ಕಬ್ಬಳ್ಳಿಗೆ ಹೊರಟ ಕಡೇಹಳ್ಳಿಯ ಮಾಲಾಧಾರಿಗಳು
ತುರುವೇಕೆರೆ: ಮಕರ ಸಂಕ್ರಾಂತಿ ಹಬ್ಬದ ಆಜುಬಾಜಿನಲ್ಲಿ ತಾಲೂಕಿನ ನೂರಾರು ಗ್ರಾಮಗಳ ಯುವಕರು ಹಾಗೂ ವಯಸ್ಕರು ಕಬ್ಬಳ್ಳಿಯ ಬಸವೇಶ್ವರನ ಸನ್ನಿಧಾನಕ್ಕೆ ಹೋಗುವುದು ವಾಡಿಕೆ. ಹಲವಾರು ಮಂದಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆಂದು ಶಬರಿ ಮಲೈಗೆ ಹೋಗುವುದು ಸಾಮಾನ್ಯ.
ಆದರೆ ತಾಲೂಕಿನಲ್ಲಿ ಬಹುತೇಕ ಮಾಲಾಧಾರಿಗಳು ಗಡಿ ಭಾಗವಾಗಿರುವ ಚನ್ನರಾಯಪಟ್ಟಣ ತಾಲೂಕಿನ ಕಬ್ಬಳ್ಳಿಯ ಶ್ರೀ ಬಸವೇಶ್ವರ ಸನ್ನಿಧಿಗೆ ಹೋಗುವರು. ಕಳೆದ ಹದಿನೈದು ದಿನಗಳಿಂದ ಮಾಲೆ ಧರಿಸಿರುವ ಸಾವಿರಾರು ಮಾಲಾಧಾರಿಗಳು ಕಬ್ಬಳ್ಳಿಗೆ ತೆರಳಿದರು.
ಅದರಂತೆಯೇ ತಾಲೂಕಿನ ಕಡೇಹಳ್ಳಿಯಲ್ಲಿನ ಮಾಲಾಧಾರಿಗಳು ತಮ್ಮ ಗ್ರಾಮದೇವತೆ ರಂಗನಾಥ ಸ್ವಾಮಿ ಹಾಗೂ ಮಲ್ಲೇಶ್ವರ ದೇವರ ಉತ್ಸವ ಮಾಡುವ ಮೂಲಕ ಗ್ರಾಮದ ಎಲ್ಲಾ ರಸ್ತೆಗಳಲ್ಲಿ ಸಂಚರಿಸಿದರು. ಗ್ರಾಮದ ಪ್ರತಿಯೊಂದು ಮನೆಯವರೂ ತಮ್ಮ ಮನೆಯ ಮುಂದೆ ರಂಗೋಲಿಗಳನ್ನು ಹಾಕಿ ತಳಿರು ತೋರಣಗಳನ್ನು ಕಟ್ಟಿ ಗ್ರಾಮದಲ್ಲಿನ ಯುವಕರು ಆಚರಿಸುತ್ತಿರುವ ಮಾಲಾಧಾರಿ ಕಾರ್ಯಕ್ರಮಕ್ಕೆ ಶುಭ ಕೋರಿದರು. 5 ವರ್ಷದ ಬಾಲಕರಿಂದ ಸುಮಾರು 60 ವರ್ಷದ ವಯೋವಾನವದವರೂ ಸಹ ಮಾಲಾಧಾರಿಗಳಾಗಿದ್ದರು.
ಮಂಗಳವಾರ ಸಾಯಂಕಾಲ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಚಿಲಿಪಿಲಿ ತಂಡದಿಂದ ಬೊಂಬೆ ಕುಣಿತವನ್ನು ಏರ್ಪಡಿಸಲಾಗಿತ್ತು. ಗ್ರಾಮದ ಮುಖಂಡರಾದ ಹಾಗೂ ತಾಲೂಕು ಪಡಿತರ ಮಾರಾಟಗಾರರ ಸಂಘದ ಅಧ್ಯಕ್ಷ ರಾಮಚಂದ್ರು, ಒಕ್ಕಲಿಗರ ಸಂಘದ ಅಧ್ಯಕ್ಷ ಕಡೇಹಳ್ಳಿ ಸಿದ್ದೇಗೌಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕಡೇಹಳ್ಳಿ ಲಿಂಗೇಗೌಡ, ಗ್ರಾಮದ ಮುಖಂಡ ಮಹೇಶ್ ಮೊದಲಾದವರು ಭಾಗವಹಿಸಿದ್ದರು. ಇದೇ ವೇಳೆ ಆದಿಚುಂಚನಗಿರಿ ಸಂಸ್ಥಾನದ ಮಠಾಧೀಶರಾಗಿದ್ದ ಬಾಲಗಂಗಾಧರ ನಾಥ ಸ್ವಾಮಿಗಳ ಪ್ರಥಮ ವರ್ಷದ ಪುಣ್ಯಾರಾಧನೆಯನ್ನೂ ಮಾಡಲಾಯಿತು.