ಆಸ್ತಿ ಪತ್ರಗಳ ಅಧಿಕೃತ ನೋಂದಣಿ ಅಗತ್ಯ
ಕುಣಿಗಲ್: ಗ್ರಾಮಾಂತರ ಪ್ರದೇಶದಲ್ಲಿನ ಜನತೆ ಆಸ್ತಿಹಂಚಿಕೆ ವಿಷಯದಲ್ಲಿ, ಪಂಚರ ಸಮ್ಮುಖದಲ್ಲಿ, ವಿಭಾಗಪತ್ರ ಮಾಡಿಕೊಳ್ಳುವುದು ಹಿಂದಿನಿಂದ ನಡೆದು ಬಂದ ಸಂಪ್ರದಾಯವಾಗಿದೆ. ಈ ರೀತಿ ಮಾಡಿಕೊಂಡ ಕರಾರನ್ನು ಅಧಿಕೃತ ನೋಂದಣಿ ಮಾಡಿಕೊಳ್ಳುವ ಮೂಲಕ, ಇಂತಹ ಕರಾರುಗಳಿಗೆ ಅಧಿಕೃತ ಸ್ಥಾನಮಾನ ಗಳಿಸಿಕೊಳ್ಳಬಹುದಾಗಿದೆ ಎಂದು ನ್ಯಾಯಾಧೀಶೆ ಆರ್. ಶಾರದಾ ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಮತ್ತು ಕಂದಾಯ ಇಲಾಖೆಯ ಆಶ್ರಯದಲ್ಲಿ ನೂತನವಾಗಿ ತಾಲೂಕು ಕಚೇರಿಯಲ್ಲಿ ಪ್ರಾರಂಭಿಸಲಾಗಿರುವ ಕಾನೂನು ಸಲಹಾ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಗ್ರಾಮಾಂತರ ಪ್ರದೇಶ ಸೇರಿದಂತೆ ಪಟ್ಟಣ ಪ್ರದೇಶದ ಬಹುತೇಕ ಜನತೆಗೆ ಅಗತ್ಯ ಕಾನೂನುಗಳ ತಿಳಿವಳಿಕೆ ಇಲ್ಲದೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಾಲೂಕು ಕಚೇರಿಗೆ ಎಲ್ಲ ರೀತಿಯ ಜನತೆ ತಮ್ಮ ಹಲವು ಸಮಸ್ಯೆಗಳಿಗೆ ಬರುತ್ತಿದ್ದು, ಸಮಸ್ಯೆಗಳನ್ನು ಹೊತ್ತುಬರುವವರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಿ, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಲಹಾ ಕೇಂದ್ರ ಪ್ರಾರಂಭಿಸಲಾಗಿದ್ದು, ಕೇಂದ್ರದಲ್ಲಿ ನಿಯೋಜನೆಗೊಂಡಿರುವ ವಕೀಲರು ಉಚಿತವಾಗಿ ಸಲಹೆ ನೀಡಲಿದ್ದಾರೆ.
ಸಲಹೆಯನ್ನು ಸೋಮವಾರ, ಬುಧವಾರ, ಶುಕ್ರವಾರದಂದು ನೀಡಲಾಗುವುದು. ಅಗತ್ಯತೆಗೆ ತಕ್ಕಂತೆ ಮುಂದಿನ ದಿನಗಳಲ್ಲಿ ವಾರಪೂರ್ತಿ ಕೆಲಸ ನಿರ್ವಹಿಸುವ ಕ್ರಮ ಕೈಗೊಳ್ಳಲಾಗುವುದೆಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ನ್ಯಾಯಾಧೀಶ ಎನ್. ಮುನಿರಾಜು, ಕಂದಾಯ ಹಾಗೂ ತಾಪಂ ಇಲಾಖೆಯಲ್ಲಿನ ಕೆಳಹಂತದ ಸಿಬ್ಬಂದಿ ನಿರ್ವಹಿಸುವ ಕೆಲವು ದಾಖಲೆಗಳಿಂದ ಬಹಳಷ್ಟು ಜನ ತೊಂದರೆಗೀಡಾಗುವಂತಾಗಿದ್ದು, ಗ್ರಾಮಲೆಕ್ಕಿಗರು, ಗ್ರಾಪಂ ಸಿಬ್ಬಂದಿಗಳು ಯಾವುದೇ ದಾಖಲೆಗಳನ್ನು ವಿತರಿಸುವ ಮುನ್ನ ನಿಯಮಾನುಸಾರ ಪರಿಶೀಲಿಸಿ, ಜನರಿಗೆ ತೊಂದರೆಯಾಗದ ರೀತಿಯಲ್ಲಿ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಪುಟ್ಟನರಸಯ್ಯ, ಕಂದಾಯ ಇಲಾಖೆಯ ಬಹುತೇಕ ಸಿಬ್ಬಂದಿ ಗ್ರಾಮಾಂತರ ಪ್ರದೇಶದಿಂದ ಬಂದಿದ್ದು, ಜನತೆಯ ಕಷ್ಟ, ಕಾರ್ಪಣ್ಯಗಳನ್ನು ಬಲ್ಲವರೇ ಆಗಿದ್ದಾರೆ. ಸಮಸ್ಯೆ ಹೊತ್ತು ಬರುವ ಜನತೆಗೆ, ನಿಗದಿತ ಕಾಲಾವಧಿಯೊಳಗೆ ಶೀಘ್ರವಾಗಿ ಸಮಸ್ಯೆಗೆ ಸ್ಪಂದಿಸುವ ಪರಿಪಾಠ ಬೆಳೆಸಿಕೊಳ್ಳಬೇಕಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ದಯಾನಂದ್, ತಾಲೂಕು ಕಚೇರಿಯಲ್ಲಿನ ಕಾನೂನು ಸಲಹಾ ಕೇಂದ್ರದ ನೆರವನ್ನು ತಾಲೂಕಿನ ಎಲ್ಲ ಜನತೆ ಉಚಿತವಾಗಿ ಪಡೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲೂ ಕಾನೂನು ಸಲಹಾ ಕೇಂದ್ರ ಪ್ರಾರಂಭಿಸಲಾಗುವುದು ಎಂದರು.
ವಕೀಲ ಮುಮ್ತಾಜ್ ಆಹಮದ್ ಸಾಮಾನ್ಯ ಕಾನೂನುಗಳ ಬಗ್ಗೆ ಉಪನ್ಯಾಸ ನೀಡಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಶಂಕರಪ್ಪ, ಎಪಿಪಿ ಸುರೇಖಾಹಿರೇಮಠ, ವೆಂಕಟಲಕ್ಷ್ಮಮ್ಮ, ವಕೀಲರಾದ ತಿಮ್ಮಪ್ಪ, ಚಂದ್ರ ಶೇಖರ್, ವಿಶಾಲಕ್ಷ್ಮಿ, ಹುಚ್ಚೇಗೌಡ, ರಂಗನಾಥ, ದೊಡ್ಡಹನುಮಯ್ಯ ಲಕ್ಷ್ಮಣ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.