ಎಚ್‌ಡಿಕೆ ತೋರಿಕೆ ಮಾತು ನಿಲ್ಲಿಸಲಿ
ತುಮಕೂರು: ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ತುಮಕೂರು ಜಿಲ್ಲೆ ಹಾಗೂ ಬಯಲು ಸೀಮೆಗೆ ಸಂಬಂಧಿಸಿದ ಕುಡಿಯುವ ನೀರಿನ ವಿಷಯದಲ್ಲಿ ತೋರಿಕೆಯ ಮಾತನಾಡುವುದನ್ನು ಮೊದಲು ನಿಲ್ಲಿಸುವಂತೆ ಕಾನೂನು, ಸಂಸದೀಯ ಹಾಗೂ ನ್ಯಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಸಲಹೆ ನೀಡಿದ್ದಾರೆ.
ಅವರು ತುಮಕೂರಿನಲ್ಲಿ ಅಂಗವಿಕಲರ ಸವಲತ್ತು ವಿತರಣೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕುಮಾರಸ್ವಾಮಿ ನೀರಿನ ವಿಷಯದಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು, ಹಾಸನ ಜಿಲ್ಲೆಯ ಶಾಸಕರೊಂದಿಗೆ ಸೇರಿ, ಹೇಮಾವತಿ ನಾಲಾ ಅಗಲೀಕರಣ, ಎತ್ತಿನಹೊಳೆ, ಭದ್ರಾ ಮೇಲ್ದಂಡೆಯಂತಹ ಕುಡಿಯುವ ನೀರಿನ ಯೋಜನೆ ಜಾರಿಗೆ ಸಹಕರಿಸಲಿ. ಕೋಟ್ಯಂತರ ಜನತೆಯ ಬವಣೆ ನೀಗಿಸಲು ಮುಂದಾಗಲಿ. ಪ್ರತಿ ಪಕ್ಷದ ನಾಯಕರಾಗಿ ಜನತೆಯ ಹಿತದೃಷ್ಟಿಯಿಂದ ಸರ್ಕಾರದ ಜತೆ ಸಹಕರಿಸಲಿ ಎಂದು ಟಿಬಿಜೆ ಮಾರ್ಮಿಕವಾಗಿ ನುಡಿದರು.
ಬಜೆಟ್‌ನಲ್ಲಿ ಘೋಷಿಸಿದಂತೆ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಮುಂದಿನ 5 ವರ್ಷಗಳಲ್ಲಿ 50 ಸಾವಿರ ಕೋಟಿ ರು.ಗಳನ್ನು ನೀರಿನ ಯೋಜನೆಗಳಿಗೆ ಖರ್ಚು ಮಾಡಲಾಗುವುದು. ಈ ಗಾಗಲೇ ಅಜ್ಜಂಪುರ, ಚಿತ್ರದುರ್ಗದ ಬಳಿ ಭದ್ರಾ ಮೇಲ್ದಂಡೆ ಯೋಜನೆ ನಾಲಾ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದೇ ಯೋಜನೆಯ ತುಮಕೂರು ನಾಲಾ ಯೋಜನೆ ಕಾಮಗಾರಿಗೆ ಅನುಮತಿ ಪಡೆದಿದ್ದೇವೆ. ಒಟ್ಟಾರೆ 24 ಟಿಎಂಸಿ ನೀರು ಪಡೆಯಲಿದ್ದೇವೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕೃಷ್ಣಾ ನ್ಯಾಯಾಧಿಕರಣದ 2 ನೇ ತೀರ್ಪು ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಸಹಕಾರಿಯಾಗಲಿದ್ದು, ಇನ್ನೂ ಹೆಚ್ಚಿನ ನೀರು ಪಡೆಯಲು ಸಾಧ್ಯವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಇದೇ ತಿಂಗಳ 31 ರಂದು ಚಿಕ್ಕಬಳ್ಳಾಪುರದಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಲಿದೆ. 3800 ಕೋಟಿ ರು. ಕಾಮಗಾರಿಗೆ ಮೊದಲನೇ ಹಂತದಲ್ಲಿ ಟೆಂಡರ್ ಕರೆಯಲಾಗುವುದು. ಕೇಂದ್ರ ಜಲಾನಯನ ಸಂಸ್ಥೆಯಿಂದ ಡಿಪಿಆರ್ ತಯಾರಿಸಲು ಸಹಕಾರ ಪಡೆಯಲಾಗುವುದು ಎಂದು ತಿಳಿಸಿದರು.
ಹೇಮಾವತಿ ನಾಲೆ ಆಧುನೀಕರಣ: ಹೇಮಾವತಿ ನಾಲಾ ರಿಪೇರಿ ಆಧುನೀಕರಣ ಕಾಮಗಾರಿಯನ್ನು ಫೆ. 2 ನೇ ವಾರದಲ್ಲಿ ಕೈಗೊಳ್ಳಲಾಗುವುದು. ತುಮಕೂರು ಜಿಲ್ಲೆಗೆ 24 ಟಿಎಂಸಿ ನೀರು ನಿಗದಿಯಾಗಿದ್ದು, 22 ಟಿಎಂಸಿ ನೀರು ಪಡೆಯಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಶಿಫಾರಸು ಮಾಡಿಸಲಿ: ಕುಣಿಗಲ್ ಕೆರೆಗೆ ಹೇಮಾವತಿ ನೀರು ಹರಿಸುವಲ್ಲಿ ಟಿಬಿಜೆ ವಿಫಲರಾಗಿದ್ದಾರೆ ಎಂಬ ಕುಣಿಗಲ್ ಶಾಸಕ ನಾಗರಾಜಯ್ಯ ಆರೋಪ ಒಪ್ಪಿಕೊಂಡ ಸಚಿವರು, ಗುಬ್ಬಿ, ತುರುವೇಕೆರೆ ಜೆಡಿಎಸ್ ಶಾಸಕರಂತೆ ಕುಣಿಗಲ್ ಜೆಡಿಎಸ್ ಶಾಸಕರು ಎಚ್.ಡಿ. ಕುಮಾರಸ್ವಾಮಿ ಅವರಿಂದ ಒತ್ತಡ ತಂದು ಕುಣಿಗಲ್ ಕೆರೆಗೂ ಹೇಮಾವತಿ ನೀರು ಹರಿಸಲಿ. ತಮ್ಮದೇನೂ ಅಭ್ಯಂತರವಿಲ್ಲ ಎಂದು ಎಚ್‌ಡಿಕೆ ನೀರಿನ ರಾಜಕಾರಣ ಕುರಿತಂತೆ ಪರೋಕ್ಷವಾಗಿ ಲೇವಡಿ ಮಾಡಿದರು.