ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕ್ಷುಲ್ಲಕ ಕಾರಣಕ್ಕೆ ಎರಡು ಕೋಮಿನ ನಡುವೆ ಜಟಾಪಟಿ

Vishwanath S
Updated On : 17 Jan 2014, 1:01 am

ಕ.ಪ್ರ.ವಾರ್ತೆ , ಹುಳಿಯಾರು , ಜ.16
ಪಟ್ಟಣದ ಬೀದಿಯೊಂದರಲ್ಲಿ ಹಾಕಿದ್ದ ಮಿಲಾದ್ ಬಂಟಿಂಗ್ಸ್  ಕಿತ್ತುಹಾಕಿದ್ದಾರೆಂದು ಆರೋಪಿಸಿ ಬುಧವಾರ ರಾತ್ರಿ ನಡೆದ ವಾದವಿವಾದ ಎರಡು ಸಮುದಾಯದ ನಡುವೆ ಶೀಥಲ ಸಮರಕ್ಕೆ ಕಾರಣವಾಗಿದ್ದು,  ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ್ದರೆ, ವರ್ತಕರು ಅಂಗಡಿ ಮುಂಗಟ್ಟುಗಳನ್ನು ಕೆಲ ಕಾಲದ ಮಟ್ಟಿಗೆ ಮುಚ್ಚಿದ್ದರಿಂದ  ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಗುರುವಾರ ಬೆಳಿಗ್ಗೆಯಿಂದಲೇ ಮತ್ತೆ  ಪಟ್ಟಣದ ಪೊಲೀಸ್ ಠಾಣೆಯ ಮುಂಭಾಗ ಎರಡು ಕೋಮಿನವರು ಗುಂಪುಗುಂಪಾಗಿ ಜಮಾಯಿಸಿ ಗಲಭೆಗೆ ಕಾರಣರಾದವರನ್ನು ಬಂಧಿಸುವಂತೆ ಒತ್ತಾಯಿಸಿದರು
ಹಿನ್ನೆಲೆ:  ಈದ್ ಹಬ್ಬಕೆಂದು ಪಟ್ಟಣದ ಆಸ್ಪತ್ರೆ ರಸ್ತೆ ಹಾಗೂ ಆಚಾರ್ ಬೀದಿಯಲ್ಲಿ  ಕಟ್ಟಿದ್ದ ಬಂಟಿಂಗ್ಸ್‌ಗಳನ್ನು ಬುಧವಾರ ರಾತ್ರಿ  ಕಾರಿನಲ್ಲಿ ಬಂದ ಕೆಲ ವ್ಯಕ್ತಿಗಳು ಕಿತ್ತು ಹಾಕಿದ್ದು, ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಅವಾಚ್ಯಶಬ್ದಗಳಿಂದ ನಿಂದಿಸಿ ಮಾತನಾಡಿ, ಇಡಿ ಕೋಮಿನವರಿಗೆ ಬೆದರಿಕೆ ಒಡಿದ್ದಾರೆಂದು ಆರೋಪಿಸಿ ಒಂದು ಸಮುದಾಯದವರು ಠಾಣೆಗೆ ದೂರು ಸಲ್ಲಿಸಿದಲ್ಲದೆ, ತಮ್ಮ ಕೋಮಿನ ಮುಖಂಡರುಗಳಿಗೆ ಘಟನೆಯನ್ನು ವಿವರಿಸಿದ್ದಾರೆ. ಆ ಕೋಮಿನ ಮುಖಂಡರು ಈ ಬಗ್ಗೆ ರಾತ್ರಿಯೇ ಮೈಕಿನಲ್ಲಿ ಜನಾಂಗದ ಪ್ರತಿಯೊಬ್ಬರು ಠಾಣೆಯ ಹತ್ತಿರ ಸೇರಲು ತಿಳಿಸಿದ್ದೆ ಘಟನೆ ತೀವ್ರಗೊಳ್ಳಲು ಕಾರಣವಾಯಿತು.
ಕೂಡಲೇ ಬಂಧಿಸಿ:  ಹೀಗಾಗಿ  ರಾತ್ರೋರಾತ್ರಿ ಠಾಣೆಯ ಮುಂಭಾಗಕ್ಕೆ ಸೇರಿದ ಒಂದು ಕೋಮಿನವರು ಘಟನೆಗೆ ಕಾರಣಕರ್ತರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಆ ಕ್ಷಣವೇ ಕ್ರಮಕ್ಕೆ ಮುಂದಾದ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೆಂದು ಠಾಣೆಗೆ ಕರೆತಂದಿದ್ದಾರೆ.  ಆರೋಪಿಗಳನ್ನು ತಮ್ಮ ವಶಕ್ಕೆ ನೀಡುವಂತೆ ಒತ್ತಾಯಿಸಿದ ಗುಂಪು ಪೊಲೀಸರ ನಿರಾಕರಣೆಯ ಹಿನ್ನೆಲೆಯಲ್ಲಿ ಪ್ರಕ್ಷುಬ್ಧರಾಗಿ ಠಾಣೆಯ ಮುಂಭಾಗದಲ್ಲಿದ್ದ ಸರ್ಕಾರಿ ಬಸ್‌ಗೆ ಕಲ್ಲು ತೂರಿ ಗಾಜುಗಳನ್ನು ಪುಡಿಪುಡಿ ಮಾಡಿದ್ದಲ್ಲದೆ, ಪೊಲೀಸ್ ಠಾಣೆ ಹಾಗೂ ಪೊಲೀಸ್ ಜೀಪಿನ ಮೇಲೆ ಕಲ್ಲು ತೂರಿದ್ದು ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆದಿದೆ.
