ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಹಿಳೆ ಸಾವು; ಆಸ್ಪತ್ರೆ ವಿರುದ್ಧ ಪ್ರತಿಭಟನೆ

Vishwanath S
Updated On : 18 Jan 2014, 2:00 am

ತುಮಕೂರು: ಹೆರಿಗೆಗೆಂದು ದಾಖಲಾಗಿದ್ದ ಮಹಿಳೆಯೊಬ್ಬರು ಸಿಜೇರಿಯನ್ ಹೆರಿಗೆಯ ನಂತರ ಸಾವಿಗೀಡಾದ್ದರಿಂದ ಮೃತ ಮಹಿಳೆಯ ಸಂಬಂಧಿಕರು ಆಸ್ಪತ್ರೆಯ ಕಿಟಕಿ ಗಾಜುಗಳನ್ನು ಒಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದ ಎಸ್.ಎಸ್.ಪುರಂನಲ್ಲಿರುವ ಪ್ರಗತಿ ಆಸ್ಪತ್ರೆಯಲ್ಲಿ ನಡೆದಿದೆ.
ತುಮಕೂರು ತಾಲೂಕಿನ ಕೋಳಿಹಳ್ಳಿಯ ಸುಮಿತ್ರ(24) ಎಂಬವರು ಪ್ರಗತಿ ಆಸ್ಪತ್ರೆಗೆ ಚೊಚ್ಚಲ ಹೆರಿಗೆಗೆ ದಾಖಲಾಗಿದ್ದರು.
ರಾತ್ರಿ 8.30ರ ಸುಮಾರಿಗೆ ಅಪರೇಷನ್ ಮೂಲಕ ಹೆರಿಗೆ ಮಾಡಿದ್ದು, ಕೆಲ ಸಮಯ ತಾಯಿ ಮಗು ಆರೋಗ್ಯದಿಂದ ಇದ್ದರು. ಆದರೆ ಒಂದೆರಡು ಗಂಟೆಗಳ ಬಳಿಕ ಬಾಣಂತಿಗೆ ಮೂತ್ರ ವಿಸರ್ಜನೆ ಸಾಧ್ಯವಾಗದೆ ಹೊಟ್ಟೆ ಉಬ್ಬರ ಆರಂಭವಾಗಿದ್ದು, ಮಹಿಳೆಯ ಪೋಷಕರು ಅಸ್ಪತ್ರೆಯಲ್ಲಿದ್ದ ದಾದಿಯರನ್ನು ವಿಚಾರಿಸಿದಾಗ ಅಪರೇಷನ್ ಆಗಿರುವುದಕ್ಕೆ ಹಾಗಾಗಿದೆ. ಇದು ಕಾಮನ್ ಎಂದು ಹೇಳಿ ಕಳುಹಿಸಿದ್ದಾರೆ. ಆದರೆ ವೈದ್ಯರು ಬಂದು ನೋಡಿ ಸೀರಿಯಸ್ ಆಗಿದೆ. ನೀವು ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಎಂದು ಹೇಳಿದ್ದು, ವಿಧಿಯಿಲ್ಲದೆ ಪೋಷಕರು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಾಣಂತಿಯನ್ನು ದಾಖಲಿಸಿದ್ದರು. ಜ.15ರಂದು ಬೆಳಗ್ಗೆ ಮಹಿಳೆ ಮೃತಪಟ್ಟಿದ್ದು, ಮಹಿಳೆಯ ಸಾವಿಗೆ ಪ್ರಗತಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿದರು.
ಈ ವೇಳೆ ವೈದ್ಯರು ಪೋಷಕರ ನೋವಿಗೆ ಪ್ರತಿಸ್ಪಂದಿಸದ ಹಿನ್ನೆಲೆಯಲ್ಲಿ ಕಿಟಕಿಯ ಗಾಜು ಒಡೆದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎನ್‌ಇಪಿಎಸ್ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದು, ನಂತರ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ವಕೀಲರಾದ ಶ್ರೀನಿವಾಸಗೌಡ, ವಕೀಲರ ಸಂಘದ ಕಾರ್ಯದರ್ಶಿ ಬಸವರಾಜು ಮತ್ತು ಜಿಪಂ ಮಾಜಿ ಸದಸ್ಯ ಕೆ.ಎ.ದೇವರಾಜು ಅವರು ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ಪೋಷಕರ ನಡುವೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ಕೈಬಿಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement