ವಿವೇಕಾನಂದರನ್ನು ನರೇಂದ್ರ ಮೋದಿಗೆ ಸಮೀಕರಿಸಿಕೊಳ್ಳುವುದು ಸಾಂಸ್ಕೃತಿಕ ವಿಕೃತಿ
ಕ.ಪ್ರ.ವಾರ್ತೆ , ತುಮಕೂರು , ಜ.18
ನರೇಂದ್ರ ಮೋದಿಯವರು ತಮ್ಮ ರಾಜಕೀಯಕ್ಕೆ ಸ್ವಾಮಿ ವಿವೇಕಾನಂದರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಂದು ಆ ನರೇಂದ್ರ - ಇಂದು ಈ ನರೇಂದ್ರ ಎಂದು ಘೋಷ ವಾಕ್ಯದೊಂದಿಗೆ ಸ್ವಾಮಿ ವಿವೇಕಾನಂದರನ್ನು ತಮಗೆ ಸಮೀಕರಿಸಿಕೊಂಡಿರುವುದು ಅತ್ಯಂತ ದೊಡ್ಡ ಸಾಂಸ್ಕೃತಿಕ ವಿಕೃತಿಯಾಗಿದೆ. ಈ ಸಮೀಕರಣವನ್ನು ಎಚ್ಚರಿಕೆಯಿಂದ ನೋಡಬೇಕಾಗಿದೆ ಎಂದು ಚಿಂತಕ ಕೆ.ಪಿ.ನಟರಾಜ ಹೇಳಿದರು.
ಅವರು ತುಮಕೂರಿನ ಸಮರ್ಥ್ ಫೌಂಡೇಷನ್ ವತಿಯಿಂದ ರೆಡ್ ಕ್ರಾಸ್ ಬಿಲ್ಡಿಂಗ್ನಲ್ಲಿ ಸಮರ್ಥ್ ಸಾಹಿತ್ಯ ಭಂಡಾರದ ಉದ್ಘಾಟನೆ ಹಾಗೂ ಸ್ವಾಮಿವಿವೇಕಾನಂದ ಜನ್ಮದಿನಾಚರಣೆ ಸಮಾರಂಭದಲ್ಲಿ ಸ್ವಾಮಿ ವಿವೇಕಾನಂದರ ವಿಚಾರಗಳು ಎಂಬ ವಿಷಯದ ಬಗ್ಗೆ ಡಾ. ಶಂಕರ್ ರಚಿಸಿರುವ ಕೃತಿ ಕುರಿತು ಮಾತನಾಡಿದರು.
ಸ್ವಾಮಿ ವಿವೇಕಾನಂದರನ್ನು ಕುರಿತಾದ ಹಾಗೂ ಬಹುಮಂದಿಗೆ ಅವರ ಬಗ್ಗೆ ಗೊತ್ತಿಲ್ಲದಂತಹ ಎಷ್ಟೋ ಅಂಶಗಳನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ. ಈ ಕೃತಿಯನ್ನು ಓದುತ್ತಾ ಹೋದಂತೆಲ್ಲಾ ಆಸಕ್ತಿ ಹೆಚ್ಚಿಸಿ ರೋಮಾಂಚನ ಉಂಟು ಮಾಡುತ್ತದೆ. ಸ್ವಾಮಿ ವಿವೇಕಾನಂದರನ್ನು ಕುರಿತಂತೆ ಈ ಕೃತಿಯಲ್ಲಿ ವಿವರಿಸಿರುವಂತೆ ವಿವೇಕಾನಂದರು ಸುಮಾರು 31 ಕಾಯಿಲೆಗಳಿಂದ ನರಳುತ್ತಿದ್ದರು. ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆ, ವಿಪರೀತ ತಲೆಸಿಡಿತ (ಮೈಗ್ರೇನ್) ಮುಂತಾದ ಕಾಯಿಲೆಗಳಿದ್ದವು. ಇಷ್ಟೊಂದು ಅನಾರೋಗ್ಯದ ನಡುವೆ ದೇಶದುದ್ದಕ್ಕೂ ಸಂಚರಿಸಿ ದೇಶಕ್ಕಾಗಿ ಶ್ರಮಿಸಿ ಮಹಾನ್ ವ್ಯಕ್ತಿಗಳಾದರು ಎಂದು ತಿಳಿದಾಗ ಅವರ ಬಗ್ಗೆ ಗೌರವ ಹೆಚ್ಚಾಗುತ್ತದೆ ಎಂದರು.
ಇಷ್ಟೇ ಅಲ್ಲದೆ ವಿವೇಕಾನಂದರು ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿದ್ದರು ಹಾಗೂ ಆಹಾರ ಸಿಗದಿದ್ದಾಗ ಅನೇಕ ಬಾರಿ ಉಪವಾಸವಿದ್ದರು. ಇಂತಹ ಸಂಕಷ್ಟಗಳ ನಡುವೆ ಹಾಗೂ ರಾಮಕೃಷ್ಣ ಮಿಷನ್ ಅನ್ನು ಕಟ್ಟುವಲ್ಲಿ ಅಪಾರವಾಗಿ ಶ್ರಮಿಸಿದರು.
ಮರೆತಿವೆ: ಇಂದು ರಾಮಕೃಷ್ಣ ಸಂಘಗಳು, ಆಶ್ರಮಗಳು ಕೇವಲ ಭಜನಾ ಮಂಡಳಿಗಳಾಗಿವೆ. ವಿವೇಕಾನಂದರ ತತ್ವಗಳನ್ನು ಹೊಸತಲೆಮಾರಿಗೆ ತಿಳಿಸಿಕೊಡುವ ಜವಾಬ್ದಾರಿಯನ್ನು ಈ ಆಶ್ರಮಗಳು ಮರೆತಿವೆ. ಅಷ್ಟೇ ಅಲ್ಲದೆ ರಾಮಕೃಷ್ಣ ಆಶ್ರಮಗಳು ಸಂಘ ಪರಿವಾರದ ಅಂಗಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ವಿವೇಕಾನಂದರ ಕುರಿತಾದ ಜಾಗೃತಿಯನ್ನು ಆಶ್ರಮಗಳು ಕೊಡುತ್ತಿಲ್ಲ. ಅತ್ಯಂತ ವಿಷಾದದ ಸಂಗತಿಯೆಂದರೆ ಸ್ವಾಮಿ ವಿವೇಕಾನಂದರನ್ನು ಓದಿನಿಂದ ಕೈಬಿಟ್ಟಿದ್ದೇವೆ. ಆದ್ದರಿಂದ ಬೆಳೆಯುವ ಮನಸ್ಸುಗಳಿಗೆ ಸ್ವಾಮಿ ವಿವೇಕಾನಂದರು ಸರಿಯಾಗಿ ಪರಿಚಯವಾಗಬೇಕಾಗಿದೆ ಎಂದು ಹೇಳಿದರು.
ಹೈಜಾಕ್: ಎಸ್. ನಾಗಣ್ಣ ಮಾತನಾಡಿ ಬುದ್ಧ, ಬಸವಣ್ಣ, ವಿವೇಕಾನಂದ, ಅಂಬೇಡ್ಕರ್ ಮುಂತಾದವರನ್ನು ಕೆಲವು ವರ್ಗದವರು ಹೈಜಾಕ್ ಮಾಡಿದ್ದು ಅವರ ಚಿಂತನೆಗಳು ಮಾತ್ರ ಯಾರಿಗೂ ಬೇಕಾಗಿಲ್ಲ. ಇಂತಹ ಸಾಧಕರ ತತ್ವ, ಸಿದ್ಧಾಂತ, ಚಿಂತನೆಗಳು ಇಂದಿನ ರೋಗಗ್ರಸ್ತ ಸಮಾಜಕ್ಕೆ ಬೇಕಾಗಿವೆ ಎಂದರು.
ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ. ಬಸವಯ್ಯ್ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಎಚ್. ನಿಂಗಪ್ಪ ವಹಿಸಿದ್ದರು. ಲೇಖಕಿ ಬಾ.ಹ.ರಮಾಕುಮಾರಿ, ಶಾಂತಸಣ್ಣಗುಡ್ಡಯ್ಯ ಹಾಗೂ ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಸಿ.ಎನ್. ಸುಗುಣಾದೇವಿ ಮಾತನಾಡಿದರು. ಸುರಭಿ ಪ್ರಾರ್ಥಿಸಿದರು, ಉಪನ್ಯಾಸಕ ಎಂ.ಎಚ್. ನಾಗರಾಜು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮರ್ಥ್ ಫೌಂಡೇಷನ್ನ ಸಂಸ್ಥಾಪಕಿ ರಾಣಿ ಚಂದ್ರಶೇಖರ್ ನಿರೂಪಿಸಿದರು. ಫೌಂಡೇಷನ್ನ ಸದಸ್ಯ ಅಶೋಕಕುಮಾರ್ ವಂದಿಸಿದರು.