ಯುಪಿಎಯಿಂದ ಜನರ ಜೇಬಿಗೆ ಕತ್ತರಿ
ಗುಬ್ಬಿ: ಕೇಂದ್ರದ ಯುಪಿಎ ಸರ್ಕಾರ ದೇಶವನ್ನು ಅಧೋಗತಿಗಿಳಿಸಿದೆ ಯಾವುದೇ ಅಭಿವೃದ್ಧಿಗೂ ಆದ್ಯತೆ ನೀಡಿಲ್ಲ. ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ಬಿ. ನಂದೀಶ್ ತಿಳಿಸಿದರು.
ಪಟ್ಟಣದ ಬಾವಿಮನೆ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಮತಗಟ್ಟೆ ಪ್ರತಿನಿಧಿ-2 ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಪ್ರಜಾ ಪ್ರಭುತ್ವದ ಸಿದ್ಧಾಂತ ಹಾಗೂ ನೀತಿಬದ್ಧ ಚುನಾವಣೆ ನಡೆಸಲು ಬಿಜೆಪಿ ಚಿಂತನೆ ನಡೆಸಿದೆ. ಗ್ರಾಮೀಣ ಮತದಾರರಲ್ಲಿ ಹೊಸ ಚೈತನ್ಯ ತುಂಬಿರುವ ಬಿಜೆಪಿ ಮೋದಿ ಅವರ ಆಡಳಿತಕ್ಕಾಗಿ ಮಹದಾಸೆ ಹೊಂದಿದೆ ಎಂದರು.
ಹಲವಾರು ಭ್ರಷ್ಟಾಚಾರದಲ್ಲಿ ಮುಳುಗಿದ್ದು ದೇಶದ ಅಭಿವೃದ್ಧಿಗೆ ಪೂರಕವಾದ ಯಾವುದೇ ಕಾರ್ಯವನ್ನು ಮಾಡುತ್ತಿಲ್ಲ. ಈಹಿಂದೆ ಚುನಾವಣೆ ವೇಳೆಯಲ್ಲಿ ಹೊರಡಿಸಿದ್ದ ಪ್ರಣಾಳಿಕೆಯಲ್ಲಿ ಹೇಳುವ ಒಂದು ಅಭಿವೃದ್ಧಿ ಕಾರ್ಯವನ್ನು ಕಾರ್ಯಗತಗೊಳಿಸದ ಪ್ರಧಾನಿ ಮನಮೋಹನ್ಸಿಂಗ್ ಆಡಳಿತದ ವಿಫಲತೆಗೆ ನಾಲ್ಕು ರಾಜ್ಯದ ಚುನಾವಣೆ ಫಲಿತಾಂಶ ಉದಾಹರಣೆಯಾಗಿದೆ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಎಚ್.ಟಿ. ಭೈರಪ್ಪ ಮಾತನಾಡಿ, ಗ್ರಾಮೀಣ ಜನರಿಗೆ ಸರ್ಕಾರದ ಸವಲತ್ತು ಸಮರ್ಪಕವಾಗಿ ತಲುಪುತ್ತಿಲ್ಲ. ಅಲ್ಲದೆ ಇಂದಿಗೂ ಪಡಿತರ ಚೀಟಿ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಜನಪ್ರತಿನಿಧಿಗಳಾಗಲೀ ಅಥವಾ ಅಧಿಕಾರಿಗಳಾಗಲೀ ಸಮರ್ಪಕವಾಗಿ ಸ್ಫಂದಿಸುತ್ತಿಲ್ಲ. ಈ ಬಗ್ಗೆ ಬಿಜೆಪಿ ಘಟಕ ಗಂಭೀರ ಚಿಂತನೆ ನಡೆಸಿದ್ದು, ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯವನ್ನು ಹೋರಾಟ ನಡೆಸುವ ಮೂಲಕ ಪಡೆಯುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಗುಬ್ಬಿ ಕ್ಷೇತ್ರದ 210 ಬೂತ್ಗಳಿಗೆ ಮತಗಟ್ಟೆ ಪ್ರತಿನಿಧಿಗಳ ನೇಮಕ ಮಾಡಲಾಯಿತು.
ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಕಾರ್ಯದರ್ಶಿ ಗಂಗರಾಜು, ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಸಿದ್ದರಾಮಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಂಚಾಕ್ಷರಿ, ಜಿಲ್ಲಾ ಉಪಾಧ್ಯಕ್ಷೆ ನಾಗರತ್ನಮ್ಮ, ತಾಪಂ ಸದಸ್ಯೆ ಲಕ್ಷ್ಮೀದೇವಮ್ಮ, ತೆಂಗು ಬೆಳೆಗಾರರ ಕೋಷ್ಠ ಜಿಲ್ಲಾಧ್ಯಕ್ಷ ಎಸ್. ವಿಜಯ್ ಕುಮಾರ್, ಮುಖಂಡರಾದ ಎಸ್.ನಂಜೇಗೌಡ, ಸಾಗರನಹಳ್ಳಿ ನಟರಾಜು, ಲೋಕೇಶ್, ಜಗದೀಶ್, ಉಮೇಶ್, ಹರೀಶ್ ಇದ್ದರು.