ಸುರಕ್ಷತಾ ಸಾಮಗ್ರಿ ಬಳಸಿ ವಿದ್ಯುತ್ ಅವಘಡ ತಪ್ಪಿಸಿ
ತುಮಕೂರು: ಬೆಸ್ಕಾಂ ಸಿಬ್ಬಂದಿ ತಮ್ಮ ಹಾಗೂ ಸಾರ್ವಜನಿಕರ ಪ್ರಾಣವನ್ನು ವಿದ್ಯುತ್ ಅವಘಡಗಳಿಂದ ರಕ್ಷಿಸುವ ನಿಟ್ಟಿನಲ್ಲಿ ತಾವು ಸುರಕ್ಷತಾ ಸಾಮಗ್ರಿಗಳನ್ನು ಬಳಕೆ ಮಾಡುವುದರ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ತಿಳಿಸಿದರು.
ನಗರದ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಬೆಸ್ಕಾಂ ಬೆಂಗಳೂರು ವಿಭಾಗದ ವತಿಯಿಂದ ಆಯೋಜಿಸಿದ್ದ ಸುರಕ್ಷತಾ ಮಾಸಾಚರಣೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಳೆದ ವರ್ಷ ವಿದ್ಯುತ್ ಅವಘಡಗಳಿಂದ ಸುಮಾರು 400 ಜನ ಮೃತಪಟ್ಟಿದ್ದು, ಇಲಾಖೆಯವರಲ್ಲದೆ ಸಾರ್ವಜನಿಕರು ತಮಗೆ ಅರಿವಿಲ್ಲದೆ ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ನಿರ್ವಹಣಾ ಸಿಬ್ಬಂದಿ ಕೆಲಸ ಮಾಡುವಾಗ ಲೈನ್ ಕ್ಲಿಯರ್ ಇದೆಯೇ ಎಂಬುದನ್ನು ಮೊದಲು ಪರೀಕ್ಷಿಸಿಕೊಳ್ಳಬೇಕು. ನಂತರ ತಮಗೆ ನೀಡಿರುವ ಸುರಕ್ಷತಾ ಸಾಧನಗಳಾದ ಅರ್ತಿಂಗ್ ರಾಡ್ ಮೂಲಕ ವಿದ್ಯುತ್ ಪ್ರಹವಹಿಸುತ್ತಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿಕೊಂಡು, ಸೇಫ್ಟಿ ಬೆಲ್ಟ್, ಸೆನ್ಸಾರ್ ಇರುವ ಹೆಲ್ಮೆಟ್ ಧರಿಸಿ ಕೆಲಸ ನಿರ್ವಹಿಸಿದರೆ ಯಾವುದೇ ರೀತಿಯ ಅವಘಡಗಳು ಸಂಭವಿಸುವುದಿಲ್ಲ. ನಿಮಗೆ ಸುರಕ್ಷತಾ ಪರಿಕರಣಗಳನ್ನು ನೀಡಿರುವುದು ಷೋಕೇಸ್‌ನಲ್ಲಿ ಇಡುವುದಕ್ಕಲ್ಲ. ಧರಿಸಿ ಕೆಲಸ ಮಾಡಲು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕೆಂದರು.
ಅಪಘಾತಗಳನ್ನು ತಡೆಯವಲ್ಲಿ ಸಾರ್ವಜನಿಕರ ಪಾತ್ರವೂ ಬಹಳ ಮುಖ್ಯವಾಗಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ವಿದ್ಯುತ್ ಬಳಕೆ ಹೇಗೆ ಎಂಬುದರ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಇದರ ಜೊತೆಗೆ ಹೆಚ್ಚಿನ ಪ್ರಮಾಣದ ವಿದ್ಯುತ್ ಉಪಯೋಗಿಸುವ ನೀರಾವರಿ ಪಂಪ್‌ಸೆಟ್‌ಗಳನ್ನು ಹೊಂದಿರುವ ರೈತರಿಗೆ ಯಾವುದು ಸರಿ, ಯಾವುದು ತಪ್ಪು ಎಂಬುದರ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ವಿದ್ಯುತ್ ಅವಘಡ ಸುರಕ್ಷತಾ ಜಾಗೃತಿ ಮಾಸಾಚರಣೆ ಕೇವಲ ಒಂದು ತಿಂಗಳಿಗೆ ಮಾತ್ರ ಸೀಮಿತವಾಗಬಾರದು. ಕನಿಷ್ಠ ಮೂರು ತಿಂಗಳಿಗೊಮ್ಮೆಯಾದರೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಮತ್ತು ಇಲಾಖಾ ಸಿಬ್ಬಂದಿಯಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ಎಇಇಗಳು ಜನರಿಗೆ ಐಎಸ್‌ಐ ಮಾರ್ಕ್ ಇರುವ ಉಪಕರಣಗಳನ್ನೇ ಬಳಸುವಂತೆ ಮತ್ತು ಅಧಿಕೃತ ಗುತ್ತಿಗೆದಾರರಿಂದಲೇ ವಿದ್ಯುತ್ ಕೆಲಸ ಮಾಡಿಸುವಂತೆ ತಾಕೀತು ಮಾಡಬೇಕು ಎಂದರು.
ಬೆಸ್ಕಾಂ ನಿರ್ದೇಶಕ ನಾಗೇಶ್ ಮಾತನಾಡಿ, ನಿರ್ವಹಣಾ ಸಿಬ್ಬಂದಿ ತಮಗೆ ನೀಡಿರುವ ಸುರಕ್ಷತಾ ಸಾಧನಗಳ ಬಗ್ಗೆ ಉದಾಸೀನ ಮಾಡದೆ ಅವುಗಳನ್ನು ಬಳಕೆ ಮಾಡಿ ತಮ್ಮ ಅಮೂಲ್ಯ ಪ್ರಾಣ ರಕ್ಷಣೆಗೆ ಮುಂಜಾಗ್ರತೆ ವಹಿಸಬೇಕೆಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್ ಗುಪ್ತ ಮಾತನಾಡಿ, ಜನರಿಗೆ ವಿದ್ಯುತ್ ಅತಿ ಮುಖ್ಯವಾಗಿದೆ. ಆದ್ದರಿಂದ ಸಂಚಾರಿ ಅರಿವು ಮೂಡಿಸುವ ರೀತಿಯಲ್ಲಿಯೇ ವಿದ್ಯುತ್ ಅವಘಡದ ಬಗ್ಗೆ ಅರಿವು ಮೂಡಿಸುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಎಂದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಮುಖಂಡ ಎಂ.ನಾಗರಾಜು, ಅಧೀಕ್ಷಕ ಎಂಜಿನಿಯರ್ ಗೋವಿಂದಪ್ಪ, ಬೆಸ್ಕಾಂನ ಪ್ರಧಾನ ಎಂಜಿನಿಯರ್ ಮಹಂತಪ್ಪ, ಕೆಪಿಟಿಸಿಎಲ್ ಅಧೀಕ್ಷಕ ಎಂಜಿನಿಯರ್ ಚಂದ್ರಶೇಖರಯ್ಯ, ತುಮಕೂರು ವಿಭಾಗದ ಇಇ ಬಿ.ನಟರಾಜ್, ನರೇಂದ್ರ, ನಿರ್ವಹಣಾ ಸಿಬ್ಬಂದಿ ಶಿವಕುಮಾರಯ್ಯ ಇದ್ದರು.
ಸಿದ್ದಗಂಗಾ ಕಾಲೇಜಿನ ಮಕ್ಕಳು ನಾಡಗೀತೆ ಹಾಡಿದರು. ಸೌಮ್ಯ ನಿರೂಪಿಸಿದರು. ಚೇತನ ಶಾಲೆಯ ಮಕ್ಕಳಿಗೆ ವಿದ್ಯುತ್ ಅವಘಡ ಕುರಿತು ಚಿತ್ರ ರಚಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.