ಘಟನೆ ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್ ಗುಪ್ತ ಹೆಚ್ಚಿನ ಸಿಬ್ಬಂದಿಯೊಂದಿಗೆ ರಾತ್ರಿಯೇ ಸ್ಥಳಕ್ಕಾಗಮಿಸಿ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಪ್ರತಿಭಟನೆ: ರಾತ್ರಿ ನಡೆದ ಘಟನೆ ಅರಿತ ಮತ್ತೊಂದು ಸಮುದಾಯದವರು  ಗುರುವಾರ ಬೆಳಿಗ್ಗೆ ಪಟ್ಟಣದ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಸಾರ್ವಜನಿಕ ಆಸ್ತಿ ಮೇಲೆ ಹಲ್ಲೆ ಮಾಡಿದವರನ್ನು ಹಾಗೂ  ಘಟನೆಗೆ ಪ್ರಚೋದನೆ ನೀಡಿದ ಮುಖಂಡರುಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟಿಸಿದರು.  
ಸ್ಥಳದಲ್ಲಿಯೇ ಇದ್ದ ಎಸ್‌ಪಿ ಹಾಗೂ ಹೆಚ್ಚುವರಿ ಎಸ್‌ಪಿ ಎರಡು ಸಮುದಾಯದವರ ನಡುವೆ ಶಾಂತಿ ಸಭೆ ನಡೆಸಿ, ಎರಡು ಕೋಮುಗಳ ಮುಖಂಡರನ್ನು ಕರೆಯಿಸಿ, ನಡೆದಿರುವ ಘಟನೆಯ ಬಗ್ಗೆ ಚರ್ಚೆ ನಡೆಸಿದರು. ರಾತ್ರಿಯ ಘಟನೆಗೆ ಕಾರಣರಾದವರನ್ನು ಹಾಗೂ ಸಾರ್ವಜನಿಕ ಆಸ್ತಿ ಮೇಲೆ ಹಲ್ಲೆ ನಡೆಸಿರುವವ ಮೇಲೆ ಪ್ರಕರಣ ದಾಖಲಿಸಿದ್ದು, ಅವರನ್ನು ಬಂಧಿಸಿ, ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಪಟ್ಟಣದೆಲ್ಲೆಡೆ ಅನಧಿಕೃತವಾಗಿ ಫ್ಲೆಕ್ಸ್ ಹಾಗೂ ಬಂಟಿಂಗ್ಸ್‌ಗಳನ್ನು ಕಟ್ಟಿದ್ದು, ಅವುಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಪಿಡಿಓಗೆ ಸೂಚಿಸಲಾಯಿತು. ರಾತ್ರಿ ನಡೆದ ಘಟನೆಯ ಬಗ್ಗೆ ಒಂದು ಗುಂಪಿನ ಮುಖಂಡರು ಸಾರ್ವಜನಿಕವಾಗಿ ಕ್ಷಮೆ ಕೇಳಿದಲ್ಲದೆ, ಮುಂದಿನ ದಿನಗಳಲ್ಲಿ  ಯಾವುದೇ ಘರ್ಷಣೆಗೆ ಅವಕಾಶವಿರದಂತೆ ಅನ್ಯೋನ್ಯತೆಯಿಂದಿರಲು ಮನವಿ ಮಾಡಿದ್ದರಿಂದ ಘಟನೆ ಸ್ವಲ್ಪ ಮಟ್ಟಿಗೆ ತಿಳಿಯಾಯಿತು.
ಘಟನೆಯಲ್ಲಿ ಎರಡು ಗುಂಪಿನವರ ವಿರುದ್ಧ  ದೂರು ದಾಖಲಾಗಿದ್ದು, ಒಂದು ಗುಂಪಿನ ಮೂವರು ಹಾಗೂ ಮತ್ತೊಂದು ಗುಂಪಿನ ಆರು ಮಂದಿಯನ್ನು ಇದುವರೆಗೂ ಬಂಧಿಸಲಾಗಿದೆ.
ಹೆಚ್ಚುವರಿ ಎಸ್‌ಪಿ. ಕಾರ್ತಿಕ್ ರೆಡ್ಡಿ, ಉಪವಿಭಾಗಾಧಿಕಾರಿ ಸಿಂಧು, ತಹಸೀಲ್ದಾರ್ ಕಾಮಾಕ್ಷಮ್ಮ, ಸರ್ಕಲ್  ಇನ್ಸ್‌ಪೆಕ್ಟರ್ ಜಯಕುಮಾರ್ ಸೇರಿದಂತೆ ಹುಳಿಯಾರು, ಚಿ.ನಾಹಳ್ಳಿ, ಹಂದನಕೆರೆ ನೊಣವಿನಕೆರೆ ಠಾಣಾಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಹಾಜರಿದ್ದು, ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement