ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಧರ್ಮದ ಹೆಸರಲ್ಲಿ ಭಯ ಹುಟ್ಟಿಸಿದ್ದ ಸಂಪ್ರದಾಯವಾದಿಗಳು

Vishwanath S
Updated On : 17 Jan 2014, 1:01 am

ಕ.ಪ್ರ.ವಾರ್ತೆ , ತುಮಕೂರು , ಜ.16
ಪಟ್ಟಭದ್ರ ಸಂಪ್ರದಾಯವಾದಿಗಳು ಧರ್ಮದ ಹೆಸರಲ್ಲಿ ಭಯ ಹುಟ್ಟಿಸಿದ್ದರು. ದಯವೇ ಧರ್ಮದ ಮೂಲ ಎಂಬ ಅಂಶವನ್ನು ಮರೆಮಾಚಿ ಭಯವೇ ಧರ್ಮದ ಮೂಲ ಎಂಬ ಭೀತಿಯನ್ನು ಪಟ್ಟಭದ್ರ ಹಿತಾಸಕ್ತಿಗಳು ಹುಟ್ಟಿಸಿದ್ದರು ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎಂ.ವಿ.ಗೊಂಗಡಶೆಟ್ಟಿ ಮಾರ್ಮಿಕವಾಗಿ ನುಡಿದರು.
ಅವರು ಸಿದ್ಧಗಂಗಾ ಮಠದಲ್ಲಿ ನಡೆದ ಲಿಂಗೈಕ್ಯ ಅಟವೀಸ್ವಾಮಿಗಳ 113ನೇ ಹಾಗೂ ಉದ್ಧಾನ ಶಿವಯೋಗಿಗಳ 73 ನೇ ಪುಣ್ಯಾರಾಧನೆ ಕಾರ್ಯಕ್ರಮ ಹಾಗೂ ಗ್ರಾಮಾಂತರ ಬಸವ ಜಯಂತಿ ವಾರ್ಷಿಕ ಸಮಾರೋಪ ಸಮಾರಂಭದಲ್ಲಿ ಸಿದ್ಧಗಂಗಾ ಸಂಕ್ರಮಣ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಧರ್ಮವನ್ನು ಅಂಜಿಕೆಯ ರೂಪದಲ್ಲಿ ಬಿಂಬಿಸ ಹೊರಟವರಿಗೆ ಸರಳವಾಗಿ ಧರ್ಮಪಾಲನೆಯ ಮಾರ್ಗವನ್ನು ತೋರಿಸಿಕೊಟ್ಟವರು ಬಸವಣ್ಣನವರು. ಜನಸಾಮಾನ್ಯರಿಂದ ತೆರಿಗೆ, ಕಂದಾಯ ರೂಪದಲ್ಲಿ ಪಡೆದ ಸಂಪನ್ಮೂಲವನ್ನು ಆಳುವ ವರ್ಗಗಳಿಂದ ಕೆಲವೇ ಮುಂದುವರಿದ ವರ್ಗದವರು ದಾನವಾಗಿ ಪಡೆಯುತ್ತಿದ್ದುದರಿಂದ ಅಸಮಾನತೆ ಸೃಷ್ಟಿಯಾಗಿತ್ತು. ಗುರು ಬಸವೇಶ್ವರರು ಹೇಳಿರುವ ಅಷ್ಟಾವರಣಗಳು, ಷಟ್ ಸ್ಥಲಗಳು, ಪಂಚಾಚಾರ, ದಾಸೋಹಗಳು ಪ್ರತಿಯೊಬ್ಬರಿಗೂ ದಾರಿದೀಪವಾಗಿದೆ. ಶರಣರ ದಾಸೋಹ ಪರಿಕಲ್ಪನೆ ನೂರ್ಮಡಿಯಾಗಿ ಸಿದ್ಧಗಂಗೆಯಲ್ಲಿ ಡಾ.ಶಿವಕುಮಾರಸ್ವಾಮಿಗಳ ನೇತೃತ್ವದಲ್ಲಿ ನೆಲೆಯೂರಿದೆ. ಜ್ಞಾನ, ಅನ್ನ, ಧರ್ಮದ ದಾಸೋಹ ಒದಗಿಸುತ್ತಿರುವ ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ಸೇವೆ ಅನನ್ಯವಾದುದು ಎಂದು ಶ್ಲಾಘಿಸಿದರು.
ದಾಸೋಹ ಪರಿಕಲ್ಪನೆ ಶ್ರೇಷ್ಠ: ಮನುಧರ್ಮದ ದಾನದ ಪರಿಕಲ್ಪನೆಗಿಂತ ಬಸವಾದಿ ಶರಣರ ದಾಸೋಹ ಪರಿಕಲ್ಪನೆ ಶ್ರೇಷ್ಠವಾದುದಾಗಿದೆ. ದಾನ-ದಾಸೋಹದ ನಡುವೆ ಬಹಳಷ್ಟು ವ್ಯತ್ಯಾಸವಿದ್ದು, ಸನಾತನ ಧರ್ಮದಲ್ಲಿ ದಾನ, ಬಳುವಳಿಗಳು, ಪುರೋಹಿತಶಾಹಿಗಳು, ಮೇಲ್ವರ್ಗದವರಿಗೆ ಮಾತ್ರ ಸೀಮಿತವಾಗಿ, ದಾನ ಕೊಟ್ಟವರಲ್ಲಿ ಅಹಮಿಕೆ ಭಾವ, ಪಡೆದವರಲ್ಲಿ ದೈನ್ಯತೆಯ ಭಾವವಿರುತ್ತಿತ್ತು. ಇದನ್ನು ಹೊಡೆದು ಹಾಕುಲು ಪ್ರಯತ್ನಿಸಿದ್ದೇ ಶರಣ ಧರ್ಮ. ಶರಣರು ಪ್ರತಿಪಾದಿಸಿದ ದಾಸೋಹ ಪರಿಕಲ್ಪನೆ ತನ್ನಲ್ಲಿರುವುದನ್ನು ನಿಗರ್ವಿಯಾಗಿ ಅವಶ್ಯಕತೆ ಇರುವವರಿಗೆ ಹಂಚು ಎಂಬ ಮಹೋನ್ನತ ಸಂದೇಶ ಸಾರಿದೆ. ಗುರು- ಲಿಂಗ-ಜಂಗಮಕ್ಕೆ ತನು-ಮನ, ದನವನ್ನು ನಿಸ್ಪೃಹವಾಗಿ ಅರ್ಪಿಸುವ ದಾಸೋಹ ಭಾವ ಜಗತ್ತಿಗೆ ಶರಣರು ಕೊಟ್ಟ ಅತ್ಯಂತ್ರ ಶ್ರೇಷ್ಠ ಪರಿಕಲ್ಪನೆಯಾಗಿದೆ ಎಂದು ಗೊಂಗಡಶೆಟ್ಟಿ ಬಣ್ಣಿಸಿದರು.
ಭಾರತರತ್ನಕ್ಕೆ ಆಗ್ರಹ: ಭಾರತರತ್ನಕ್ಕೂ ಮಿಗಿಲಾದ ಸೇವೆ ಸಲ್ಲಿಸಿರುವ ಶತಾಯುಷಿ ಡಾ.ಶಿವಕುಮಾರಸ್ವಾಮೀಜಿ ಅವರಿಗೆ ಭಾರತರತ್ನ ನೀಡಬೇಕೆಂದು ರಾಷ್ಟ್ರದ ಎಲ್ಲಾ ಭಕ್ತರ ಬೇಡಿಕೆ. ಸಿದ್ದಗಂಗಾ ಶ್ರೀಗಳೆಂದೂ ಪ್ರಶಸ್ತಿಯ ಹಿಂದೆ ಅರಸಿಹೋದವರಲ್ಲ. ಲಿಂಗೈಕ್ಯ ಅಟವಿ ಶ್ರೀಗಳು, ಉದ್ಧಾನಶಿವಯೋಗಿಗಳು ತೋರಿಸಿಕೊಟ್ಟ ಮಾರ್ಗದಲ್ಲಿ ಸೇವಾ ಕೈಂಕಯ್ಯ ಮಾಡುತ್ತಾ ಇಡೀ ಮನುಕುಲಕ್ಕೆ ಬೆಳಕಾಗಿದ್ದಾರೆ ಎಂದು ಪ್ರಶಂಶಿಸಿದರು.
967 ಪ್ರದರ್ಶನ: ಪ್ರಾಸ್ತಾವಿಕ ನುಡಿಗಳನ್ನಾಡಿದ ಸಿದ್ದಗಂಗಾ ಮಠಾಧ್ಯಕ್ಷ ಸಿದ್ಧಲಿಂಗಸ್ವಾಮಿಗಳು, ಸಿದ್ದಗಂಗಾ ಮಠದಲ್ಲಿ ದಾಸೋಹ ಪರಿಕಲ್ಪನೆ ಆರಂಭಿಸಿದ ಅಟವೀ ಶಿವಯೋಗಿಗಳು ಹಾಗೂ ಉದ್ಧಾನ ಶಿವಯೋಗಿಗಳನ್ನು ಸ್ಮರಿಸುವ ಪುಣ್ಯದಿನವಿದು.
ಶ್ರೀ ಮಠದ ಗುರುಪರಂಪರೆಯ ಮಾರ್ಗದಲ್ಲಿ ನಡೆದ ಮಠದ ಕೀರ್ತಿಯನ್ನು ವಿಶ್ವಕ್ಕೆ ಬೆಳಗಿದ ಡಾ.ಶಿವಕುಮಾರ ಸ್ವಾಮಿಗಳ ನೇತೃತ್ವದಲ್ಲಿ ಮಠ ಎಂದೆಂದಿಗೂ ಸೇವಾ ಕಾರ್ಯದಲ್ಲಿ ನಿರತವಾಗಲಿದೆ. ಜಗಜ್ಯೋತಿ ಬಸವೇಶ್ವರರ ದಿವ್ಯ ಸಂದೇಶವನ್ನು ಗ್ರಾಮ-ಗ್ರಾಮಗಳಿಗೂ ಮುಟ್ಟಿಸಬೇಕೆಂದು 1979 ರಿಂದ ಮಠದ ಕಲಾವೃಂದದವರು ಹಳ್ಳಿ ಹಳ್ಳಿಗಳಲ್ಲಿ ನಾಟಕ ಮಾಡುತ್ತಾ ಈಗಾಗಲೇ 967 ಗ್ರಾಮಗಳಲ್ಲಿ ಪ್ರದರ್ಶನ ನೀಡಲಾಗಿದೆಯೆಂದರು.
ಈ ಸಂದರ್ಭದಲ್ಲಿ ರೇಣುಕಾ ಪರಮೇಶ್ ಹಾಗೂ ಈಶ್ವರಯ್ಯ ಶಾಸ್ತ್ರಿ ಪ್ರಾಯೋಜಿಸಿದ್ದ ಅಟವಿ ಶ್ರೀ ಪ್ರಶಸ್ತಿಯನ್ನು ಬಳ್ಳಗೆರೆ ಕೃಷಿಕ ಬಿ.ಜಯಣ್ಣ ಹಾಗೂ ಉದ್ಧಾನ ಶ್ರೀ ಪ್ರಶಸ್ತಿಯನ್ನು ವಿಶ್ರಾಂತ ಸಂಸ್ಕೃತ ಪ್ರಾಧ್ಯಾಪಕ ಲಿಂ. ಬಿ.ಗಂಗಪ್ಪ ಅವರ ಸ್ಮರಣಾರ್ಥ ಕುಟುಂಬವರ್ಗದವರಿಗೆ ನೀಡಲಾಯಿತು.
ಸಾನಿಧ್ಯ ವಹಿಸಿದ್ದ ಸಿದ್ಧಗಂಗೆಯ ಡಾ.ಶಿವಕುಮಾರಸ್ವಾಮಿಗಳು, ಚಿಕ್ಕತೊಟ್ಲುಕೆರೆ ಅಟವೀ ಕ್ಷೇತ್ರದ ಅಟವೀ ಶಿವಲಿಂಗಸ್ವಾಮಿಗಳು ಆಶೀರ್ವವಚನ ನೀಡಿದರು. ಪ್ರೊ.ಎಚ್.ವಿ. ವೀರಭದ್ರಯ್ಯ ಕಾರ್ಯಕ್ರಮಮ ನಿರೂಪಿಸಿದರು.
ಮೂಲ ಹುಡುಕದೇ ಅನುಷ್ಠಾನ ನೋಡಿ
ತುಮಕೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಮೀನಾಕ್ಷಿ ಖಂಡಿಮಠ ಮಾತನಾಡಿ, ಸಕಲರನ್ನು ಸಮಾನವಾಗಿ ಕಂಡು ಲೇಸು ಬಯಸಿದ ವೀರಶೈವ ಸಿದ್ಧಾಂತವನ್ನು ಯಾರು ಪ್ರತಿಪಾದಿಸಿದರು ಎಂದು ಮೂಲ ಹುಡುಕಿ ನೋಡುವುದಕ್ಕಿಂತ ಸಿದ್ದಗಂಗೆಯಲ್ಲಿ ಸಿದ್ಧಾಂತದ ಪೂರ್ಣ ಅನುಷ್ಠಾನ ನೋಡಿ ಸಂಭ್ರಮಪಡುವುದೇ ಒಳಿತು ಎಂದರು.
ಜಾತಿ ಮತ-ಭೇದವಿಲ್ಲದೆ ಸಹಸ್ರಾರು ಮುಕ್ಕಳಿಗೆ ಅನ್ನ, ವಿದ್ಯಾ ದಾಸೋಹ ನೀಡುತ್ತಿರುವ ಶ್ರೀಗಳ ಸೇವೆಗೆ ಎಣೆಯೆಂಬುದಿಲ್ಲ. ಕಾಯಕವೇ ಆಚಾರ, ಸೇವೆಯೇ ಸದಾಚಾರ ಎಂಬ ಭಾವನೆಯಡಿ 106 ರ ವಯಸ್ಸಿನಲ್ಲೂ ಹರೆಯದವರಿಗೆ ಮೀರಿದ ಚೈತನ್ಯ ಹೊಂದಿ ಸಮಾಜ ಸೇವಾ ಕಾರ್ಯ ಮಾಡುತ್ತಿರುವ ಸಿದ್ದಗಂಗಾ ಶ್ರೀಗಳು ಮನುಕುಲದ ಪುಣ್ಯ ವಿಶೇಷವಾಗಿದ್ದಾರೆ. 12ನೇ ಶತಮಾನದ ಶರಣರನ್ನು ಕಾಣಲಾಗದ ನಾವು ಶ್ರೀಗಳಲ್ಲಿ ಶರಣರನ್ನು ಕಾಣಬಹುದಾಗಿದೆಯೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement