ಅತಿಥಿ ಉಪನ್ಯಾಸಕರಿಗೆ ಗೌರವಧನ ವಿತರಣೆ ಮಾಡದೆ ನಿರ್ಲಕ್ಷ್ಯ
ಕುಣಿಗಲ್: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2010-11ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕರಿಗೆ ಗೌರವಧನ ವಿತರಣೆ ಮಾಡದೆ, ನಿರ್ಲಕ್ಷ್ಯವಹಿಸಿದ್ದ ಕಾಲೇಜು ಸಿಬ್ಬಂದಿಗಳನ್ನು, ಶಾಸಕರು ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ನಡೆಯಿತು.
ಗುರುವಾರ, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಾಸಕರ ಅನುದಾನ ಹಾಗೂ ಕಾಲೇಜು ಅಭಿವೃದ್ಧಿ ಅನುದಾನ ಆಶ್ರಯದಲ್ಲಿ 10ಲಕ್ಷ ರು. ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲು ಆಗಮಿಸಿದ್ದ ಶಾಸಕ ಡಿ.ನಾಗರಾಜಯ್ಯನವರಿಗೆ, ಅತಿಥಿ ಉಪನ್ಯಾಸಕರಾಗಿ 2010-11ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ್ದ 32 ಮಂದಿಗೆ, ಆರು ತಿಂಗಳ ವೇತನ ನೀಡದಿರುವ ಬಗ್ಗೆ ಕೆಲ ಅತಿಥಿ ಉಪನ್ಯಾಸಕರು ದೂರು ನೀಡಿದರು. ಈ ಬಗ್ಗೆ ಪ್ರಾಚಾರ್ಯ ವಿಶ್ವನಾಥ್ಅವರನ್ನು ಶಾಸಕರು ಪ್ರಶ್ನಿಸಿದಾಗ ಸಮರ್ಪಕ ಉತ್ತರ ದೊರೆಯಲಿಲ್ಲ.
ಅಸಮಾಧಾನ: ವೇತನ ವಿತರಣೆಗೆ ಸಂಬಂಧಿಸಿದ ಕಡತವನ್ನು ತರುವಂತೆ ಅಧೀಕ್ಷಕ ಅಶ್ವತ್ಥ್ ಅವರಿಗೆ ಸೂಚಿಸಿದರು. ಕಡತವನ್ನು ಪರಿಶೀಲಿಸಲಾಗಿ, 2010-11ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕರಿಗೆ ಬಾಕಿ ಇರುವ ಸುಮಾರು ಆರು ಲಕ್ಷಕ್ಕೂ ಹೆಚ್ಚಿನ ಮೊತ್ತ ಇಲಾಖೆಯಿಂದ ಬಿಡುಗಡೆಯಾಗಿದ್ದರೂ, ಸಿಬ್ಬಂದಿ ಹಣ ನಗದೀಕರಿಸಿ, ಅತಿಥಿ ಉಪನ್ಯಾಸಕರಿಗೆ ವಿತರಣೆ ಮಾಡದಿರುವ ಲೋಪ ಬಹಿರಂಗಗೊಂಡಿತು. ಕಾಲೇಜು ಸಿಬ್ಬಂದಿಗಳ ಲೋಪಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಸರ್ಕಾರಿ ಸಿಬ್ಬಂದಿ ನಿಮಗೆ ಕೇವಲ ಒಂದು ತಿಂಗಳು ಸಂಬಳ ವಿಳಂಬವಾದರೆ, ಪರದಾಡುತ್ತೀರಾ. ಇನ್ನು ಸರ್ಕಾರ ನೀಡುವ ಅತ್ಯಲ್ಪ ಗೌರವಧನ ಅದೂ ಆರು ತಿಂಗಳ ಅನುದಾನ ನೀಡಿದ್ದರೂ ನಗದೀಕರಿಸಿ ನೀಡಿದೆ ಲೋಪ ಎಸಗಿರುವುದು ನೋಡಿದರೆ ನಿಮ್ಮ ಕಾರ್ಯವೈಖರಿ ಏನೆಂದು ತಿಳಿಯುತ್ತದೆ ಎಂದು ತರಾಟೆಗೆ ತೆಗೆದುಕೊಂಡರು. ಕೂಡಲೆ ಈ ನಿಟ್ಟಿನಲ್ಲಿ ಇಲಾಖೆಯ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ, ವಿನಾಕಾರಣ ಯಾವುದೇ ಕುಂಟುನಪೆ ಹೇಳದೆ, ಅತಿಥಿ ಉಪನ್ಯಾಸಕರ ಬಾಕಿ ಇರುವ ಗೌರವಧನ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ನಂತರ ಕಾಲೇಜಿನಲ್ಲಿ ಶೌಚಾಲಯ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ, ಕಾಲೇಜಿನ ಮೂಲಭೂತ ಅಭಿವೃದ್ಧಿಗೆ 40 ಲಕ್ಷ ರು.ಗಳಷ್ಟು ಅನುದಾನವನ್ನು ವಿಧಾನ ಪರಿಷತ್ ಸದಸ್ಯರು, ರಾಜ್ಯ ಸಭಾ ಸದಸ್ಯರ ಹಾಗೂ ತಮ್ಮ ಬೇರೆ, ಬೇರೆ ನಿಧಿಗಳಿಂದ ಅನುದಾನ ಹೊಂದಿಸಿದ್ದರೂ, ಸುಪ್ರೀಂ ಕೋರ್ಟ್ನ ಆದೇಶದ ತಾಂತ್ರಿಕ ಕಾರಣದಿಂದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ವಿಳಂಬವಾಗುತ್ತಿದೆ. ಮುಂದಿನ ದಿನಗಳಲ್ಲಿ ಇರುವ ಅಡಚಣೆಗಳನ್ನು ನಿವಾರಿಸಿ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದೆಂದರು. ಪ್ರಾಚಾರ್ಯ ವಿಶ್ವನಾಥ, ವಾಣಿಜ್ಯ ವಿಭಾಗದ ಮುಖ್ಯಸ್ಥ ಡಿ.ಕೃಷ್ಣ, ಲೋಕೋಪಯೋಗಿ ಇಲಾಖೆಯ ಎಇಇ ಪ್ರಸನ್ನ ಸೇರಿದಂತೆ ಉಪನ್ಯಾಸಕರು, ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.