ವಿದ್ಯಾರ್ಥಿನಿ ಅಪಹರಿಸಿ, ಮದುವೆಗೆ ಯತ್ನ; ಆಟೋ ಚಾಲಕನ ಬಂಧನ
ಕುಣಿಗಲ್: ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿ, ಮದುವೆಯಾಗಲು ಯತ್ನಿಸಿದ ಆಟೋ ಚಾಲಕನನ್ನು ಬಂಧಿಸಿ, ಬಾಲಕಿಯನ್ನು ಇಲ್ಲಿನ ಪೊಲೀಸರು ರಕ್ಷಿಸಿದ್ದಾರೆ
ಬಂಧಿತ ಆಟೋಚಾಲಕನ್ನು ಪಟ್ಟಣದ ಎರಡನೇ ವಾರ್ಡ್ನ ಮಲ್ಲಾಘಟ್ಟ ಪ್ರದೇಶದ ಗಿರೀಶ್ (21) ಎಂದು ಗುರುತಿಸಲಾಗಿದೆ. ಈತ ಪಟ್ಟಣದ ಬಾಲಕಿಯರ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿನಿಯನ್ನು ಬಲವಂತವಾಗಿ ಕಳೆದ ತಿಂಗಳ 23ರಂದು ಅಪಹರಿಸಿ, ನೆಲಮಂಗಲದ ಬಳಿ ಮನೆಯೊಂದರಲ್ಲಿ ಇರಿಸಿ, ಅಲ್ಲಿನ ಕೆಲ ರಾಜಕಾರಣಿಗಳ ಕುಮ್ಮಕಿನಿಂದ ಬಾಲಕಿಯನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದ. ವಿದ್ಯಾರ್ಥಿನಿ ಪೋಷಕರು, ಸ್ಥಳೀಯ ಪೊಲೀಸರಿಗೆ ಮಗಳ ಅಪಹರಣದ ಬಗ್ಗೆ ದೂರು ನೀಡಿದರು. ಈ ಮೇರೆಗೆ, ಅಪಹರಣಕಾರನ ಪತ್ತೆಗೆ ಬಲೆ ಬೀಸಿದ ಪೊಲೀಸರು ನೆಲಮಂಗಲಕ್ಕೆ ಬರುವ ವಿಷಯ ತಿಳಿದು, ಚಾಲಕನ ಕಡೆಯವರು ಅಲ್ಲಿಂದಲೂ ಆಕೆಯನ್ನು ಬೇರೆಡೆಗೆ ಸ್ಥಳಾಂತರಿಸರೆನ್ನಲಾಗಿದೆ.
ನೆಲಮಂಗಲ, ಮಾಗಡಿ ತಾಲೂಕಿನ ವಿವಿಧೆಡೆ ವಿದ್ಯಾರ್ಥಿನಿಯನ್ನು ಇರಿಸಿದ್ದು, 17ರಂದು ಚನ್ನರಾಯಪಟ್ಟಣದ ಹಿರಿಸೇವೆ ಹೋಬಳಿಯ ಗ್ರಾಮದಲ್ಲಿ ಬಲವಂತವಾಗಿ ಮದುವೆಗೆ ಸಿದ್ಧತೆ ನಡೆಸಿದ್ದ ವಿಷಯ ತಿಳಿದ ಪೊಲೀಸರು, ದಿಢೀರ್ ದಾಳಿ ನಡೆಸಿ, ವಿದ್ಯಾರ್ಥಿನಿಯನ್ನು ರಕ್ಷಿಸಿ, ಆಟೋ ಚಾಲಕನನ್ನು ವಶಕ್ಕೆ ಪಡೆದು, ಪ್ರಕರಣ ಧಾಖಲಿಸಿದರು. ಅಪಹರಣಕಾರರಿಂದ ಬಿಡುಗಡೆಗೊಂಡ ವಿದ್ಯಾರ್ಥಿನಿ, ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ ನೆಲಮಂಗಲದ ಕೆಲ ರಾಜಕಾರಣಿಗಳ ಹೆಸರನ್ನು ಸಹ ಬಹಿರಂಗಗೊಳಿಸಿದ್ದು, ಪೊಲೀಸರು ಅವರ ವಿರುದ್ಧ ಕ್ರಮಕ್ಕೆ ಸಿದ್ಧತೆ ನಡೆಸಿದ್ದಾರೆ.