ವಿಕಲಚೇತನರಿಗೆ ಉಚಿತ ಸಾಧನ ಸಲಕರಣೆ
ಕನ್ನಡಪ್ರಭ ವಾರ್ತೆ , ತುಮಕೂರು , ಜ.16
ನವದೆಹಲಿಯ ಪಂಡಿತ ದೀನ ದಯಾಳ್ ಉಪಾಧ್ಯಾಯ ದೈಹಿಕ ವಿಕಲಚೇತನರ ರಾಷ್ಟ್ರೀಯ ಸಂಸ್ಥೆ ವತಿಯಿಂದ ನೀಡಿರುವ ಅಂಗವಿಕಲರ ಸಾಧನ ಸಲಕರಣೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ತುಮಕೂರು,ಗುಬ್ಬಿ, ಕುಣಿಗಲ್, ತಿಪಟೂರು, ಕೊರಟಗೆರೆ ಹಾಗೂ ತುರುವೇಕೆರೆ ತಾಲೂಕಿನ 926 ಮಂದಿಗೆ ಶಿರಾ, ಮಧುಗಿರಿ, ಪಾವಗಡ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನ 460 ಮಂದಿಗೆ ಸೇರಿ ಒಟ್ಟು 1382 ಫಲಾನುಭವಿಗಳಿಗೆ ಈ ಸಾಧನಾ ಸಲಕರಣೆಗಳನ್ನು ವಿತರಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಬಸವಯ್ಯ ತಿಳಿಸಿದ್ದಾರೆ.
ಜ. 19 ಮತ್ತು 21 ರಂದು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ತುಮಕೂರು, ಗುಬ್ಬಿ, ಕುಣಿಗಲ್, ತಿಪಟೂರು, ಕೊರಟಗೆರೆ ಹಾಗೂ ತುರುವೇಕೆರೆ ತಾಲೂಕಿನ ಅರ್ಹ ಫಲಾನುಭವಿಗಳಿಗೆ ಸಾಧನಾ ಸಲಕರಣಗಳನ್ನು ವಿತರಿಸಿದರೆ 20 ರಂದು ಶಿರಾದ ವಿವೇಕಾನಂದ ಕ್ರೀಡಾಂಗಣದಲ್ಲಿ ಶಿರಾ, ಮಧುಗಿರಿ, ಪಾವಗಡ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನ ಫಲಾನುಭವಿಗಳಿಗೆ ವಿತರಿಸಲಾಗುವುದು.
ವಿತರಣೆ: ತುಮಕೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 234 ಮಂದಿಗೆ ಟ್ರೈಸೈಕಲ್, 14 ಮಕ್ಕಳಿಗೆ ವ್ಹೀಲ್ ಚೇರ್ ಹಾಗೂ ದೊಡ್ಡವರಿಗೆ 158 ವ್ಹೀಲ್ ಚೇರ್ ವಿತರಿಸಲಾಗುವುದು. ಹಾಗೆಯೇ 2 ಸಣ್ಣ, 82 ಮಧ್ಯಮ ಹಾಗೂ 116 ದೊಡ್ಡ ಕ್ರಚರ್ಸ್‌ಗಳನ್ನು ನೀಡಲಾಗುವುದು. ಹಾಗೆಯೇ 2 ಸಣ್ಣ, 82 ಮಧ್ಯಮ ಹಾಗೂ 116 ದೊಡ್ಡ ಎಲ್‌ಬೋ ಕ್ರಚರ್ಸ್‌ಗಳನ್ನು ವಿತರಿಸಲಾಗುವುದು.
ಹಾಗೆಯೇ 80 ವಾಕಿಂಗ್ ಸ್ಟಿಕ್, 189 ಬ್ರೈನ್ ಕೇನ್ ಹಾಗೂ 77 ಬ್ರೈನ್ ಸ್ಲೇಟ್ ನೀಡಲಾಗುವುದು ಎಂದು ನಿರೂಪಣಾಧಿಕಾರಿ ನಟರಾಜ್ ಮಾಹಿತಿ ನೀಡಿದರು.
ಇನ್ನು ಶಿರಾದಲ್ಲಿ 88 ತ್ರೈಸೈಕಲ್, ಮಕ್ಕಳ 7 ವ್ಹೀಲ್ ಚೇರ್ 51 ದೊಡ್ಡವರಿಗೆ ವ್ಹೀಲ್ ಚೇರ್ ನೀಡಲಾಗುವುದು. 1 ಸಣ್ಣ, ಮಧ್ಯಮ 20 ಹಾಗೂ 70 ದೊಡ್ಡ ಕ್ರಚರ್ಸ್‌ಗಳನ್ನು ನೀಡಲಾಗುವುದು. ಹಾಗೆಯೇ 23 ವಾಕಿಂಗ್ ಸ್ಟಿಕ್, ಬ್ರೈನ್ ಕೇನ್ 80 ಮತ್ತು 51 ಬ್ರೈನ್ ಸ್ಟೇಟ್ ಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಈ ಫಲಾನುಭವಿಗಳನ್ನು ಕರೆ ತರಲು ಬಸ್ ವ್ಯವಸ್ಥೆ ಮಾಡಲಾಗಿದೆ. ಶಿಬಿರದ ನಂತರ ಸಾಧನ ಸಲಕರಣೆಗಳೊಂದಿಗೆ ಮನೆಬಾಗಿಲಿಗೆ ತಲುಪಿಸಲು ವಾಹನ ಹಾಗೂ ಸಿಬ್ಬಂದಿ ವ್ಯವಸ್ಥೆ ಮಾಡಲಾಗಿದೆ. ಶಿಬಿರದಲ್ಲಿ ಪಾಲ್ಗೊಳ್ಳುವ ಫಲಾನುಭವಿಗಳು ಹಾಗೂ ಸಹಾಯಕರಿಗೆ ಉಟ, ಉಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ.
ತುಮಕೂರು ಹಾಗೂ ಶಿರಾದಲ್ಲಿ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಉದ್ಘಾಟಿಸುವರು. ಪತ್ರಿಕಾಗೋಷ್ಠಿಯಲ್ಲಿ ಟಿ.ಎಂ. ಸ್ವಾಮಿ, ಎಸ್. ನಾಗಣ್ಣ, ಸಿ.ವಿ. ಮಹದೇವಯ್ಯ, ಕೊಪ್ಪಲ್ ನಾಗರಾಜ್, ಗಾಯತ್ರಿ ಇದ್ದರು.