾಗ ಒಂದಷ್ಟು ನೋಡುವಂತಾಗಿದೆ. ಒಂದಷ್ಟು ಗಿಡಗಳನ್ನು ನೆಡಲಾಗಿದೆ. ಇವಿಷ್ಟು ಮಾತ್ರ ಸದ್ಯಕ್ಕೆ ಆಗಿರುವ ಅಭಿವೃದ್ಧಿ.



-ಉಗಮ ಶ್ರೀನಿವಾಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement