ಸರ್ಕಾರದ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ: ಶಾಸಕ
ಪಾವಗಡ: ಸರ್ಕಾರದ ಸೌಲಭ್ಯಗಳು ಸದುಪಯೋಗಪಡಿಸಿಕೊಂಡು ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಶಾಸಕ ಕೆ.ಎಂ. ತಿಮ್ಮರಾಯಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತಾಲೂಕು ಪಂಚಾಯಿತಿ ಹಾಗೂ ಕ್ಷೇತ್ರಾ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಗುರುವಾರ ದೊಮ್ಮತಮರಿ ಗ್ರಾಮದ ಶ್ರೀ ಅಂಜನೇಯಸ್ವಾಮಿ ಪ್ರೌಢಶಾಲಾ ಅವರಣದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣೆ ಕಾರ್ಯಕ್ರಮದಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳಿಗೆ 45 ಬೈಸಿಕಲ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ಗ್ರಾಮೀಣ ವಿದ್ಯಾರ್ಥಿಗಳ ಉತ್ತಮ ವಿದ್ಯಾಭ್ಯ್ಯಾಸಕ್ಕೆ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಸೇರಿದಂತೆ ವಿದ್ಯಾಭ್ಯಾಸದ ಕಡೆ ಹೆಚ್ಚು ಆಸಕ್ತಿ ವಹಿಸಿಸುವ ಮೂಲಕ ಪ್ರತಿಭಾನ್ವಿತರಾಗಿ ಹೆಚ್ಚು ಅಂಕಗಳನ್ನು ಪಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಅವರು ಸಲಹೆ ನೀಡಿದರು. ಸಮವಸ್ತ್ರ ಸೇರಿದಂತೆ ಬೈಸಿಕಲ್, ವಿದ್ಯಾರ್ಥಿ ವೇತನ, ಹಾಸ್ಟೆಲ್ ಸೌಲಭ್ಯ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಸರ್ಕಾರ ವಿವಿಧ ರೀತಿಯ ಸೌಲಭ್ಯಗಳನ್ನು ಕಲ್ಪಿಸಿದ್ದು ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವಂತೆ ತಿಳಿಸಿದರು. ತಾಲೂಕಿನ ವಿವಿಧ ಇಲಾಖೆಯ ಅಭಿವೃದ್ಧಿ ಕೆಲಸಗಳು ಪ್ರಗತಿ ಪಥದಲ್ಲಿದ್ದು ಈಗಾಗಲೇ ತಾಲೂಕಿನಲ್ಲಿ 8 ಕ್ಯಾಂಪ್‌ಗಳು ಹಮ್ಮಿಕೊಳ್ಳುವ ಮೂಲಕ ಸುಮಾರು 4 ಸಾವಿರ ಅರ್ಹರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಲಾಗಿದೆ ಎಂದರು. ಜಿಪಂ ಸದಸ್ಯ ಆರ್.ಸಿ ಅಂಜಿನಪ್ಪ, ಬಿಇಒ ನಾಗರಾಜಪ್ಪ, ಹಿರಿಯ ಮುಖಂಡ ಗುಮ್ಮಘಟ್ಟ ರಾಮಕೃಷ್ಣರೆಡ್ಡಿ,ಪ್ರೌಢಶಾಲೆ ಕಾರ್ಯದರ್ಶಿ ರವೀಂದ್ರರೆಡ್ಡಿ, ನಿವೃತ್ತ ಮುಖ್ಯೋಪಾದ್ಯಾಯ ಹನುಮಂತಪ್ಪ ಅಭಿವೃದ್ಧಿ ಕುರಿತು ಮಾತನಾಡಿದರು.