ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವ್ಯಕ್ತಿತ್ವ ರೂಪಿಸಿಕೊಳ್ಳಲು ನಾಟಕೋತ್ಸವ ಸಾಧನ

Vishwanath S
Updated On : 17 Jan 2014, 1:02 am

ಕನ್ನಡಪ್ರಭ ವಾರ್ತೆ ,  ತುಮಕೂರು ,  ಜ.16
ನಾಟಕೋತ್ಸವಗಳು ಮಕ್ಕಳ ವ್ಯಕ್ತಿತ್ವ ರೂಪಿಸಿಕೊಳ್ಳಲು ಒಂದು ಸಾಧನ ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅಭಿಪ್ರಾಯಪಟ್ಟರು.
ಅವರು ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶ್ರೀರಂಗ ರಂಗ ತಂಡ ಆಯೋಜಿಸಿದ್ದ ರಾಜ್ಯ ಮಟ್ಟದ ಮಕ್ಕಳ ನಾಟಕೋತ್ಸವ ಚಿಲಿಪಿಲಿಯಲ್ಲಿ ಪ್ರಶಸ್ತಿ ವಿಜೇತ ನಾಟಕ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಈ ನಿಟ್ಟಿನಲ್ಲಿ ತಂದೆ ತಾಯಿಗಳು, ಶಾಲಾ ಶಿಕ್ಷಕರ ಪಾತ್ರ ಬಹಳ ಮುಖ್ಯ. ಮಂದಿನ ದಿನಗಳಲ್ಲಿ
ಹೆಚ್ಚು ಮಕ್ಕಳ ತಂಡಗಳು ಭಾಗವಹಿಸಲಿ ಎಂದು ಜಿಲ್ಲಾಧಿಕಾರಿಗಳು ಆಶಿಸಿದರು.
ಅನೇಕ ಸಂಸ್ಥೆಗಳು ಹುಟ್ಟುತ್ತವೆ ಸಾಯುತ್ತವೆ. ಆದರೆ ಶ್ರೀ ರಂಗರಂಗ ಹವ್ಯಾಸಿ ಕಲಾವೃಂದ ತನ್ನ ಶಕ್ತಿಮೀರಿ 28 ವರ್ಷಗಳಿಂದ ನಿರಂತರವಾಗಿ ರಂಗದ ಅಸ್ತಿತ್ವವನ್ನು ಉಳಿಸಿ ಬೆಳೆಸಿಕೊಂಡು ಬರುವಲ್ಲಿ ಯಶಸ್ವಿಯಾಗಿದೆ ಎಂದರೆ ಅವರಿಗಿರುವ ಬದ್ಧತೆಯನ್ನು ಸಮಾಜಕ್ಕೆ ಎತ್ತಿ ತೋರಿಸುತ್ತದೆ ಎಂದು ನುಡಿದರು.
ಬಲಿಷ್ಠ ರಂಗಭೂಮಿ: ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಿ.ಎನ್.ವಿ. ರೆಡ್ಡಿ ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ರಂಗಭೂಮಿ ಅತ್ಯಂತ ಬಲಿಷ್ಠವಾದುದು. ತತ್‌ಕ್ಷಣಕ್ಕೆ ಮನುಷ್ಯ ಸಂಬಂಧಗಳನ್ನು ಸಂವಹನಗೊಳಿಸುವ ಶಕ್ತಿ ಇರುವುದು ರಂಗಭೂಮಿಗೆ ಮಾತ್ರ. ಅದರಲ್ಲೂ ವೃತ್ತಿ ರಂಗಭೂಮಿಯಂತೂ ಸಮಾಜಕ್ಕೆ, ಹೆತ್ತವರಿಗೆ, ಉಪಾಧ್ಯಾಯರಿಗೆ ಅಪ್ಯಾಯಮಾನವಾಗಿ ಕಾಣಿಸುತ್ತದೆ ಎಂದು ಮುಖ್ಯ ಅತಿಥಿಗಳಾಗಿ ತಿಳಿಸಿದರು.
ಶ್ರೀ ರಂಗರಂಗ ಕಲಾವೃಂದದ ಅಧ್ಯಕ್ಷ ಎಸ್. ನಾಗಣ್ಣ ಮಾತನಾಡಿ ಮೊದಲು ಬೆಂಗಳೂರಿನ ಎ.ಎಸ್. ಮೂರ್ತಿ ಅವರ ತಂಡಗಳಿಂದ ಹಿಡಿದು ಗುಲ್ಬರ್ಗ ಬೀದರ್‌ವರೆಗೂ 20 ರಿಂದ 30 ನಾಟಕ ತಂಡಗಳು
ಭಾಗವಹಿಸುತ್ತಿದ್ದವು. ಬರುಬರುತ್ತಾ ಕಡಿಮೆಯಾಗುತ್ತಿವೆ ಎಂದು ವಿಷಾದಿಸಿದರು.
ಕಾದುನೋಡಬೇಕಿದೆ: ಇದಕ್ಕೆ ನಾಟಗಳಿಗೆ ತಗುಲುವ ವೆಚ್ಚ ಒಂದು ಸಕಾರಣವಾಗಿದ್ದರೂ ಅಂಕಗಳನ್ನು ತಯಾರಿಸುವ ಕಾರ್ಖಾನೆಗಳ ಹಿಂದೆ ಬೀಳುತ್ತಿರುವ ಪಾಲಕರು ಇನ್ನೊಂದು ಕಡೆ. ನೋಟುಗಳನ್ನೇ ನೋಡುತ್ತಿರುವ ವರ್ಗ ಇನ್ನೊಂದು ಕಡೆ ಸಾಂಸ್ಕೃತಿಕ ಬದುಕಿನ ಕಡೆ ಯಾರು ಗಮನಹರಿಸುತ್ತಾರೋ ಕಾದು ನೋಡಬೇಕಾಗಿದೆ ಎಂದರು.
ನಾವಂತೂ ಕಷ್ಟ ಸುಖ ಎರಡನ್ನೂ ಅನುಭವಿಸಿಕೊಂಡು ಮುಂದುವರಿಯುತ್ತೇವೆ ಎಂದು ನುಡಿದರು.
ಗೌಡನಕಟ್ಟೆ ತಿಮ್ಮಯ್ಯ, ಉಪನ್ಯಾಸಕಿ ಶಾಂತ ಕಂಪಾರಹಳ್ಳಿ, ಕಲಾವಿದ ನರಸಿಂಹಮೂರ್ತಿ ಅವರು ಮಕ್ಕಳ ನಾಟಕಗಳ ಕುರಿತು ವಿಚಾರ ವಿನಿಮಯ ಮಾಡಿಕೊಂಡರು.
ಶ್ರೀ ರಂಗರಂಗದ ಕಲಾವಿದರು ಜಾಗೃತಿ ಗೀತೆಗಳ ಮೂಲಕ ಪ್ರಾರ್ಥಿಸಿದರು. ಸಂಸ್ಥಾಪಕ ಕಾರ್ಯದರ್ಶಿ ಹೆಚ್.ಎಂ. ರಂಗಯ್ಯ, ಸ್ವಾಗತಿಸಿ ವಂದಿಸಿದರು.
ಉಡುಪಿಗೆ ಪ್ರಥಮ ಬಹುಮಾನ: ತುಮಕೂರಿನಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ನಾಟಕೋತ್ಸವದಲ್ಲಿ ಕೂರಾಡಿಯ ಬಿಎಂಎಂ ಪ್ರೌಢಶಾಲೆಯ ಸವಿತಂ ಕೂರಾಡಿ ಪ್ರದರ್ಶಿಸಿದ ಜಂಟಲ್‌ಮನ್ ನಾಟಕವು ಪ್ರಥಮ ಬಹುಮಾನ 10 ಸಾವಿರ ರು. ಪಾರಿತೋಷಕ ಪಡೆಯಿತು.
ಎರಡನೇ ಬಹುಮಾನ 7 ಸಾವಿರ ರು. ಮತ್ತು ಪ್ರಶಸ್ತಿ ಫಲಕವನ್ನು ಧಾರವಾಡ ತಂಡ ಪಡೆದರೆ ಮೂರನೇ ಬಹುಮಾನ 5 ಸಾವಿರ ರು. ಹಾಗೂ ಪಾರಿತೋಷಕವನ್ನು ತುಮಕೂರಿನ ಮೆಳೇಹಳ್ಳಿಯ ತಂಡಕ್ಕೆ ಲಭಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement