ಕಾಡಾನೆ ದಾಳಿಗೆ ಬೆಳೆ ನಾಶ
ಗುಬ್ಬಿ: ಎರಡು ದಿನಗಳ ಹಿಂದಷ್ಟೆ ಮಲ್ಲಸಂದ್ರ ಕೆರೆಯಿಂದ ತಾಲೂಕಿನ ಎಂ.ಎಚ್.ಪಟ್ಣ ಕೆರೆಗೆ ಬಂದ ನಾಲ್ಕು ಕಾಡಾನೆಗಳು ಹೇಮಾವತಿ ನೀರಿನಿಂದ ಭರ್ತಿಯಾಗಿದ್ದ ಕೆರೆಯಲ್ಲಿ ಸ್ವಚ್ಛಂದವಾಗಿ ಆಟವಾಡಿಕೊಂಡಿದ್ದವು. ಕಳೆದ ರಾತ್ರಿ ಅಲ್ಲಿಂದ ಮಲ್ಲಸಂದ್ರ ಕೆರೆಗೆ ಹೋಗುವಾಗ ಮಾರ್ಗ ಮಧ್ಯೆ 8 ರಾಗಿ ಮೆದೆಗಳು, 4 ಬಾಳೆ ತೋಟಗಳು, ತೆಂಗಿನ ಮರಗಳು, ಅಡಿಕೆ ಗಿಡಗಳು, ಹಲಸಿನ ಮರಗಳು ಸೇರಿದಂತೆ ರೈತರ ವಿವಿಧ ಬೆಳೆಗಳನ್ನು ಸಂಪೂರ್ಣವಾಗಿ ತುಳಿದು ಹಾಳು ಮಾಡಿವೆ.
ಎಂ.ಎಚ್.ಪಟ್ಣ ಗ್ರಾಮದ ಗಂಗಣ್ಣ, ಲಕ್ಷ್ಮಮ್ಮ ಸೇರಿದಂತೆ ಹಲವು ರೈತರ ಬೆಳೆಗಳನ್ನು ಹಾಳು ಮಾಡಿರುವ ಕಾಡಾನೆಗಳು ಇದೀಗ ಮಲ್ಲಸಂದ್ರ ಕೆರೆಯಲ್ಲಿ ವಾಸ್ತವ್ಯ ಹೂಡಿವೆ. ಕಳೆದ ಬಾರಿ 6 ಕಾಡಾನೆಗಳು ಗುಬ್ಬಿ, ಎಂ.ಎಚ್.ಪಟ್ಣ ಕೆರೆಗಳಲ್ಲಿ ತಂಗಿದ್ದು ಸಾಕಷ್ಟು ರೈತರ ಬೆಳೆಗಳನ್ನು ನಾಶ ಮಾಡಿದ್ದವು. ಈ ಬಾರಿ ಎರಡು ಮರಿಯಾನೆಗಳು, ಒಂದು ಗಂಡು ಮತ್ತು ಒಂದು ಹೆಣ್ಣಾನೆ ಸೇರಿದಂತೆ ಒಟ್ಟು ನಾಲ್ಕು ಕಾಡಾನೆಗಳು ತಾಲೂಕಿಗೆ ಬಂದಿವೆ. ಎರಡು ದಿನಗಳ ಹಿಂದಷ್ಟೆ ಎಂ.ಎಚ್.ಪಟ್ಣ ಕೆರೆಗೆ ಬಂದ ಕಾಡಾನೆಗಳನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಓಡಿಸಲು ಅರಣ್ಯ ಇಲಾಖೆ ಕಾರ್ಯಾಚರಣೆ ಪ್ರಾರಂಭಿಸುತ್ತಿದ್ದಂತೆ ಕೆರೆಯಿಂದ ಮಲ್ಲ ಸಂದ್ರ ಕೆರೆಯತ್ತ ಮುಖ ಮಾಡಿದವು. ಇದರಿಂದ್ದ ರೈತರು ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಅಂತರ್ಜಲ ಕುಸಿತದಿಂದಾಗಿ ಕೊಳವೆ ಬಾವಿಗಳಲ್ಲೂ ಸಮರ್ಪಕ ನೀರು ಬಾರದಿರುವುದರಿಂದ ಬರುವ ಅಷ್ಟಿಷ್ಟು ನೀರಿನಿಂದ ಕಷ್ಟಪಟ್ಟು ಬೆಳೆದ ಬೆಳೆಗಳು ಕಾಡಾನೆಗೆ ತುತ್ತಾಗುತ್ತಿರುವುದು ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ. ಹಲವು ವರ್ಷಗಳಿಂದ ಕಾಡಾನೆಗಳು ತಾಲೂಕಿಗೆ ನಿರಂತರವಾಗಿ ಬರುತ್ತಿದ್ದು ತಾಲೂಕಿನ ಹಲವಾರು ಗ್ರಾಮಗಳ ರೈತರು ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳ ಚಲನ ವಲನದ ಬಗ್ಗೆ ಸಂಪೂರ್ಣ ನಿಗಾ ವಹಿಸಿದ್ದು ಯಾವುದೇ ರೀತಿಯ ಬೆಳೆ ಹಾಗೂ ಜೀವ ಹಾನಿಯಾಗದಂತೆ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಹಗಲು ವೇಳೆಯಲ್ಲಿ ಕೆರೆಯಂಗಳದಲ್ಲಿ ಆಟವಾಡಿಕೊಂಡಿರುವ ನಾಲ್ಕು ಆನೆಗಳು ರಾತ್ರಿಯಾಗುತ್ತಿದ್ದಂತೆ ಸಂಚಾರ ಆರಂಭಿಸುತ್ತವೆ. ಬೆಳಗಾಗುವುದರೊಳಗೆ ಕೆರೆಯಲ್ಲಿ ತಂಗುವುದು ಆನೆಗಳ ನಿತ್ಯದ ಕೆಲಸವಾಗಿದೆ. ಆನೆಗಳನ್ನೇ ಹಿಂಬಾಲಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳು ಸಂಚರಿಸುವ ಗ್ರಾಮಗಳ ಜನತೆಗೆ ಎಚ್ಚರಿಕೆಯಿಂದಿರುವಂತೆ ಸೂಚನೆಗಳನ್ನು ನೀಡುತ್ತಿದ್ದಾರೆ. ಆನೆಗಳು ಬಂದ ದಾರಿಯಲ್ಲೇ ಮತ್ತೆ ಹಿಂದಿರುಗಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ತಾಲೂಕಿನ ರೈತರು ಮತ್ತು ಸಾರ್ವಜನಿಕರು ಅರಣ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ಅರಣ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.
ಕಾಡಾನೆಗಳಿಂದ ರೈತರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಎಲ್ಲ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಂಡರೂ ರಾತ್ರಿ ವೇಳೆಯಲ್ಲಿ ಆನೆಗಳಿಂದ ಉಂಟಾಗುವ ಬೆಳೆ ಹಾನಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಕೆರೆಯ ಸುತ್ತಮುತ್ತಲ ಗ್ರಾಮಗಳ ರೈತರು ಎಚ್ಚರಿಕೆಯಿಂದಿರುವಂತೆ ವಲಯ ಅರಣ್ಯಾಧಿಕಾರಿ ಹರೀಶ್ ಮನವಿ ಮಾಡಿದ್ದಾರೆ.